ಹುಬ್ಬಳ್ಳಿ: ಚಿತೆ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳೋದು, ಹೆಣದ ಮೇಲೆ ಹಣ ಮಾಡೋದು. ಈ ಗಾದೆ ಮಾತು ಹೇಳೋಕೆ ಈ ಕೋವಿಡ್‌ ಸಂಕಷ್ಟದ ಸಮಯವೇ ಸೂಕ್ತ ಕಾಲ ಅನ್ಸುತ್ತೆ. ಮೊದ್ಲೇ ಹಠಾತ್ತನೇ ಸಂಭವಿಸ್ತಿರೋ ಸಾವು. ಅವ್ರನ್ನ ಉಳಿಸಿಕೊಳ್ಳೋ ವೇಳೆ ಆಗೋ ಸುಲಿಗೆ, ಸತ್ತ ಮೇಲೆ ಆಗ್ತಿರೋ ಸುಲಿಗೆ. ಧನಧಾಹಿಗಳ ವಿಕೃತಿಗೆ ಜನ ತತ್ತರಿಸ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಅಂತ್ಯಸಂಸ್ಕಾರದಲ್ಲೂ ಹಣಕ್ಕಾಗಿ, ಹಸಿದ ಮಾಂಸಕ್ಕೆ ಗುದ್ದಾಡೋ ಮೃಗಗಳಂತೆ ಜನ ಸಾಮಾನ್ಯರ ಮೇಲೆರಗ್ತಿದ್ದಾರೆ ದಂಧೆಕೋರರು.

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಧಾರವಾಡ ಜಿಲ್ಲೆಯಲ್ಲಿ ಸಂಪೂರ್ಣ ಉಚಿತ. ಎಲ್ಲಾ ಸರ್ಕಾರವೇ ನೋಡಿಕೊಳ್ಳುತ್ತೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಮಹಾನಗರ ಪಾಲಿಕೆಯಿಂದ ಉಚಿತ ಆ್ಯಂಬುಲೆನ್ಸ್ ಜೊತೆಗೆ ಸ್ಮಶಾನದ ಸಿಬ್ಬಂದಿಗೆ 6 ಸಾವಿರ ರೂಪಾಯಿ ಕೊಡ್ಲಾಗ್ತಿದೆ. ಇದನ್ನ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ್​​ ಹಿಟ್ನಾಳ್‌ ಅವರೇ ಹೇಳಿದ್ದಾರೆ. ಆದ್ರೆ ರಿಯಾಲಿಟಿ ಏನು..? ನಿಜಕ್ಕೂ ಉಚಿತವಾಗಿ ಅಂತ್ಯಸಂಸ್ಕಾರ ನಡೀತಿದ್ಯಾ? ನೋ ವೇ ಚಾನ್ಸೇ ಇಲ್ಲ. ನ್ಯೂಸ್‌ಫಸ್ಟ್ ರಹಸ್ಯ ಕಾರ್ಯಾಚರಣೆಯಲ್ಲಿ ಈ ಸತ್ಯ ಬಯಲಾಗಿದೆ.

ರಿಯಾಲಿಟಿ ಚೆಕ್‌ ಮಾಡಲು ಮುಂದಾದ ನ್ಯೂಸ್‌ಫಸ್ಟ್‌, ಮಹಾನಗರ ಪಾಲಿಕೆ ಸಹಾಯವಾಣಿಗೆ ಕಾಲ್ ಮಾಡಿತ್ತು. ನಮ್ಮ ಸಂಬಂಧಿಯೊಬ್ಬರ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್ ಬೇಕಿತ್ತು ಅಂತ ಹೇಳಿದ್ವಿ. ಆಗ ಅವರು ಆ್ಯಂಬುಲೆನ್ಸ್ ಡ್ರೈವರ್ ಶಿವು ಅನ್ನೋರ ನಂಬರ್ ಕೊಟ್ರು. ಅವ್ನಿಗ್‌ ಕಾಲ್‌ ಮಾಡಿದ್ರೆ ಆತ ಧಾರವಾಡ ಜಿಲ್ಲೆಯ ಕುಂದಗೋಳಕ್ಕೆ ನಾವ್ ಬರಲ್ಲ ಅಂತ ಖಾಸಗಿ ಆ್ಯಂಬುಲೆನ್ಸ್ ಡ್ರೈವರ್ ನಂಬರ್ ಕೊಟ್ಟಿದ್ದ. ಅಲ್ಲಿಗೆ ಇಲ್ಲೊಂದು ಮಾಫಿಯಾ ಸದ್ದಿಲ್ಲದೆ ಹೆಣದ ಮೇಲೆ ಹಣ ಮಾಡ್ತಿದೆ ಅನ್ನೋದು ಅರಿವಾಗಿತ್ತು. ಇಷ್ಟಾಗ್ತಿದ್ದಂತೆ ನಮ್ಮ ತಂಡ ಕಿಮ್ಸ್ ಶವಾಗಾರಕ್ಕೆ ಕಾಲಿಟ್ಟಿತ್ತು.

ಅಲ್ಲಿ ಕಣ್ಣಿಗೆ ಬಿದ್ದಿದ್ದು ತಾಯಿ ಮಗ ಮನೆಯ ಹಿರಿಯ ಸದಸ್ಯರನ್ನು ಕಳೆದುಕೊಂಡು ರೋಧಿಸ್ತಿದ್ದ ದೃಶ್ಯ. ಅಲ್ಲಿ ಅದಾಗ್ಲೇ ಶವ ಸಂಸ್ಕಾರಕ್ಕೆ ಏನ್‌ ಮಾಡಬೇಕು ಅಂತ ತಾಯಿ-ಮಗ ಇಬ್ಬರೂ ಕಿಮ್ಸ್ ಹೊರಗುತ್ತಿಗೆ ನೌಕರ ಮೈನುದ್ದೀನ್‌ ಹಾಗೂ ಆ್ಯಂಬುಲೆನ್ಸ್ ಡ್ರೈವರ್ ಅಜಿತ್ ಕರಡಿಕೊಪ್ಪ ಜೊತೆ ಮಾತನಾಡ್ತಾ ಇದ್ರು. ಆ್ಯಂಬುಲೆನ್ಸ್ ಡ್ರೈವರ್ ಅಲ್ಲಿ ಕಿಮ್ಸ್ ಸಿಬ್ಬಂದಿಯವ್ರಂತೆಯೇ ಪೋಸ್‌ ಕೊಡ್ತಾ ನಿಂತಿದ್ದ. ಅವನ ಜೊತೆ ಕೋವಿಡ್ ಡೆತ್‌ ಕೇಸ್ ವಿಲೇವಾರಿ ಉಸ್ತುವಾರಿ ವಹಿಸಿಕೊಂಡಿರುವ ಗುತ್ತಿಗೆದಾರ ಏಜೆನ್ಸಿಯೊಂದರ ಸೂಪರ್​​ವೈಸರ್ ಮೈನುದ್ದೀನ್‌ ಮೃತನ ಸಂಬಂಧಿಗಳಿಗೆ ಗೊತ್ತೇ ಆಗದಂತೆ ಹಣ ಪೀಕ್ತಿದ್ದ.

ಮೃತರ ಸಂಬಂಧಿ: ಬಾಡಿ ತಗೊಂಡ ಹೋಗಾಕ್ ಬಂದೀವ್ರಿ.
ಸಿಬ್ಬಂದಿ: ಎಲ್ಲಿ ಮಾಡೋರು?
ಮೃತರ ಸಂಬಂಧಿ: ಹೆಗ್ಗೇರಿಯೊಳಗ ಮಾಡೋನೇನ.. ಹೆಗ್ಗೇರಿಯೊಳಗ
ಮೈನುದ್ಧೀನ್: ಹೆಗ್ಗೇರಿಯೊಳಗ ಆದ್ರ ಆನ್ಲೈನ್ ರಿಜಿಸ್ಟ್ರೇಷನ್ ಮಾಡ್ಬೇಕ್ರಿ. ಎಂಟ್ರಿ ಮಾಡಬೇಕು ಅವುರ್ದು ಯಾವಾಗ ಗಾಡಿ ಬರ್ತೈತಿ ಅವಾಗ ಒಯ್ತಾರ. ಎಲ್ಲಾ ಕಂಪ್ಲೀಟ್ ಆದ್ಮೇಲೆ ಆನ್ಲೈನ್ ಗಾಡಿ ಬರ್ತೈತಿ ಆಮೇಲೆ ಒಯ್ಯೋದು.
ಮೃತರ ಸಂಬಂಧಿ: ಹು…
ಮೈನುದ್ಧೀನ್: ನಿಮ್ಮದ ಖರ್ಚ್ ಅಲ್ಲಿ ಅಂದ್ರ ಫ್ರೀಯಾಗತೈತಿ, ನಿಮಗ ಅಸ್ತಿಗಿಸ್ತಿ ಏನು ಸಿಗಾಂಗಿಲ್ಲ.
ಮೃತರ ಸಂಬಂಧಿ: ಹಾಂ.. ಎಲ್ಲಿ?
ಮೈನುದ್ಧೀನ್: ಹೆಗ್ಗೇರಿ ಮಾಡಿದ್ರ.. ಫ್ರೀ ಮಾಡ್ತಾರ ಎಲ್ಲಾ ಫ್ರೀ ಐತಿ ಗಾಡಿ ಫ್ರೀ, ಬಿಡೋದು ಎಲ್ಲಾ ಫ್ರೀ ಐತಿ. ಆದ್ರ ಏನು ಸಿಗಾಂಗಿಲ್ಲ ಸುಮ್ಮಕ ಅಲ್ಲಿ ಮುಖಾನೂ ತೋರ್ಸಾಂಗಿಲ್ಲ. ಇಲ್ಲೇನೈತಿ ನಿಮಗ ಅಸ್ತಿ ಸಿಗತೈತಿ ಏನ್ ಬೇಕೆಲ್ಲ ಮಾಡಬಹುದು ನೀವ್, ಪೂಜೆ ಪುನಸ್ಕಾರ ಏನೈತಿ ಎಲ್ಲಾ ಮಾಡಬಹುದ್.
ಮೃತರ ಸಂಬಂಧಿ: ಅಲ್ಲಿ ಎಷ್ಟ್ ತಗೋತಾರಿ..
ಮೈನುದ್ಧೀನ್: ಅದು ನಮಗ ಗೊತ್ತಿಲ್ರಮ್ಮ..
ಮೃತರ ಸಂಬಂಧಿ: ಎಷ್ಟ್ ಅಂದಾಜು.
ಸಿಬ್ಬಂದಿ: ಫೋನ್ ನಂಬರ್ ಕೊಡ್ತೀನಿ ಮಾತಾಡ್ರಿ ನೀವ್.
ಮೃತರ ಸಂಬಂಧಿ: ನೀವ ಮಾತಾಡಿ ಕೇಳ್ರಿ..
ಮೈನುದ್ಧೀನ್: ನಾವ್ ಮಾತಾಡಾಂಗಿಲ್ಲ ಹೇಳೋದಷ್ಟ ನಮ್ಮ ಕೆಲಸ, ಯಾಕಂದ್ರ ಬಹಳ ತಗೋಳಾತಿವಿ ಅಂತ ಆಗಿಬಿಡ್ತೈತಿ.. ನಾವು ಒಂದ್ ರೂಪಾಯಿ ತಗೊಳಾಂಗಿಲ್ಲ.
ಮೃತರ ಸಂಬಂಧಿ: ಅಲ್ಲ ನಮ್ಮದ ಹಂಗ್ ಸಮಸ್ಯೆ ಐತಿ..
ಅಜಿತ್: ನಿಮ್ಮದು ಸಮಸ್ಯೆ ಹಂಗ್ ಐತಿ ಆದ್ರ ನೋಡವರ ಕಣ್ಣಿಗೆ ಏನ್ ಅನ್ಸತೈತಿ ನಾವ್ ತಗೋಳಾತಿವಿ, ನಾವ ಮಾತಾಡಾತಿವಿ ಅನ್ಸತೈತಿ.
ಮೈನುದ್ಧೀನ್: ನಂಬರ್… 906…. ಮಾತಾಡ್ರಿ ಅವರ ಎಷ್ಟ ಕೊಡೂದ ಅಕ್ಕೇತಿ ಅಂತ… ಕಟಗಿದ ಅಷ್ಟ ಕೇಳ್ರಿ, ಗಾಡಿದ ಬೇರೆ ಆಕ್ಕೇತಿ.
ಮೃತರ ಸಂಬಂಧಿ: ಈಗ ಏನಂತ ಕೇಳಲ್ರಿ ಅವರನ್ನ..
ಮೈನುದ್ಧೀನ್: ಹಚ್ಚಿಕೊಡ್ರಿ ನಾ ಮಾತಾಡ್ತೀನಿ..
ಅಜಿತ್: ಗಾಡಿದಂತೂ.. ಇಲ್ಲೆ ಪ್ರೈವೇಟ್ ಗಾಡಿ ಬರ್ತೈತಿ.
ಮೃತರ ಸಂಬಂಧಿ: ನಮಗೊಂದಿಟ ಏನೂ ತೋರಸೂದಿಲ್ಲರೀ?
ಮೈನುದ್ಧೀನ್: ತೋರಸ್ತಾರ ರೀ.. ಇಲ್ಲೂ ತೋರಿಸ್ತಿವಿ ಅಲ್ಲಿ ತೋರಿಸ್ತಿವಿ.
ಅಜಿತ್: ನಿಮಗ ಪೂಜೆ ಪುರಸ್ಕಾರ ಎಲ್ಲಾ ಮಾಡಾಕ ಕೊಡ್ತಾರ
ಮೈನುದ್ಧೀನ್: ಹೆಗ್ಗೇರಿ ಮಾಡಿದ್ರ ಏನೂ ತೋರಸಂಗಿಲ್ಲರೀ.. ಸೀದಾ ಒಯ್ಯುದು ಮುಗಿಸೇ ಬೀಡೊದು.. ಅಣ್ಣಾ… ಯಾವ ಊರ್ ರೀ?
ಮೃತರ ಸಂಬಂಧಿ: ನಮ್ದು ಇಲ್ಲೆ ಹುಬ್ಬಳ್ಳಿ.
ಸಿಬ್ಬಂದಿ: ಇಲ್ಲೇ ಹುಬ್ಬಳ್ಳಿಯವ್ರ.. ಇಲ್ಲೇ ಮಾಡ್ತಾರಂತ ಅಣ್ಣಾ ಹೆಗ್ಗೇರಿ ಬ್ಯಾಡ ಅನ್ನಾಕತ್ತಾರ ಅವರ ಅಲ್ಲೇನ ಅಸ್ತಿ ಸಿಗಂಗಿಲ್ಲಂತ ಅದು ಎಷ್ಟು ಹೇಳ್ತಿರ ಅಣ್ಣಾ.. ಸ್ವಲ್ಪ ನೋಡಿ ಹೇಳ್ರಿ ನಮ್ದ ಪರಿಚಯದ್ದ ಐತಿ… ಹಾಂ… ಏಳೂವರೆ ಸಾವಿರ.
ಮೃತರ ಸಂಬಂಧಿ: ಹಾಂ..
ಮೈನುದ್ಧೀನ್: ಏಳೂವರೆ ಸಾವಿರ್..
ಮೃತರ ಸಂಬಂಧಿ: ಸ್ವಲ್ಪ ಏನರ
ಸಿಬ್ಬಂದಿ: ಸ್ವಲ್ಪ ನೋಡ ಅಣ್ಣಾ ಅದ್ರಾಗ.. ಲಾಸ್ಟ್‌ ಏಳು ಸಾವಿರ ರೂಪಾಯಿ.
ಮೃತರ ಸಂಬಂಧಿ: ಆಯ್ತ..
ಮೈನುದ್ಧೀನ್: ಆಯ್ತ್ ರೆಡಿ ಮಾಡ್ ಅಣ್ಣಾ.. ಮತ್ತ ಯಾರರೇ ಬರಾವ್ರ ಅದಾರೇನ್ರಿ.
ಮೃತರ ಸಂಬಂಧಿ: ಹೂಂ ಅದ ಮಾತಾಡ್ಯಾರೀ. ಯಾರೂ ಇಂಥಾ ಟೈಮ್‌ದಾಗ.
ಮೈನುದ್ಧೀನ್: ಓಯ್ತೀನಿ ಅಂದ್ರ ಈಗ ಕೊಟ್ಟಬಿಡ್ತೀನಿ.. ರೆಡಿ ಐತಲ್ಲೆ.

ಹೀಗೆ ಡೀಲ್‌ ಕುದುರಿದ ಮೇಲೆ ಹಣದ ಲೆಕ್ಕಾಚಾರ. ಯಾರಿಗೆ ಎಷ್ಟು ಅನ್ನೋ ಲೆಕ್ಕ. ಶವಸಂಸ್ಕಾರ ಮಾಡೋನಿಗೆ 7500 ರೂಪಾಯಿಯಿಂದ 10 ಸಾವಿರ, 2 ಕಿ.ಮೀ ಆ್ಯಂಬುಲೆನ್ಸ್ ಸಂಚಾರಕ್ಕೆ 2500 ಸಾವಿರದಿಂದ 3000 ರೂಪಾಯಿ ಹಾಗೂ ಶವ ಸಂಸ್ಕಾರಕ್ಕೆ ಬರೋ ಇಬ್ಬರಿಗೆ ತಲಾ 1 ಸಾವಿರ. ಅಲ್ಲಿಗೆ ಬರೊಬ್ಬರಿ ಸುಮಾರು 15 ಸಾವಿರ ರೂಪಾಯಿವರೆಗೂ ಉಂಡೆನಾಮ.

ಇದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೃತಪಟ್ಟವರ ಕಥೆ ಆಯ್ತು. ಇನ್ನು ಧಾರವಾಡ ಜಿಲ್ಲೆಯ ಕುಂದಗೋಳ, ಕಲಘಟಗಿ, ನವಲಗುಂದ, ಧಾರವಾಡ, ಅಳ್ನಾವರ ತಾಲೂಕುಗಳ ಕೋವಿಡ್ ಸೊಂಕಿತರು ಮೃತಪಟ್ಟರೆ ಅವ್ರಿಗೆ ಇದೇ ಖಾಸಗಿ ಆ್ಯಂಬುಲೆನ್ಸ್‌ಗಳೇ ಗತಿ. ಕಲಘಟಗಿಯ ಕೋವಿಡ್ ಸೋಂಕಿತನೊಬ್ಬ ಮೃತಪಟ್ಟ ಸಂದರ್ಭದಲ್ಲಿ ಕಿಮ್ಸ್ ಸಿಬ್ಬಂದಿ ಹಾಗೂ ಆ್ಯಂಬ್ಯುಲೆನ್ಸ್ ಡ್ರೈವರ್ ಹೇಗೆ ದುಡ್ಡು ಪೀಕಿದ್ರು ಅನ್ನೋದನ್ನ ಹೇಳ್ತೀವಿ ನೋಡಿ.

ಸಿಬ್ಬಂದಿ: ನೋಡ್ರಿ ಇಲ್ಲೆ ಲೋಕಲ್ ಊರೊಳಗ ಎರಡು ಸಾವಿರ ರೂಪಾಯಿ ಹೊಡಿತಾರಿ, ಲೋಕಲ್ ಇಲ್ಲೆ ಹೊಡಿತಾರ್ರಿ ಅವರು. ಅವರನ್ನ ಬಿಟ್ರ ಬೇರೆ ಗಾಡಿ ಯಾವುದಕ್ಕೂ ಹಾಕಾಕ್ ಅಲಾವ್ ಇಲ್ಲ. ಹಿಂಗಿರ್ಲಿಕಂದ್ರ ನಿಮ್ಮ ಗಾಡಿಗೆ ಹಾಕೋ ಅಲಾವ್ ಇದ್ರ ನಿಮ್ಮ ಗಾಡಿಗೆ ಹಾಕ್ತಿದ್ವಿ. ಹಾಕೋ ಅಲಾವ್ ಇಲ್ರಿ ಅಣ್ಣ. ಈಗ ಸಸ್ಪೆಕ್ಟೆಡ್ ಐತಿ ಅಂದ್ರ ಹಾಕೊ ಅಲಾವ್ ಇಲ್ಲ ಹಿಂಗೈತ್ರಿ. ಮೂರು ಸಾವಿರದಾ ಎರಡ್ನೂರು ರೂಪಾಯಿ ಹುಡುಗರ್ದು ಒಂದು ಸಾವಿರ ರೂಪಾಯಿ..
ನ್ಯೂಸ್‌ಫಸ್ಟ್‌: ಕೊಡ್ತೈತಿ ತಗೋರಿ.. ಅಲ್ಲಾ ನಮ್ದು ಏನಂತ ಅಂದ್ರ ಸರ್ಕಾರ ಘೋಷಣೆ ಮಾಡ್ತೈತಿ ಅಲ್ರಿ ಒಂದು ರೂಪಾಯಿ ಕೊಡಬೇಡ್ರಿ, ಮಾಡ್ರಿ ಅಂತ ಹೇಳಿ ಅದಕ್ಕ ಅದನ್ನ ಕೇಳ್ಬೇಕಾಗತೈತಿ ನೋಡ್ರಿ. ನಾಳೆ ಫ್ರೀ ಒಯ್ಯಿರಿ ಅಂತ ಅಂದ್ರ ಯಾರೋ ಅದಕ್ಕ ಮತ್ತ ನಾ.
ಸಿಬ್ಬಂದಿ: ಯಾರ್ರಿ ಅವರು ಫ್ರೀ ಅಂದವ್ರು..
ನ್ಯೂಸ್‌ಫಸ್ಟ್‌: ಇವರ ಸಾಹೇಬ್ರು ಫೋನ್ ಹಚ್ಚಿ ಕೊಟ್ರು ನಾಳಿ ಅಂದ್ರ ಇಡ್ತೀವ್ರಿ ಇಲ್ಲ ಅಂದ್ರ ಪಂಚಾಯಿತಿ ಅವರು ತರಿಸ್ಕೊಂಡು ಮಾಡಕ್ಕ ಬರ್ತೈತಿ.
ಸಿಬ್ಬಂದಿ: ನೀವು ನಾಳೆ ಒಯ್ಯಿಬೇಕಂದ್ರ ನಿಮ್ಮ ಡಿಸ್ಟ್ರಿಕ್ಟಿಂದ ಮತ್ತ ನೀವು ಲೆಟರ್ ತರಬೇಕು ಎಲ್ಲಾ ಗುದ್ಯಾಟ್ ಅದಾವ್ರಿ ಈಗ ಅವರು ಅದಕ್ಕ ಗುದ್ಯಾಡ್ ಬೇಕು..
ನ್ಯೂಸ್‌ಫಸ್ಟ್‌: ಮತ್ತ ಯಾವ್ ಡಿಸ್ಟ್ರಿಕ್ಟರಿ ನಮ್ದು ಧಾರವಾಡ ಡಿಸ್ಟ್ರಿಕ್ಟ್?

ಅಂದ್ಹಾಗೆ ಇಲ್ಲಿ ಶವ ಸಂಸ್ಕಾರಕ್ಕೂ ಇವ್ರಿಗೂ ಸಂಬಂಧವಿಲ್ಲ. ಕೇವಲ ಶವ ಸಾಗಾಟಕ್ಕಷ್ಟೇ ಇವ್ರು ಕೇಳೋದು. ನಾವು ತುಂಬಾ ಬಡವರು ಸ್ವಾಮಿ ಅಷ್ಟೆಲ್ಲಾ ಕೊಡೊಕಾಗಲ್ಲ ಎಂದು ಅಂಗಲಾಚಿದ ಮೇಲೆ 30 ಕಿ.ಮೀ ಪ್ರಯಾಣಕ್ಕೆ 3200 ರೂಪಾಯಿ ಹಾಗೂ ಶವ ಸಂಸ್ಕಾರಕ್ಕೆ ಬರುವ ಇಬ್ಬರಿಗೆ ತಲಾ 500 ಪೀಕಿದ್ರು.

ನಮ್ಮ ರಿಯಾಲಿಟಿ ಚೆಕ್‌ನಲ್ಲಿ ಒಂದಂತೂ ಸ್ಪಷ್ಟವಾಗಿದೆ. ಕಿಮ್ಸ್ ಸಿಬ್ಬಂದಿಯೇ ಇಲ್ಲಿ ಆ್ಯಂಬ್ಯುಲೆನ್ಸ್ ದಂಧೆಕೋರರ ಜೊತೆ ಕೈಜೋಡಿಸಿದ್ದಾರೆ. ಸರ್ಕಾರ ಕೋವಿಡ್ ಡೆತ್ ಕೇಸ್‌ಗಳಲ್ಲಿ ನಿಯಮಗಳನ್ನ ಸಡಿಲಿಕೆ ಮಾಡಿದ್ರೂ ಇವ್ರು ಹಳೇ ನಿಯಮ ಇಟ್ಕೊಂಡು ಜನ್ರನ್ನ ಯಾಮಾರಿಸ್ತಿದ್ದಾರೆ. ಪಾಲಿಕೆ ಆಯುಕ್ತ ಸುರೇಶ್ ಹಿಟ್ನಾಳ್‌ ಪ್ರಕಾರ ಇಲ್ಲಿವರೆಗೂ 35 ಶವಗಳ ಅಂತ್ಯ ಸಂಸ್ಕಾರ ಉಚಿತವಾಗಿ ನಡೆಸಲಾಗಿದೆ. ಆದ್ರೆ ಧಾರವಾಡ ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್‌ಗೆ 745 ಮಂದಿ ಬಲಿಯಾಗಿದ್ದಾರೆ. ಆ ಉಳಿದ ಪ್ರತಿಯೊಂದು ಅಂತ್ಯಸಂಸ್ಕಾರದ ವೇಳೆಯೂ ಹೆಣದ ಹೆಸ್ರಲ್ಲಿ ಹಣ ಪೀಕಿದ್ದಾರೆ ಈ ಧನ ಪಿಶಾಚಿಗಳು.

ವರದಿ: ಪ್ರಕಾಶ್‌ ನೂಲ್ವಿ, ನ್ಯೂಸ್‌ಫಸ್ಟ್‌, ಹುಬ್ಬಳ್ಳಿ

The post ನ್ಯೂಸ್​​ಫಸ್ಟ್​​ ಸ್ಟಿಂಗ್: ಹೆಣದ ಮೇಲೆ ಹಣ ಮಾಡೋ ಧನಪಿಶಾಚಿಗಳ ಕರಾಳಮುಖ ಬಯಲು appeared first on News First Kannada.

Source: newsfirstlive.com

Source link