ಪಂಚಮಸಾಲಿ 3ನೇ ಪೀಠ ರಚನೆಗಾಗಿ ಜಮಖಂಡಿಯಲ್ಲಿ ಟ್ರಸ್ಟ್​ ನೋಂದಣಿ | Trust Registered for 3rd Peetha of Panchamasali in Jamkhandi


ಪಂಚಮಸಾಲಿ 3ನೇ ಪೀಠ ರಚನೆಗಾಗಿ ಜಮಖಂಡಿಯಲ್ಲಿ ಟ್ರಸ್ಟ್​ ನೋಂದಣಿ

ಪಂಚಮಸಾಲಿ ಸಮಾಜ (ಪ್ರಾತಿನಿಧಿಕ ಚಿತ್ರ)

ಬಾಗಲಕೋಟೆ: ಪಂಚಮಸಾಲಿ 3ನೇ ಪೀಠ ರಚನೆಗಾಗಿ ಜಮಖಂಡಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಟ್ರಸ್ಟ್​ ನೋಂದಣಿ ಮಾಡಲಾಗಿದೆ. ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಚಾರಿಟಬಲ್​ ಟ್ರಸ್ಟ್ ಜಮಖಂಡಿ ಎಂಬ ಹೆಸರನ್ನು ನೋಂದಣಿ ಮಾಡಲಾಗಿದೆ. ಅಧ್ಯಕ್ಷರಾಗಿ ಬಬಲೇಶ್ವರ ಮಠದ ಮಹದೇವ ಶಿವಾಚಾರ್ಯಶ್ರೀ, ಉಪಾಧ್ಯಕ್ಷರಾಗಿ ರೇವಣಸಿದ್ದಸ್ವಾಮೀಜಿ ಬೆಂಡವಾಡ, ಟ್ರಸ್ಟ್​ನ ಕಾರ್ಯದರ್ಶಿಯಾಗಿ ಸಂಗನ ಬಸವಶ್ರೀ ಮತ್ತು ಇತರ ಸುಮಾರು 25 ಸ್ವಾಮೀಜಿಗಳನ್ನೊಳಗೊಂಡ ಟ್ರಸ್ಟ್​ ನೋಂದಣಿ ಮಾಡಲಾಗಿದೆ.

ಜಮಖಂಡಿ ಹೊರವಲಯದ ಅಲಗೂರು ರಸ್ತೆ ಬಳಿ 3ನೇ ಪೀಠಕ್ಕಾಗಿ ಸ್ಥಳ ಗುರುತಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಈಗಾಗಲೇ ಪಂಚಮಸಾಲಿ ಸಮುದಾಯದ 2 ಪೀಠಗಳಿವೆ. ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಒಂದು ಪೀಠ, ದಾವಣಗೆರೆ ಜಿಲ್ಲೆಯ ಹರಹರದಲ್ಲಿ ಮತ್ತೊಂದು ಪೀಠವಿದೆ. 2 ಪೀಠಗಳ ಹೊರತಾಗಿ 3ನೇ ಪೀಠಕ್ಕಾಗಿ ಪ್ರಕ್ರಿಯೆ ಆರಂಭವಾಗಿರುವುದು ವಿಶೇಷ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.

ಸ್ವಾಮೀಜಿಗಳ ಗೌಪ್ಯ ಸಭೆ
ಪಂಚಮಸಾಲಿ ಮೂರನೇ ಪೀಠದ ವಿಚಾರವಾಗಿ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಿಂದ ಗೌಪ್ಯ ಸಭೆ ನಡೆಸಲಾಗಿದೆ ಎಂದು ಇಂದು (ಅಕ್ಟೋಬರ್ 17) ಮಾಹಿತಿ ಲಭ್ಯವಾಗಿದೆ. ಅಲಗೂರು ಪುನರ್ವಸತಿ ಕೇಂದ್ರದಲ್ಲಿ ಗೌಪ್ಯ ಸಭೆ ನಡೆಸಲಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಅಲಗೂರು ಎಂಬಲ್ಲಿನ ಸಮುದಾಯದ ಮುಖಂಡರೊಬ್ಬರ ಮನೆಯಲ್ಲಿ ಸಭೆ ನಡೆಸಲಾಗಿದೆ.

ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ 20 ಪಂಚಮಸಾಲಿ ಸ್ವಾಮೀಜಿಗಳು ಸಭೆಯಲ್ಲಿ ಭಾಗಿ ಆಗಿದ್ದಾರೆ ಎಂದು ತಿಳಿದುಬಂದಿದೆ. ಪಂಚಮಸಾಲಿ ಮೂರನೇ ಪೀಠದ ಕಟ್ಟಡದ ಬಗ್ಗೆ ಚರ್ಚೆ ನಡೆಸಲಾಗಿದೆ. ದೀಪಾವಳಿ ಬಳಿಕ ಕಟ್ಟಡಕ್ಕೆ ಶಂಕುಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಮದ್ಯಾಹ್ನ 1 ರಿಂದ ನಾಲ್ಕು ಗಂಟೆವರೆಗೆ ಮೂರು ತಾಸುಗಳ ಕಾಲ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಜಮಖಂಡಿ ನಗರದಲ್ಲಿ ಸ್ವಾಮೀಜಿಗಳು ಹಾಗೂ ಮುಖಂಡರು ಎರಡು ಬಾರಿ ಸಭೆ ನಡೆಸಿದ್ದರು. ಜಮಖಂಡಿ ನಗರದಲ್ಲಿ ಇದು ಮೂರನೆ ಬಾರಿ ನಡೆದ ಪಂಚಮಸಾಲಿ ಸ್ವಾಮೀಜಿಗಳ ಸಭೆಯಾಗಿದೆ. ಬಬಲೇಶ್ವರ ಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಮನಗೂಳಿ ಹಿರೆಮಠದ ಸಂಗನಬಸವ ಸ್ವಾಮೀಜಿ, ಕುಂಚನೂರು ಸಿದ್ದಲಿಂಗದೇವರು, ಅಲಗೂರು ಲಕ್ಷ್ಮಣ ಮುತ್ಯಾ ಸ್ವಾಮೀಜಿ, ಗೋಕಾಕ್​ನ ಗುರುಬಸವ ಸ್ವಾಮೀಜಿ ಸೇರಿದಂತೆ 20 ಸ್ವಾಮೀಜಿಗಳು ಸಭೆಯಲ್ಲಿ ಭಾಗಿ ಆಗಿರುವ ಬಗ್ಗೆ ತಿಳಿದುಬಂದಿದೆ.

ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರ: ಅತಿ ಹಿಂದುಳಿದ ವರ್ಗಗಳ ಅಧಿಕಾರಿಗಳ ಸಭೆಯಲ್ಲಿ ವಿರೋಧ
ಇದನ್ನೂ ಓದಿ: ‘ನಮ್ಮ ಜಾತಿ ಹಿಂದೂ ಪಂಚಮಸಾಲಿ. ಆದರೆ ಆರಾಧಿಸುವುದು ಏಸುವನ್ನು’- ಗಂಗಮ್ಮ ಹುಲ್ಲೂರ ಹೇಳಿಕೆ; ಏನಿದು ಪ್ರಕರಣ?

TV9 Kannada


Leave a Reply

Your email address will not be published. Required fields are marked *