ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ನ.25ಕ್ಕೆ; 20 ವರ್ಷದಲ್ಲಿ ಭರ್ಜರಿ ಅಭಿವೃದ್ಧಿಯಾಗಲಿದೆ ಇಲ್ಲಿ ! | PM to Lay Foundation Stone to Noida Airport in on Nov 25

ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ನ.25ಕ್ಕೆ; 20 ವರ್ಷದಲ್ಲಿ ಭರ್ಜರಿ ಅಭಿವೃದ್ಧಿಯಾಗಲಿದೆ ಇಲ್ಲಿ !

ಸಾಂಕೇತಿಕ ಚಿತ್ರ

ನೊಯ್ಡಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ನವೆಂಬರ್​ 25ರಂದು ಪ್ರಧಾನಿ ನರೇಂದ್ರ ಮೋದಿಯವರು ಶಂಕು ಸ್ಥಾಪನೆ ಮಾಡಲಿದ್ದಾರೆ. ಈ ಏರ್​ಪೋರ್ಟ್​ ನಿರ್ಮಾಣ ಕಾರ್ಯ 2024ರ ಹೊತ್ತಿಗೆ ಮುಗಿದು, ವಿಮಾನ ಹಾರಾಟ ಕಾರ್ಯಾಚರಣೆ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಬರೋಬ್ಬರಿ 20 ವರ್ಷದ ಯೋಜನೆಯಾಗಿದೆ. ಅಂದರೆ 2024ರ ಹೊತ್ತಿಗೆ ವಿಮಾನ ನಿಲ್ದಾಣ ಕಟ್ಟಿ ಮುಗಿದರೂ, ಅಭಿವೃದ್ಧಿ ಯೋಜನೆಗಳು ನಡೆಯುತ್ತಲೇ ಇರುತ್ತವೆ. ಅಂದರೆ ಮುಂದಿನ 20ವರ್ಷಗಳಲ್ಲಿ ಇಲ್ಲಿ, 70 ಮಿಲಿಯನ್​ (7 ಕೋಟಿ)ಗಳಷ್ಟು ಪ್ರಯಾಣಿಕರ ಸಾಮರ್ಥ್ಯವಿರುವ ಟರ್ಮಿನಲ್​ ಕಟ್ಟಡ, ಒಂದು ಮಿಲಿಯನ್​ ಟನ್​ ಸಾಮರ್ಥ್ಯವಿರುವ ಕಾರ್ಗೋ ಟರ್ಮಿನಲ್​, 186 ಏರ್​ಪೋರ್ಟ್​ ಸ್ಟ್ಯಾಂಡ್​​ಗಳು, ಎಕ್ಸ್​ಪ್ರೆಸ್​ ವೇಯಿಂದ ನೇರವಾದ ಸಂಪರ್ಕ, ಮೆಟ್ರೋ, ಹೈಸ್ಪೀಡ್​ ರೈಲು ವ್ಯವಸ್ಥೆಗಳನ್ನು ನಿರ್ಮಿಸುವುದು ಮಹೋದ್ದೇಶವಾಗಿದೆ. ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದರೆ ಉತ್ತರ ಪ್ರದೇಶದಲ್ಲಿ ಒಟ್ಟು 5 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಇದ್ದಂತಾಗುತ್ತದೆ. 

ಉತ್ತರಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ಚುನಾವಣೆ ದೃಷ್ಟಿಯಿಂದ ಈ ಮಹತ್ತರ ಯೋಜನೆ ಅಲ್ಲಿನ ಬಿಜೆಪಿ ಸರ್ಕಾರಕ್ಕೆ ಪ್ಲಸ್​ ಪಾಯಿಂಟ್ ಆಗಲಿದೆ. ಜೇವಾರ್​​ನಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್​ ಸೇರಿ ಅಡಿಗಲ್ಲು ಸ್ಥಾಪನೆ ಮಾಡಲಿದ್ದು, ಅಂದು ನಡೆಯಲಿರುವ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ವಿಮಾನ ನಿಲ್ದಾಣಕ್ಕೆ ಯಮುನಾ ಎಕ್ಸ್​ಪ್ರೆಸ್​ ವೇ, ನೊಯ್ಡಾ ಮೆಟ್ರೋ ಮತ್ತು ರೈಲ್ವೆ ಸ್ಟೇಶನ್​​ಗಳು ಸಂಪರ್ಕಿತಗೊಳ್ಳಲಿವೆ. ಇನ್ನು, ದೆಹಲಿ ಮತ್ತು ವಾರಾಣಸಿ ನಡುವೆ ನಿರ್ಮಿಸಲು ಪ್ರಸ್ತಾಪಿಸಲಾದ 800 ಕಿಮೀ ಉದ್ದದ ರೈಲು ಮಾರ್ಗ, ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯೂ ಸ್ಟೇಶನ್​ ಹೊಂದಿರಲಿದೆ. ಇನ್ನು ಎರಡು CAT III ರನ್​ವೇಗಳು ಇರಲಿದ್ದು, ಅವುಗಳನ್ನು ಉತ್ತರ ರನ್​ವೇ ಮತ್ತು ದಕ್ಷಿಣ ರನ್​ ವೇ ಎಂದು ಕರೆಯಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅತಿಹೆಚ್ಚು ಸಂಖ್ಯೆಯಲ್ಲಿ ವಿಮಾನಗಳು ಕಾರ್ಯಾಚರಣೆ ನಡೆಸಲು 186 ಏರ್​ಪೋರ್ಟ್ ಸ್ಟ್ರಾಂಡ್​ಗಳ ನಿರ್ಮಾಣಕ್ಕೆ ಮುಂದಾಗಿದ್ದು. ಇನ್ನುಳಿದಂತೆ ಏರ್​ಪೋರ್ಟ್​ ಹೊಟೆಲ್​, ವಿವಿಐಪಿ ಟರ್ಮಿನಲ್​, ಏರ್​ಪೋರ್ಟ್​ ರಕ್ಷಣಾ ಮತ್ತು ಅಗ್ನಿಶಾಮಕದಳದ ಕಟ್ಟಡಗಳು ಇರಲಿವೆ. ಹಾಗೇ, ಏರ್​ಪೋರ್ಟ್ ಕಾಂಪ್ಲೆಕ್ಸ್​​ನಲ್ಲಿ ಮಳೆನೀರಿನ ಕೊಯ್ಲು ಮಾಡುವ ಸಂಬಂಧ ಕೊಳಗಳ ನಿರ್ಮಾಣ ಮಾಡಲಾಗುವುದು ಎಂದೂ ವರದಿಯಾಗಿದೆ. ಅದರೊಂದಿಗೆ ಕಾಂಪ್ಲೆಕ್ಸ್​​ನಲ್ಲಿ 167 ಎಕರೆ ಪ್ರದೇಶವನ್ನು ರಿಯಲ್​ ಎಸ್ಟೇಟ್​ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ.

ಈ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಮುನಾ ಅಂತಾರಾಷ್ಟ್ರೀಯ ವಿಮಾನ ಪ್ರೈವೇಟ್​ ಲಿಮಿಟೆಡ್​ ಅಭಿವೃದ್ಧಿಗೊಳಿಸುತ್ತಿದೆ. ಜ್ಯೂರಿಚ್ ಏರ್​ಪೋರ್ಟ್​ ಇಂಟರ್ನ್ಯಾಷನಲ್​​ನ ಅಂಗಸಂಸ್ಥೆಯಾಗಿದೆ. ಯಮುನಾ ಅಂತಾರಾಷ್ಟ್ರೀಯ ವಿಮಾನ ಪ್ರೈವೇಟ್​ ಲಿಮಿಟೆಡ್​​ನೊಂದಿಗೆ 2020ರ ಅಕ್ಟೋಬರ್​ 7ರಂದು ರಿಯಾಯಿತಿ ಒಪ್ಪಂದಕ್ಕೆ ಉತ್ತರ ಪ್ರದೇಶ ಸರ್ಕಾರ ಸಹಿ ಹಾಕಿದೆ. ಯುಪಿ ಸರ್ಕಾರದೊಟ್ಟಿಗೆ ಸೇರಿ ಈ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಯಮುನಾ ಅಂತಾರಾಷ್ಟ್ರೀಯ ವಿಮಾನ ಪ್ರೈವೇಟ್​ ಲಿಮಿಟೆಡ್​​ ಹೊಂದಿರುತ್ತದೆ.

ಇದನ್ನೂ ಓದಿ: ಆಂಧ್ರ ಪ್ರದೇಶದಲ್ಲಿನ ಅನ್ನಮಯ್ಯ ಡ್ಯಾಂನಿಂದ ದಿಢೀರ್​ ಪ್ರವಾಹ;18 ಜನರು ಜಲಸಮಾಧಿ, ಅನೇಕರು ನಾಪತ್ತೆ

TV9 Kannada

Leave a comment

Your email address will not be published. Required fields are marked *