ನವದೆಹಲಿ: ಚುನಾವಣೆ ಸಮೀಪಿಸುತ್ತಾ ಇದ್ದಂತೆ ಪಂಜಾಬ್ನಲ್ಲಿ ಬದ್ಧ ವಿರೋಧಿ ರಾಜಕೀಯ ಪಕ್ಷಗಳು, ಎಲೆಕ್ಷನ್ ಮುಂದೂಡಿ ಅಂತಾ ಒಗ್ಗಟ್ಟಾಗಿ ನಿಂತಿವೆ. ಈ ಮಧ್ಯೆ ಅದೇ ನಾಡಲ್ಲಿ ಸಿಎಂ ಚನ್ನಿ ಸಹೋದರ ಅಣ್ಣನ ಪಕ್ಷದ ವಿರುದ್ಧ ಸಿಡಿದು ನಿಂತಿದ್ದಾರೆ. ಇನ್ನೊಂದ್ಕಡೆ ಹೈವೋಲ್ಟೇಜ್ ಉತ್ತರಪ್ರದೇಶದಲ್ಲಿ ಪಕ್ಕದ ರಾಜ್ಯದ ಸಿಎಂ ಮೇಲೆ ಎಫ್ಐಆರ್ ದಾಖಲಾಗಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಪ್ರಚಾರದ ಭರಾಟೆ ಜೋರಾಗ್ತಿದೆ. ಎಲೆಕ್ಷನ್ ರಂಗಮಂದಿರದಲ್ಲಿ ತಂತ್ರ, ರಣತಂತ್ರಗಳ ಪ್ರದರ್ಶನ ನೀಡ್ತಿರೋ ಎಲ್ಲಾ ಪಕ್ಷಗಳ ನಾಯಕರು ವಾಗ್ಬಾಣ, ವ್ಯಂಗ್ಯಗಳ ಮೂಲಕವೇ ಎದುರಾಳಿಗಳನ್ನ ತಿವಿಯುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಆರಂಭವಾಗೋ ಚುನಾವಣೆ ಇನ್ನೇನು ಬಂದೇ ಬಿಡ್ತು ಎಂಬಷ್ಟರಲ್ಲೇ ಎಲೆಕ್ಷನ್ ಮುಂದೂಡ್ಬೇಕು ಅಂತಾ ಕೆಲ ಪಕ್ಷಗಳ ನಾಯಕರು ಚುನಾವಣಾ ಆಯೋಗದ ಮೆಟ್ಟಿಲೇರಿದ್ದಾರೆ.
ಪಂಜಾಬ್ನಲ್ಲಿ ಕಾಂಗ್ರೆಸ್, ಬಿಜೆಪಿ ಒಕ್ಕೊರಲ ಮನವಿ
ಈಗಾಗಲೇ ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿದ ದಿನಾಂಕದ ಪ್ರಕಾರ ಪಂಜಾಬ್ನಲ್ಲಿ ಫೆಬ್ರವರಿ 14ಕ್ಕೆ ಚುನಾವಣೆ ನಡೆಯಬೇಕಿದೆ. ಆದ್ರೆ ಫೆಬ್ರವರಿ 16ರಂದು ಗುರು ರವಿದಾಸ್ಜೀಯ ಜನ್ಮಜಯಂತಿ ಇದೆ. ಈ ಹಿನ್ನೆಲೆ ದಲಿತ ಸಮುದಾಯದ ಸುಮಾರು 20 ಲಕ್ಷ ಜನ ಫೆಬ್ರವರಿ 10 ರಿಂದ 16 ರ ತನಕ ಉತ್ತರಪ್ರದೇಶದ ಪುಣ್ಯಸ್ಥಳ ಬನಾರಸ್ಗೆ ಯಾತ್ರೆ ಮಾಡಲಿದ್ದಾರೆ. ಹೀಗಾಗಿ ಆ 20 ಲಕ್ಷ ಜನ ಮತದಾನದಿಂದ ವಂಚಿತರಾಗಬಾರದು ಅನ್ನೋ ಕಾರಣಕ್ಕೆ ಚುನಾವಣೆಯನ್ನ ಫೆಬ್ರವರಿ 20ಕ್ಕೆ ನಡೆಸಬೇಕು ಅಂತಾ ಕಾಂಗ್ರೆಸ್, ಬಿಜೆಪಿ, ಶಿರೋಮಣಿ ಅಕಾಲಿ ದಳ ಹಾಗೂ ಬಿಎಸ್ಪಿ ಪಕ್ಷಗಳು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿವೆ. ಪಂಜಾಬ್ನಲ್ಲಿ ಚುನಾವಣೆ ಮುಂದೂಡುವ ವಿಚಾರಕ್ಕೆ ಎಲ್ಲಾ ಪಕ್ಷಗಳು ಒಟ್ಟಾದ್ರೆ, ಪಂಜಾಬ್ ಕಾಂಗ್ರೆಸ್ನಲ್ಲಿ ಬೇರೊಂದು ವಿಚಾರಕ್ಕೆ ಬಿರುಕು ಮೂಡುತ್ತಿದೆ.
ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದ ಸಿಎಂ ಚನ್ನಿ ಸಹೋದರ
ಪಂಜಾಬ್ನಲ್ಲಿ 117 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ 86 ಅಭ್ಯರ್ಥಿಗಳ ಪಟ್ಟಿಯನ್ನ ಮೊದಲ ಹಂತದಲ್ಲಿ ರಿಲೀಸ್ ಮಾಡಿತ್ತು. ಈ ಪೈಕಿ ಬಸ್ಸಿ ಪಠಾನಾ ಕ್ಷೇತ್ರದಿಂದ ಸಿಎಂ ಚನ್ನಿ ಅವರ ಕಿರಿಯ ಸಹೋದರ ಡಾ.ಮನೋಹರ್ ಸಿಂಗ್ಗೆ ಪಕ್ಷ ಟಿಕೆಟ್ ನಿರಾಕರಿಸಿತ್ತು. ಇದರಿಂದ ಸಿಟ್ಟಿಗೆದ್ದಿರುವ ಸಿಎಂ ಚನ್ನಿ ಬ್ರದರ್, ಬಂಡಾಯ ಎದ್ದಿದ್ದಾರೆ.
ಚನ್ನಿ ಬ್ರದರ್ಗೆ ಟಿಕೆಟ್ ಯಾಕಿಲ್ಲ!?
ಚನ್ನಿ ಸಹೋದರ ಡಾ.ಮನೋಹರ್ ಸಿಂಗ್, ಹಿರಿಯ ವೈದ್ಯಾಧಿಕಾರಿಯಾಗಿ ಸರ್ಕಾರಿ ಹುದ್ದೆಯಲ್ಲಿದ್ದರು. ರಾಜಕೀಯ ಸೇರುವ ಬಯಕೆಯಿಂದ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಸ್ಸಿ ಪಠಾನಾ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಭಾರೀ ಕಸರತ್ತು ನಡೆಸಿದ್ದರು. ಆದ್ರೆ ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷ ‘ಒನ್ ಫ್ಯಾಮಿಲಿ, ಒನ್ ಟಿಕೆಟ್’ ಎಂಬ ನಿಯಮ ಅನುಸರಿಸುತ್ತಿದೆ. ಈ ನಿಯಮದ ಪ್ರಕಾರ ಒಂದು ಕುಟುಂಬದಲ್ಲಿ ಎರಡೆರಡು ಜನರ ಸ್ಪರ್ಧೆಗೆ ಪಕ್ಷ ಅವಕಾಶ ನೀಡುತ್ತಿಲ್ಲ. ಹೀಗಾಗಿ ಚನ್ನಿ ಸಹೋದರನಿಗೆ ಬಸ್ಸಿ ಪಠಾನಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಿರಾಕರಣೆಯಾಗಿದೆ. ಇನ್ನು ಈ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವ ಗುರುಪ್ರೀತ್ ಸಿಂಗ್ ಜಿಪಿ ಅವರಿಗೆ ಪಕ್ಷ ಮತ್ತೊಮ್ಮೆ ಟಿಕೆಟ್ ನೀಡಿ ಮಣೆ ಹಾಕಿದೆ. ಹೀಗಾಗಿ ಟಿಕೆಟ್ ಸಿಗದೆ ಸಿಟ್ಟಿಗೆದ್ದಿರುವ ಮನೋಹರ್ ಸಿಂಗ್, ಬಸ್ಸಿ ಪಠಾನಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ಗೆ ಠಕ್ಕರ್ ಕೊಡಲು ಸಿದ್ಧರಾಗಿದ್ದಾರೆ.
‘ಸ್ವತಂತ್ರವಾಗಿ ಸ್ಪರ್ಧಿಸಿ ಸೋಲಿಸುವೆ’
ಹಾಲಿ ಶಾಸಕ ಗುರುಪ್ರೀತ್ ಸಿಂಗ್ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಇದ್ದರೂ ಸಹ ಮತ್ತೆ ಅವರಿಗೆ ಟಿಕೆಟ್ ದೊರೆತಿದೆ. ಕ್ಷೇತ್ರದ ಕೌನ್ಸಿಲರ್ಸ್ ಹಾಗೂ ಪಂಚಾಯತ್ ಅಧ್ಯಕ್ಷರು ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿಕೊಳ್ತಿದ್ದಾರೆ. ನನಗೆ ಬೇರೆ ಪಕ್ಷದಿಂದ ಟಿಕೆಟ್ ಆಫರ್ ಇದೆ. ಆದ್ರೆ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹಾಲಿ ಶಾಸಕರನ್ನ ಸೋಲಿಸಿಯೇ ಸೋಲಿಸುತ್ತೇನೆ. ನನ್ನ ಸಹೋದರ ಸಿಎಂ ಚನ್ನಿ ಅವರನ್ನ ಭೇಟಿಯಾಗಿ ನನ್ನ ನಿರ್ಧಾರದ ಬಗ್ಗೆ ವಿವರಿಸಿ ಹೇಳುತ್ತೇನೆ.
ಡಾ. ಮನೋಹರ್ ಸಿಂಗ್, ಪಂಜಾಬ್ ಸಿಎಂ ಸಹೋದರಸಹೋದರನ ಈ ನಿರ್ಧಾರ ಪಂಜಾಬ್ ಸಿಎಂ ಚನ್ನಿಗೆ ಮುಜುಗರ ತಂದಿಟ್ಟಿದೆ. ಇದು ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹೊಡೆತ ಕೊಟ್ಟರೂ ಸಹ ಅಚ್ಚರಿಯಿಲ್ಲ.
ಪಕ್ಕದ ರಾಜ್ಯದ ಸಿಎಂ ಮೇಲೆ ಉತ್ತರಪ್ರದೇಶದಲ್ಲಿ ಎಫ್ಐಆರ್!
ಪಕ್ಕದ ಉತ್ತರಪ್ರದೇಶ ರಾಜ್ಯದ ನೋಯ್ಡಾಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಛತ್ತೀಸ್ಗಢ ಕಾಂಗ್ರೆಸ್ ಸಿಎಂ ಭೂಪೇಶ್ ಬಘೇಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮನೆಮನೆಗೆ ತೆರಳಿ ಪ್ರಚಾರ ನಡೆಸುವ ವೇಳೆ, ಭೂಪೇಶ್ ಬಘೇಲ್ ಕೋವಿಡ್ ರೂಲ್ಸ್ ಉಲ್ಲಂಘಿಸಿದ್ದ ಕಾರಣಕ್ಕೆ ನೋಯ್ಡಾ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಪಂಚರಾಜ್ಯಗಳ ಚುನಾವಣಾ ಕಾವು ಹೆಚ್ಚಾಗ್ತಿದೆ. ಅದ್ರಲ್ಲೂ, ಪಂಜಾಬ್ನಲ್ಲಿ ಮತದಾನ ಮುಂದೂಡಲ್ಪಡುತ್ತಾ? ಸಿಎಂ ಚನ್ನಿ ಮುಜುಗರ ತಪ್ಪಿಸಿಕೊಳ್ತಾರಾ? ಎನ್ನೋ ಪ್ರಶ್ನೆಗಳು ನಿನ್ನೆ ಚುನಾವಣಾ ಅಖಾಡದಲ್ಲಿ ಸ್ವಲ್ಪ ಜೋರಾಗಿಯೇ ಕೇಳಿಸಿದೆ.