ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಎಲ್ಲದಕ್ಕಿಂತ ಪ್ರಮುಖವಾಗಿ, ಪಶ್ಚಿಮ ಬಂಗಾಳದ ಚುನಾವಣೆಯತ್ತ ಇಡೀ ದೇಶದ ಚಿತ್ತ ನೆಟ್ಟಿತ್ತು. ಯಾಕಂದ್ರೆ ಇಲ್ಲಿ ರಾಷ್ಟ್ರೀಯ ಪಕ್ಷ ವರ್ಸಸ್ ಪ್ರಾದೇಶಿಕ ಪಕ್ಷದ ನಡುವೆ ಜಿದ್ದಾಜಿದ್ದಿ ಇತ್ತು. ರಾಮನಾಮಕ್ಕೂ, ಕಾಳಿದೇವಿ ಆರಾಧನೆಗೂ ಸಾಕ್ಷಿಯಾಗಿದ್ದ ನಾಡಲ್ಲಿ, ದೀದಿ ಅಧಿಕಾರ ಉಳಿಸಿಕೊಂಡಿದ್ದಾರೆ.

292 ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯೋದಕ್ಕೆ 147ರ ಗಡಿ ದಾಟಬೇಕಿತ್ತು. ಆದ್ರೆ ಆರಂಭದಿಂದಲೇ ಹಂತ ಹಂತವಾಗಿ ಸುಮಾರು 200 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಟಿಎಂಸಿ ಅನಾಯಾಸವಾಗಿ ಜಯದ ದಡ ಮುಟ್ಟಿದೆ. ಮೋದಿ, ಅಮಿತಾ ಶಾರಂತಹ ದಿಗ್ಗಜರೇ ಅಖಾಡಕ್ಕಿಳಿದು, ಬಿಡುವಿಲ್ಲದ ಪ್ರಚಾರ ನಡೆಸಿದ್ದರೂ, ಬಿಜೆಪಿ ಈ ಬಾರಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ.

ಬಂಗಾಳದಲ್ಲಿ ದೀದಿಯದ್ದೇ ದರ್ಬಾರ್
ಒಟ್ಟು 292
ಟಿಎಂಸಿ 218
ಬಿಜೆಪಿ + 71
ಕಾಂಗ್ರೆಸ್+ 2
ಇತರೆ 1

292 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಟಿಎಂಸಿ ಬರೊಬ್ಬರಿ 218 ಕ್ಷೇತ್ರಗಳನ್ನ ಗೆದ್ದುಕೊಂಡಿದೆ. ಅತ್ತ, ದೀದಿ ನಾಡಲ್ಲಿ ಱಲಿಗಳ ಸುಂಟರಗಾಳಿ ಎಬ್ಬಿಸಿದ್ದ ಬಿಜೆಪಿ 71 ಸೀಟ್​ಗಳನ್ನಷ್ಟೇ ಪಡೆಯಲು ಸಾಧ್ಯವಾಗಿದೆ. ಇನ್ನು, ಚುನಾವಣೆ ವೇಳೆ ಅಬ್ಬಾಸ್ ಸಿದ್ಧಿಕಿಯ ಐಎಸ್​ಎಫ್ ಹಾಗೂ ಕಾಂಗ್ರೆಸ್​ ಸೇರಿದಂತೆ ಇತರ ಎಡಪಕ್ಷಗಳ ಮೈತ್ರಿಕೂಟ ಸದ್ದು ಮಾಡಿತ್ತು. ಆದ್ರೆ ಇದು ಕೇವಲ ಸದ್ದು ಮಾತ್ರ ಆಗಿದ್ದು ಸದ್ಯ ಧೂಳೀಪಟವಾಗಿದೆ. ಈ ರಾಜಕೀಯ ದೋಸ್ತಿಗೆ ಸಿಕ್ಕಿದ್ದು, 2 ಸ್ಥಾನಗಳಷ್ಟೇ, ಇನ್ನುಳಿದಂತೆ 1 ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.
ಹೀಗೆ ಗೆಲುವು ತೃಣಮೂಲ ಕಾಂಗ್ರೆಸ್​ಗೆ ಸುಲಭವಾಗಿ ಸಿಕ್ಕಿದ್ರೂ, ಕೆಲವು ಕ್ಷೇತ್ರಗಳು ಕೊನೆಯವರೆಗೂ ಕುತೂಹಲ ಉಳಿಸಿಕೊಂಡಿತ್ತು. ಕೆಲವೆಡೆ ಅಚ್ಚರಿಯ ಫಲಿತಾಂಶವೂ ದಾಖಲಾಗಿದೆ.

ದ್ರಾವಿಡ ನಾಡಲ್ಲಿ ಸೂರ್ಯೋದಯ

ದ್ರಾವಿಡರ ನಾಡಲ್ಲಿ ಸೂರ್ಯೋದಯವಾಗಿದೆ. ಕಡೆಗೂ ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದೊಂದು ದಶಕದಿಂದಲೂ ಅಧಿಕಾರದಿಂದ ದೂರವಿದ್ದ ಡಿಎಂಕೆ ಕನಸು ಈ ಮೂಲಕ ನನಸಾಗಿದೆ. 234 ಕ್ಷೇತ್ರಗಳಲ್ಲಿ ಸರಳ ಬಹುಮತಕ್ಕೆ ಅಗತ್ಯವಿದ್ದ ಮ್ಯಾಜಿಕ್ ನಂಬರ್ ಅನ್ನ ಡಿಎಂಕೆ ಗಳಿಸುವ ಮೂಲಕ ತಮಿಳುನಾಡಿನ ಗದ್ದುಗೆ ಏರಿದೆ. ಈ ಮೂಲಕ ಆಡಳಿತಾರೂಢ ಎಐಎಡಿಎಂಕೆಗೆ ತೀವ್ರ ಮುಖಭಂಗವಾದಂತಾಗಿದೆ.

ಎಐಎಡಿಎಂಕೆ ನಾಯಕಿ ಜಯಲಲಿತಾ ನಿಧನದ ನಂತರ ಎಡಪ್ಪಾಡಿ ಪಳನಿಸ್ವಾಮಿ ಸಿಎಂ ಗದ್ದುಗೆ ಏರಿದ್ದರು. ಜಯಲಲಿತಾ ನಿಧನದ ನಂತರದ ಮೊದಲ 2021ರ ಚುನಾವಣೆಯಲ್ಲೂ ಗೆಲುವಿನ ವಿಶ್ವಾಸ ಹೊಂದಿದ್ದ ಎಐಎಡಿಎಂಕೆಗೆ ನಿರಾಸೆಯಾಗಿದೆ. ಎಐಎಡಿಎಂಕೆಗೆ ಕೈಕೊಟ್ಟು ಡಿಎಂಕೆ ಕೈ ಹಿಡಿದಿದ್ದಾರೆ ತಮಿಳುನಾಡಿನ ಜನತೆ. 234 ಕ್ಷೇತ್ರಗಳ ಪೈಕಿ ಮ್ಯಾಜಿಕ್ ನಂಬರ್ 118ಕ್ಕಿಂತಾ ಹೆಚ್ಚೇ ಕ್ಷೇತ್ರಗಳನ್ನ ಗೆದ್ದಿರುವ ಡಿಎಂಕೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಮೂಲಕ ಆಡಳಿತಾರೂಢ ಎಐಎಡಿಎಂಕೆಗೆ ಮುಖಭಂಗವಾಗಿದ್ದು, ಗೆದ್ದ ಕ್ಷೇತ್ರಗಳ ಸಂಖ್ಯೆ ಎರಡಂಕಿಗೆ ಕುಸಿದಿದೆ.

40 ವರ್ಷದ ಇತಿಹಾಸ ತಲೆಕೆಳಗೆ ಮಾಡಿದ ಪಿಣರಾಯ ವಿಜಯನ್

ಕೇರಳದಲ್ಲಿನ 40 ವರ್ಷದ ಇತಿಹಾಸ ತಲೆಕೆಳಗಾಗಿದೆ. ಹೊಸ ದಾಖಲೆಗೆ ದೇವರನಾಡು ಸಾಕ್ಷಿಯಾಗಿದೆ. ಪಿಣರಾಯ್​ ವಿಜಯನ್ ನೇತೃತ್ವದಲ್ಲಿ ಎಲ್‌ಡಿಎಫ್ ಮತ್ತೊಮ್ಮೆ ಕೇರಳದ ಕಿಂಗ್ ಪಟ್ಟಕ್ಕೇರಲಿದೆ. ಬಿಜೆಪಿಯ ಹಿಂದೂ ಅಸ್ತ್ರ ಕೇರಳದಲ್ಲಿ ವರ್ಕೌಟ್ ಆಗಿಲ್ಲ. ಕಾಂಗ್ರೆಸ್​ನ ಬಿರುಸಿನ ಪ್ರಚಾರಕ್ಕೆ ಬಹುಮತದ ಬಾರ್ಡರ್ ದಾಟೋದಕ್ಕೆ ಸಾದ್ಯವಾಗಿಲ್ಲ. ಸರ್ಕಾರದ ಪ್ರತಿನಿಧಿಗಳೇ ಗೋಲ್ಡ್​ ಸ್ಮಗ್ಲಿಂಗ್​ ಕೇಸ್​ನಲ್ಲಿ ಭಾಗಿಯಾಗಿದ್ದು ಚುನಾವಣಾ ಕಣದಲ್ಲಿ ಪ್ರಮುಖ ಚರ್ಚೆಯ ವಿಚಾರವಾಗಿತ್ತು. ಆದ್ರೆ, ಟೀಕೆಯ ಬಾಣಗಳನ್ನೆಲ್ಲಾ ಮೀರಿ ಎಲ್‌ಡಿಎಫ್ ಗೆಲುವಿನ ಪಟಾಕಿ ಸಿಡಿಸಿದೆ.

ಪಿಣರಾಯ್​ ಕೇರಳಕ್ಕೆ ಕಿಂಗ್
ಒಟ್ಟು 140
ಎಲ್​ಡಿಎಫ್ 100
ಯುಡಿಎಫ್ 40
ಬಿಜೆಪಿ 0
ಇತರೆ 0

ಎಡಪಕ್ಷ ಎಲ್‌ಡಿಎಫ್ ಮೈತ್ರಿ ಕೂಟ ಒಟ್ಟು 140 ವಿಧಾನಸ್ಥಾನಗಳಲ್ಲಿ 100 ಕ್ಷೇತ್ರವನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ಮೂಲಕ ಅಧಿಕಾರವನ್ನ ಉಳಿಸಿಕೊಂಡಿದೆ. ಇನ್ನು, ಕಾಂಗ್ರೆಸ್ ನೇತೃತ್ವದ ಯುಡಿಎಫ್ 40 ಸೀಟ್​ಗಳನ್ನಷ್ಟೇ ಗೆಲ್ಲೋದಕ್ಕೆ ಸಾಧ್ಯವಾಗಿದೆ. ಈ ಮೂಲಕ ಮ್ಯಾಜಿಕ್​ ನಂಬರ್​ನಿಂದ ಬಹಳಷ್ಟು ಅಂತರ ಕಾಯ್ದುಕೊಂಡಿದೆ. ಇನ್ನು, ಹಿಂದೂ ಅಸ್ತ್ರದಲ್ಲೇ ಮತಬೇಟೆಯಾಡಿದ್ದ ಬಿಜೆಪಿ ಖಾತೆ ತೆರೆಯಲೂ ವಿಫಲವಾಗಿದೆ ಅರ್ಥಾತ್ ಶೂನ್ಯ ಸುತ್ತಿದೆ. ಮ್ಯಾಜಿಕ್ ನಂಬರ್ 71ನ್ನ ಸುಲಭವಾಗಿ ದಾಟಿರೋ ಪಿಣರಾಯ್ ವಿಜಯನ್ ಸರ್ಕಾರ ಅಧಿಕಾರ ಹಿಡಿಯೋದು ಪಕ್ಕಾ ಆಗಿದೆ. ಕೆಲವೊಂದು ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶವೂ ಹೊರಬಿದ್ದಿದೆ.

ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಜಯ

ಹಲವು ಕಾರಣಗಳಿಂದಾಗಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಅಸ್ಸಾಂನಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೇರಿದೆ. ಕಾಂಗ್ರೆಸ್​​ ನಾಯಕರ ಬಿರುಸಿನ ಪ್ರಚಾರದ ನಡುವೆಯೂ ಕಮಲ ಪಾಳಯಕ್ಕೆ ಮತದಾರರು ಮತ್ತೊಮ್ಮೆ ಬಹುಪರಾಕ್​ ಹೇಳಿದ್ದಾರೆ.

ಅಸ್ಸಾಂ ಮ್ಯಾಜಿಕ್​ ನಂಬರ್​
ಒಟ್ಟು 126

ಬಿಜೆಪಿ+: 76
ಕಾಂಗ್ರೆಸ್+: 49
ಎಜೆಪಿ+ 0
ಇತರೆ 1

ಅಸ್ಸಾಂನಲ್ಲಿ ಒಟ್ಟು 126 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಇದರಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮ್ಯಾಜಿಕ್‌ ನಂಬರ್‌ ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಈ ಬಾರಿಯೂ ಗೆಲುವಿನಿಂದ ದೂರವೇ ಉಳಿದಿದೆ.

ಪುದುಚೇರಿಯಲ್ಲಿ ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ

ಪುದುಚೇರಿ.. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಪುಟ್ಟ ಕೇಂದ್ರಾಡಳಿತ ಪ್ರದೇಶ. ಆದರೆ ಇಲ್ಲೂ ಸಹ ಈ ಬಾರಿಯ ಚುನಾವಣೆ ರಂಗೇರಿತ್ತು. ಚುನಾವಣೆಗೂ ಸ್ವಲ್ಪದಿನ ಮೊದಲಷ್ಟೇ ಕಾಂಗ್ರೆಸ್ ನೇತೃತ್ವದ ಮೈತ್ರಿ​ ಸರ್ಕಾರ ಉರುಳಿಬಿದ್ದಿತ್ತು. ಕಾಂಗ್ರೆಸ್​​ನ ಪ್ರಭಾವಿ ನಾಯಕ ನವಶಿವಯಂ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷವನ್ನ ಸೇರಿದ್ದರು. ಹೀಗಾಗಿ ಪುದುಚೇರಿ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿತ್ತು.

30 ಕ್ಷೇತ್ರಗಳಿರುವ ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಎನ್​ಆರ್​ ರಂಗಸ್ವಾಮಿ ನೇತೃತ್ವದ ಎನ್​ಆರ್​ ಕಾಂಗ್ರೆಸ್​ ಹಾಗೂ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಚುನಾವಣಾ ಕಣಕ್ಕೆ ಧುಮುಕಿತ್ತು. ಕಾಂಗ್ರೆಸ್​ ನಾಯಕ ನವಶಿವಯಂ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಕಮಲ ಪಾಳಯಕ್ಕೆ ಬಲತುಂಬಿತ್ತು.

ಇನ್ನು ಬಿಜೆಪಿ ಮೈತ್ರಿಕೂಟವನ್ನು ಕಾಂಗ್ರೆಸ್​ ಹಾಗೂ ಡಿಎಂಕೆ ಮೈತ್ರಿಕೂಟ ಚುನಾವಣೆಯಲ್ಲಿ ಎದುರಿಸಿತು. ಆದರೆ ಮತದಾರ ಈ ಬಾರಿಯ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್​ ಹಾಗೂ ಡಿಎಂಕೆ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ. ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸರ್ಕಾರ ರಚಿಸೋ ಅವಕಾಶವನ್ನ ಜನರು ನೀಡಿದ್ದಾರೆ.

ಬೆಳಗಾವಿಯಲ್ಲಿ ಕ್ಷಣಕ್ಷಣಕ್ಕೂ ರೋಚಕ.. ಕೊನೆಗೂ ಅರಳಿದ ಕಮಲ

ಕ್ಷಣಕ್ಷಣಕ್ಕೂ ರೋಚಕ.. ಕ್ಷಣ ಕ್ಷಣಕ್ಕೂ ತಿರುವು ಪಕ್ಕಾ ಟಿ ಟ್ವೆಂಟಿ ಮ್ಯಾಚ್​ನಂತೆ ಇತ್ತು ಬೆಳಗಾವಿ ಲೋಕಸಭಾ ಚುನಾವಣೆಯ ಫಲಿತಾಂಶ. ಅಭ್ಯರ್ಥಿ ಆಯ್ಕೆಯ ವಿಚಾರದಿಂದ ಚುನಾವಣೆ ನಡೆಯುವವರೆಗೂ ಇಡೀ ರಾಜ್ಯದ ಗಮನ ಸೆಳೆದಿದ್ದು ಈ ಕ್ಷೇತ್ರ. ಅಂತಿಮವಾಗಿ ಬಿಜೆಪಿಯಿಂದ ಮಾಜಿ ಸಂಸದ ದಿವಂಗತ ಸುರೇಶ್​ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಬೆಳಗಾವಿಯಲ್ಲಿ ಎದ್ದಿದ್ದ ಅನುಕಂಪದ ಅಲೆಗೆ ಕ್ಷೇತ್ರದ ಜನರು ತಲೆಬಾಗಿದ್ದಾರೆ. ಬೆಳಗಾವಿ ಲೋಕಾ ಅಖಾಡದಲ್ಲಿ ಈ ಬಾರೀ ಅನುಕಂಪವೇ ಗೆಲ್ಲೋದು ಅಂತಾ ಸಮೀಕ್ಷೆ ಕೂಡ ಹೇಳಿತ್ತು. ಅದರಂತೆ ಮತದಾರ ಕೂಡ ಅದಕ್ಕೆ ಅಸ್ತು ಅಂದಿದ್ದಾರೆ. ಉಪಚುನಾವಣೆಯಲ್ಲಿ ಕ್ಷೇತ್ರದ ಜನತೆ ಕಮಲವನ್ನ ಅರಳಿಸಿಬಿಟ್ಟಿದ್ದಾರೆ.

ಬಿಜೆಪಿಗೆ ಶುಭ‘ಮಂಗಲಾ’
ಬಿಜೆಪಿ – ಮಂಗಲಾ ಅಂಗಡಿ – 435202
ಕಾಂಗ್ರೆಸ್​ – ಸತೀಶ್​ ಜಾರಕಿಹೊಳಿ – 432299
ಗೆಲುವಿನ ಅಂತರ – 2,903

ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ 4,35,202 ಮತಗಳಿಸಿ 2, 903 ಮತಗಳ ಅಂತರದಿಂದ ಗೆಲುವಿನ ನಗೆಬೀರಿದ್ದಾರೆ. ಕಾಂಗ್ರೆಸ್​ನ ಅಭ್ಯರ್ಥಿ ಸತೀಶ್​ ಜಾರಕಿಹೊಳಿ 4,32,299 ಮತಗಳನ್ನ ಪಡೆದು ಪರಭಾವಗೊಂಡಿದ್ದಾರೆ.

ಏಪ್ರಿಲ್‌ 17ಕ್ಕೆ ಮಸ್ಕಿ ಮತದಾರ ಬರೆದಿದ್ದ ಹಣೆಬರಹ ಇಂದು ಹೊರಬಿದ್ದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರುವಿಹಾಳ್‌ಗೆ ಜೈ ಎಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್‌ ಸೋಲುಂಡಿದ್ದಾರೆ. ಮತ ಎಣಿಕೆ ಆರಂಭವಾದಾಗಿನಿಂದಲೂ ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದ ಬಸನಗೌಡ ತುರುವಿಹಾಳ್‌ ಕೊನೆಗೂ ಮಸ್ಕಿಯಲ್ಲಿ ಗೆದ್ದು ಇತಿಹಾಸ ಬರೆದಿದ್ದಾರೆ.

ಮಸ್ಕಿ ‘ಕೈ’ ವಶ

ಬಸನಗೌಡ ತುರುವಿಹಾಳ್‌: 86,222
ಪ್ರತಾಪ್‌ ಗೌಡ ಪಾಟೀಲ್‌: 55, 581
ಗೆಲುವಿನ ಅಂತರ: 30,641

ಒಟ್ಟು 26 ಸುತ್ತುಗಳ ಮತ ಎಣಿಕೆ ನಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರುವಿಹಾಳ್‌ ಒಟ್ಟು 86, 222 ಮತಗಳನ್ನು ಪಡೆದಿದ್ರೆ, ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಗೌಡ ಪಾಟೀಲ್‌ 55, 581 ಮತಗಳನ್ನು ಪಡಿದಿದ್ದಾರೆ. ಈ ಮೂಲಕ ಬಸನಗೌಡ ತುರುವಿಹಾಳ್‌ 30,641 ಮತಗಳ ಅಂತರಿಂದ ಪ್ರತಾಪ್‌ಗೌಡ ಪಾಟೀಲ್‌ ವಿರುದ್ಧ ಗೆದ್ದು ಬೀಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್​ ಭರ್ಜರಿ ಗೆಲುವು

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್​ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಂಡಾಯದ ನಡುವೆಯೂ ಶರಣು ಸಲಗಾರ್ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಸಾಧಿಸಿದ್ದು, ಒಟ್ಟು 70 ಸಾವಿರದ 556 ಮತ ಪಡೆದು ಶರಣು ಸಲಗಾರ್​ ಗೆಲುವಿನ ನಗೆ ಬೀರಿದ್ದಾರೆ. ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್​, 20 ಸಾವಿರ ಮತಗಳಿಂದ ಗೆಲಿಸಿದ್ದ ಮತದಾರರಿಗೆ ಚಿರಕಾಲ ಚಿರಖುಣಿಯಾಗಿರುತ್ತೇನೆ ಅಂತ ಸಂತಸ ಹಂಚಿಕೊಂಡಿದ್ದಾರೆ.

The post ಪಂಚರಾಜ್ಯಗಳ ಫಲಿತಾಂಶ: ಯಾರ ಪರವಿತ್ತು ಜನತಾ ತೀರ್ಪು..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ appeared first on News First Kannada.

Source: newsfirstlive.com

Source link