ನ್ಯಾಷನಲ್ ಹೆರಾಲ್ಡ್ ಪ್ರಕರಣ: ಅಂದು ಜೈಲಿಗೆ ಕಳಿಸಿದ್ದಕ್ಕೆ ಮೋದಿ- ಶಾ ಈಗ ಸೇಡು ತೀರಿಸಿಕೊಳ್ತಿದಾರಾ ? ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ | National Herald Case revenge from Narendra modi and Amit Shah duo against Gandhi family a political debate


ನ್ಯಾಷನಲ್ ಹೆರಾಲ್ಡ್ ಪ್ರಕರಣ: ಅಂದು ಜೈಲಿಗೆ ಕಳಿಸಿದ್ದಕ್ಕೆ ಮೋದಿ- ಶಾ ಈಗ ಸೇಡು ತೀರಿಸಿಕೊಳ್ತಿದಾರಾ ? ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ

ಅಂದು ಜೈಲಿಗೆ ಕಳಿಸಿದ್ದಕ್ಕೆ ಮೋದಿ- ಶಾ ಈಗ ಸೇಡು ತೀರಿಸಿಕೊಳ್ತಿದಾರಾ ? ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ

National Herald Case: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿರನ್ನು ಇ.ಡಿ. ಇಂದು ಸುದೀರ್ಘ ವಿಚಾರಣೆಗೊಳಪಡಿಸಿದೆ. ಜೂ. 23ರಂದು ಸೋನಿಯಾರನ್ನು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದೆ. ಇದರಿಂದ ಮೋದಿ-ಅಮಿತ್ ಶಾ ಸೋನಿಯಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಿದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.

ನ್ಯಾಷನಲ್ ಹೆರಾಲ್ಡ್ ಆಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರನ್ನು ಇ.ಡಿ. ಅಧಿಕಾರಿಗಳು ಇಂದು ಸುದೀರ್ಘ ವಿಚಾರಣೆಗೊಳಪಡಿಸಿದ್ದಾರೆ. ಜೂನ್ 23ರಂದು ಸೋನಿಯಾಗಾಂಧಿರನ್ನು ವಿಚಾರಣೆಗೆ ಹಾಜರಾಗಲು ಇ.ಡಿ. ಸಮನ್ಸ್ ನೀಡಿದೆ. ಆದರೇ, ಈ ಕ್ರಮಗಳ ಮೂಲಕ ಪ್ರಧಾನಿ ಮೋದಿ-ಅಮಿತ್ ಶಾ ಜೋಡಿ ಸೋನಿಯಾಗಾಂಧಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಿದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಬಗ್ಗೆ ದೇಶದ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಅಮಿತ್ ಶಾ ಜೈಲಿಗೆ ಕಳಿಸಿದ್ದಕ್ಕೆ ಈಗ ಪ್ರತೀಕಾರವೇ?
ದೇಶದಲ್ಲಿ ಇಂದು ಕಾಂಗ್ರೆಸ್ ಪಕ್ಷ ದೊಡ್ಡ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರನ್ನು ನ್ಯಾಷನಲ್ ಹೆರಾಲ್ಡ್ ಆಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ನ್ಯಾಷನಲ್ ಹೆರಾಲ್ಡ್ ಆಕ್ರಮ ಹಣ ವರ್ಗಾವಣೆ ಪ್ರಕರಣವು 2014ರಿಂದಲೂ ಕೋರ್ಟ್ ನಲ್ಲಿದೆ. ಮತ್ತೊಂದೆಡೆ ಇ.ಡಿ. ಕೂಡ ತನಿಖೆ ನಡೆಸುತ್ತಿದೆ.

ಆದರೇ, ಈಗ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿರನ್ನು ಇ.ಡಿ. ಅಧಿಕಾರಿಗಳು ಆಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕರೆದಿರುವುದು ಪ್ರತೀಕಾರದ ರಾಜಕೀಯದ ಸ್ಪಷ್ಟ ಉದಾಹರಣೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಏಕೆಂದರೇ, ಕಾಂಗ್ರೆಸ್ ಪಕ್ಷ ಹಾಗೂ ಸೋನಿಯಾಗಾಂಧಿರಿಂದ ಕೇಂದ್ರದ ಈಗಿನ ಗೃಹ ಸಚಿವ ಅಮಿತ್ ಶಾ ಜೈಲಿಗೆ ಹೋಗಿದ್ದರು. 2010ರ ಜುಲೈ 25ರಂದು ಸೋಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೊಳಗಾಗಿ ಅಮಿತ್ ಶಾ ಅಹಮದಾಬಾದ್‌ ನ ಸಬರಮತಿ ಜೈಲುಪಾಲಾಗಿದ್ದರು.

ಜೊತೆಗೆ ನಕಲಿ ಎನ್ ಕೌಂಟರ್ ಪ್ರಕರಣಗಳಲ್ಲಿ ಸಿಲುಕಿಕೊಂಡು ಕೋರ್ಟ್ ನಿಂದ ಗುಜರಾತ್ ರಾಜ್ಯದಿಂದಲೇ ಗಡೀಪಾರಾಗಿದ್ದರು. ಈ ಅಪಮಾನಗಳಿಗೆ ಈಗ ಅಮಿತ್ ಶಾ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ ಎಂಬ ವಿಶ್ಲೇಷಣೆಯು ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿದೆ. ತಮ್ಮನ್ನು ಜೈಲಿಗೆ ಕಳಿಸಿದ ಕಾಂಗ್ರೆಸ್ ನಾಯಕರನ್ನ ಈಗ ಇ.ಡಿ. ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸುವಂತೆ ಮಾಡಿದ್ದಾರೆ. ಜೊತೆಗೆ ರಾಹುಲ್ ಗಾಂಧಿರನ್ನು ಜೈಲಿಗೆ ಕಳಿಸಿದರೂ, ಕಳಿಸಬಹುದು ಎಂಬ ಭೀತಿ ಕೂಡ ಕಾಂಗ್ರೆಸ್ ನಾಯಕರಲ್ಲಿದೆ.

ಏಕೆಂದರೇ, 2016ರ ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ನಾಯಕರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿದ್ದಕ್ಕಾಗಿ ಡಿ.ಕೆ.ಶಿವಕುಮಾರ್ ಮೇಲೆ ಐ.ಟಿ. ಇ.ಡಿ. ದಾಳಿ ನಡೆಸಿದ್ದವು. ಗುಜರಾತ್‌ ಕಾಂಗ್ರೆಸ್ ಶಾಸಕರನ್ನ ಬಿಜೆಪಿಗೆ ಹೋಗಲು ಬಿಡದೇ ತಡೆದಿದ್ದಕ್ಕಾಗಿಯೇ ತಮ್ಮ ಮೇಲೆ ಐ.ಟಿ. ಇ.ಡಿ. ದಾಳಿ ನಡೆದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಕಷ್ಟು ಬಾರಿ ಬಹಿರಂಗವಾಗಿ ಹೇಳಿದ್ದಾರೆ. ಬಳಿಕ ಡಿಕೆಶಿ, ಇ.ಡಿ. ಕೇಸ್ ನಲ್ಲಿ ಜೈಲು ಪಾಲಾಗಿದ್ದರು.
ಈಗ ಅದೇ ರೀತಿ ರಾಹುಲ್ ಗಾಂಧಿ, ಸೋನಿಯಾಗಾಂಧಿರನ್ನು ಇ.ಡಿ. ಸಂಸ್ಥೆಯನ್ನು ಬಳಸಿಕೊಂಡು ಟಾರ್ಗೆಟ್ ಮಾಡಿ, ಜೈಲಿಗೆ ಕಳಿಸುವ ಪ್ಲ್ಯಾನ್ ಅನ್ನು ಅಮಿತ್ ಶಾ ಹೆಣೆದಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ.

ಪಿ.ಚಿದಂಬರಂ ಮೇಲೂ ಪ್ರತೀಕಾರ -ಸಿಬಿಐ ಕೇಸ್ ನಲ್ಲಿ ಜೈಲಿಗೆ ಹೋಗಿದ್ದ ಚಿದು

ಕಾಲ ಬದಲಾಗುತ್ತಲೇ ಇರುತ್ತೆ. ಮೇಲೇರಿದವರು ಕೆಳಗಿಳಿಯುತ್ತಾರೆ. ಕೆಳಗಿದ್ದವರು ಮೇಲೇರುತ್ತಾರೆ. ಇದು ಪಿ.ಚಿದಂಬರಂ ಹಾಗೂ ಅಮಿತ್ ಶಾ ವಿಷಯದಲ್ಲಿ ಅಕ್ಷರಶಃ ನಿಜವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪಿ.ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದರು. ಆಗಲೇ ಅಮಿತ್ ಶಾ ಜೈಲು ಪಾಲಾಗಿದ್ದರು. ಆದರೇ, ಕಾಲಚಕ್ರ ಉರುಳಿದಂತೆ ಚಿದಂಬರಂ ಮಾಜಿ ಸಚಿವರಾದರು. ಅಮಿತ್ ಶಾ ಕೇಂದ್ರ ಗೃಹ ಸಚಿವರಾದರು. ಅಮಿತ್ ಶಾ ಗೃಹ ಸಚಿವರಾದ ಮೇಲೆ ಪಿ.ಚಿದಂಬರಂ ಭ್ರಷ್ಟಾಚಾರದ ಆರೋಪದ ಪ್ರಕರಣದಲ್ಲಿ ಬಂಧನವಾಗಿ ದೆಹಲಿಯ ತಿಹಾರ್ ಜೈಲು ಸೇರಿದ್ದರು. ಇದು ಕೂಡ ಅಮಿತ್ ಶಾರ ಪ್ರತೀಕಾರದ ಕ್ರಮ ಎಂದೇ 2019ರ ಆಗಸ್ಟ್ ತಿಂಗಳಲ್ಲಿ ವಿಶ್ಲೇಷಣೆಗಳು ನಡೆದಿದ್ದವು. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ನೇರವಾಗಿ ಚಿದಂಬರಂರನ್ನು ಜೈಲಿಗೆ ಕಳಿಸಿದ್ದನ್ನು ವೈಯಕ್ತಿಕ ಪ್ರತೀಕಾರದ ಕ್ರಮ ಎಂದೇ ಆಗ ಹೇಳಿದ್ದರು. ಈಗ ರಾಹುಲ್ ಗಾಂಧಿರನ್ನು ಇ.ಡಿ. ಬಂಧಿಸಿದರೇ, ಕಾಂಗ್ರೆಸ್ ನಾಯಕರು ಸಹಜವಾಗಿ ಮತ್ತೆ ಇದು ಮೋದಿ-ಅಮಿತ್ ಶಾ ಜೋಡಿಯ ವೈಯಕ್ತಿಕ ಪ್ರತೀಕಾರದ ಕ್ರಮ ಎಂದೇ ಹೇಳುತ್ತಾರೆ.

ಒಂದು ವಾರ ಇಂದಿರಾ ಗಾಂಧಿ ಜೈಲುಪಾಲು!

ದೇಶದಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ಉಕ್ಕಿನ ಮಹಿಳೆ ಎಂದೇ ಹೆಸರಾದ ಇಂದಿರಾಗಾಂಧಿರನ್ನು 1978 ರ ಡಿಸೆಂಬರ್ ತಿಂಗಳಲ್ಲಿ ಸಂಸತ್‌ನ ಹಕ್ಕುಚ್ಯುತಿ, ನಿಂದನೆಗಾಗಿ ಜೈಲಿಗೆ ಕಳಿಸಲಾಗಿತ್ತು. ಒಂದು ವಾರ ಜೈಲಲ್ಲಿದ್ದೂ ಬಳಿಕ ಇಂದಿರಾಗಾಂಧಿ ಬಿಡುಗಡೆಯಾಗಿದ್ದರು. ಮೊರಾರ್ಜಿ ದೇಸಾಯಿ ಸರ್ಕಾರವು
ಸಂಸತ್‌ನ ನಿರ್ಣಯದ ಮೂಲಕ ಇಂದಿರಾಗಾಂಧಿರನ್ನು ಜೈಲಿಗೆ ಕಳಿಸಿತ್ತು.

ಇದಕ್ಕೂ ಮುನ್ನ ಜೀಪ್ ಹಗರಣದಲ್ಲೂ 1977ರ ಕೊನೆಯ ಭಾಗದಲ್ಲಿ ಇಂದಿರಾಗಾಂಧಿರನ್ನು ಪೊಲೀಸರು ಬಂಧಿಸಿದ್ದರು. ಮಾರನೇ ದಿನ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಆದರೇ, ಇಂದಿರಾಗಾಂಧಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣದಿಂದ ಕೋರ್ಟ್ ಅಂದೇ ಬೇಷರತ್ತಾಗಿ ಬಿಡುಗಡೆ ಮಾಡಿತ್ತು. 1980ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಬೆಂಬಲಿಗರು ಇಂದಿರಾರನ್ನು ಜೈಲಿಗೆ ಕಳಿಸಿದ್ದನ್ನು ಜನರಿಂದ ಅನುಕಂಪ ಗಳಿಸಲು ಬಳಕೆ ಮಾಡಿದ್ದರು. ಮೋರಾರ್ಜಿ ದೇಸಾಯಿ ಸರ್ಕಾರವು ಇಂದಿರಾಗಾಂಧಿರನ್ನು ಜೈಲಿಗೆ ಕಳಿಸಿದ್ದು, ಚುನಾವಣೆಯಲ್ಲಿ ಜನತಾ ಪಕ್ಷದ ಸರ್ಕಾರಕ್ಕೆ ತಿರುಗುಬಾಣವಾಗಿತ್ತು.

ಆದರೇ ಈಗ ರಾಹುಲ್ ಗಾಂಧಿ, ಸೋನಿಯಾಗಾಂಧಿರನ್ನು ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಕಂಪನಿಯನ್ನು ಯಂಗ್ ಇಂಡಿಯಾ ಕಂಪನಿಯು ಖರೀದಿಸಿದ ಪ್ರಕರಣದಲ್ಲಿ ಜೈಲಿಗೆ ಕಳಿಸಲಾಗುತ್ತಾ ಇಲ್ಲವೇ ಎಂಬುದನ್ನು ಇನ್ನೂ ಕೆಲ ದಿನ ಕಾದು ನೋಡಬೇಕು. ಆದರೇ, ಈ ಹಿಂದೆಯೇ ಸೋನಿಯಾಗಾಂಧಿ ತಾವು, ಇಂದಿರಾಗಾಂಧಿ ಸೊಸೆ. ತಾವು ಯಾರಿಗೂ ಹೆದರಲ್ಲ ಎಂದು ತಮ್ಮ ಅತ್ತೆಯನ್ನು ಜೈಲಿಗೆ ಕಳಿಸಿದ್ದನ್ನು ನೆನಪಿಸಿಕೊಂಡೇ ಹೇಳಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಈಗ ಸೋನಿಯಾಗಾಂಧಿ, ರಾಹುಲ್ ಗಾಂಧಿ, ತಮ್ಮ ವಿರುದ್ಧದ ಆರೋಪಗಳಿಗೆ ಇ.ಡಿ.ಎದುರು ಹೇಗೆ ಉತ್ತರ ನೀಡ್ತಾರೆ, ಹೇಗೆ ಹಣಕಾಸು ವರ್ಗಾವಣೆಯನ್ನು ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಕಾಂಗ್ರೆಸ್ ಪಕ್ಷದಿಂದ ಬಡ್ಡಿರಹಿತವಾಗಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಹಣ ನೀಡಲಾಗಿತ್ತು. ಬಳಿಕ ಯಂಗ್ ಇಂಡಿಯಾ ಲಿಮಿಟೆಡ್ ಕಂಪನಿಯನ್ನು ಬರೀ 50 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಆರಂಭಿಸಿ, ಈ ಯಂಗ್ ಇಂಡಿಯಾ ಕಂಪನಿಯೇ 2 ಸಾವಿರ ಕೋಟಿ ರೂಪಾಯಿ ಬೆಲೆಬಾಳುವ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಕಂಪನಿಯನ್ನು ಖರೀದಿಸಿದೆ. ಇದು ಹೇಗೆ ಸಾಧ್ಯ ಎಂಬುದು ಇ.ಡಿ. ಅಧಿಕಾರಿಗಳ ಪ್ರಶ್ನೆ. ಜೊತೆಗೆ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ನಲ್ಲಿದ್ದ ಉಳಿದ ಷೇರುದಾರರ ಅಭಿಪ್ರಾಯ ಪಡೆಯದೇ ಈ ಕಂಪನಿಯನ್ನು ಯಂಗ್ ಇಂಡಿಯಾ ಖರೀದಿಸಿದೆ. ಇದರಲ್ಲೇ ಗೋಲ್ ಮಾಲ್ ನಡೆದಿದೆ ಎಂದು ಬಿಜೆಪಿಯ ಸುಬ್ರಮಣ್ಯಸ್ವಾಮಿ ಆರೋಪಿಸುತ್ತಿದ್ದಾರೆ.

TV9 Kannada


Leave a Reply

Your email address will not be published.