ನ್ಯೂಯಾರ್ಕ್​​ನ ಸಬ್​ವೇ ಸ್ಟೇಶನ್​​ಗಳಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿ; 13 ಮಂದಿಗೆ ಗಾಯ, ಉಗ್ರಕೃತ್ಯವೆಂದ ನೆಟ್ಟಿಗರು | 13 Shot and injured At In Subway Station In New York


ನ್ಯೂಯಾರ್ಕ್​​ನ ಸಬ್​ವೇ ಸ್ಟೇಶನ್​​ಗಳಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿ; 13 ಮಂದಿಗೆ ಗಾಯ, ಉಗ್ರಕೃತ್ಯವೆಂದ ನೆಟ್ಟಿಗರು

ಘಟನೆ ನಡೆದ ಸ್ಥಳ

ನ್ಯೂಯಾರ್ಕ್​​ನ ಬ್ರೂಕ್ಲಿನ್​ ನಗರದಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ 13 ಜನರು ಗಾಯಗೊಂಡಿದ್ದಾರೆ. ಈ ಘಟನೆ ಬ್ರೂಕ್ಲಿನ್​​ನಲ್ಲಿರುವ ರೈಲು ಸುರಂಗ ಮಾರ್ಗವೊಂದರ ಸ್ಟೇಶನ್​​​ಗಳಲ್ಲಿ ನಡೆದಿದ್ದು, ಆರೋಪಿ ಮುಖಕ್ಕೆ ಗ್ಯಾಸ್ ಮಾಸ್ಕ್​ ಧರಿಸಿದ್ದ ಮತ್ತು ನಿರ್ಮಾಣ ಕಾಮಗಾರಿ ನಡೆಸುವವರು ಧರಿಸುವ ವೆಸ್ಟ್ ಕೋಟ್ ಹಾಕಿಕೊಂಡಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.  ಸನ್​ಸೆಟ್​ ಪಾರ್ಕ್​​ನಲ್ಲಿರುವ 36ನೇ ಸ್ಟ್ರೀಟ್ ಸಬ್​ವೇ ಸ್ಟೇಶನ್​ನಲ್ಲಿ ನಾಲ್ವರಿಗೆ ಗುಂಡು ಹೊಡೆದ ಈತ ಗ್ರೀನ್​ವುಡ್​ ಹೈಟ್ಸ್​ನಲ್ಲಿರುವ 25ನೇ  ಸ್ಟೇಶನ್​​ನಲ್ಲಿ 9 ಮಂದಿಗೆ ಗುಂಡು ಹೊಡೆದಿದ್ದಾನೆ.

ಇಂದು ಮುಂಜಾನೆ 8.30ರ ಹೊತ್ತಿಗೆ (ಅಲ್ಲಿನ ಸಮಯ) ಈ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದು, ಘಟನೆ ನಡೆದ ಸ್ಥಳಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ರೈಲುಗಳ ಸಂಚಾರವೂ ಸ್ಥಗಿತಗೊಂಡಿತ್ತು ಎಂದು ಅಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ.  ಈ ಬಗ್ಗೆ ನ್ಯೂಯಾರ್ಕ್ ಪೊಲೀಸ್ ಡಿಪಾರ್ಟ್​ಮೆಂಟ್​ (NYPD) ಟ್ವೀಟ್ ಮಾಡಿದ್ದು, ಸದ್ಯ ಗುಂಡಿನ ದಾಳಿ ನಡೆದ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಮಾಡಲಾಗಿದೆ. ತನಿಖೆ ಕಾರಣಕ್ಕೆ ಈ ನಿಯಮ ವಿಧಿಸಲಾಗಿದೆ. ತುರ್ತು ವಾಹನಗಳು ಮಾತ್ರ ಹೋಗಬಹುದು. ಸ್ಫೋಟಕಗಳು ಪತ್ತೆಯಾಗಿದ್ದರೂ ಕೂಡ ಅವು ನಿಷ್ಕ್ರಿಯವಾಗಿದ್ದವು ಎಂದು ತಿಳಿಸಿದ್ದಾರೆ. ಹಾಗೇ ಶೂಟೌಟ್​ ನಡೆದ ಬಳಿಕದ ದೃಶ್ಯಗಳೂ ವೈರಲ್ ಆಗಿವೆ.

ಇನ್ನೂ ಯಾರನ್ನೂ ಬಂಧಿಸಿಲ್ಲ. ಇದೊಂದು ಉಗ್ರರ ದಾಳಿ ಎಂಬುದನ್ನೂ ದೃಢಪಡಿಸಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು. ಗಾಯಾಗಳುಗಳು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸೋಷಿಯಲ್ ಮೀಡಿಯಾ ಬಳಕೆ ದಾರರು ಇದೊಂದು ಉಗ್ರ ಕೃತ್ಯ ಎಂದೇ ವಾದಿಸುತ್ತಿದ್ದಾರೆ.

TV9 Kannada


Leave a Reply

Your email address will not be published.