ಪಂಜಾಬ್​ ಕಾಂಗ್ರೆಸ್​ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ -ತಾರಾ ಪ್ರಚಾರಕರ ಪಟ್ಟಿಯಿಂದ ಮನೀಶ್ ತಿವಾರಿ ಔಟ್​


ನವದೆಹಲಿ: ಪಂಚರಾಜ್ಯ ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ಪಂಜಾಬ್​ ಕಾಂಗ್ರೆಸ್​ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪಂಜಾಬ್​ ಸಿಎಂ ಅಭ್ಯರ್ಥಿ ಹೆಸರನ್ನು ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ, ಇಂದು ಬಹಿರಂಗಗೊಳಿಸುವ ಸಾಧ್ಯತೆಯಿದೆ. ಈ ಮಧ್ಯೆ ಪಕ್ಷದ ತಾರಾ ಪ್ರಚಾರಕರ ಪಟ್ಟಿಯಿಂದ ಹಿರಿಯ ನಾಯಕ ಮನೀಶ್ ತಿವಾರಿ ಹೆಸರು ಕೈ ಬಿಟ್ಟಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪಂಜಾಬ್​..ಚುನಾವಣೆ ಎದುರಾಗಿರುವ ಪಂಚರಾಜ್ಯಗಳ ಪೈಕಿ ಕಾಂಗ್ರೆಸ್​​ ಅಧಿಕಾರದಲ್ಲಿರುವ ಏಕೈಕ ರಾಜ್ಯ. ಸಿಖ್​ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು ಹಸ್ತಪಾಳಯ​​ ಶತಪ್ರಯತ್ನ ನಡೆಸುತ್ತಿದೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೈ ಮನೆಯಲ್ಲಿ ಬಂಡಾಯಕ ಬೆಂಕಿ ಹೆಚ್ಚುತ್ತಲೇ ಹೋಗ್ತಿದೆ. ಸಿಎಂ ಚರಣ್​​ಜೀತ್​ ಸಿಂಗ್​​ ಚನ್ನಿ ಹಾಗೂ ಪಂಜಾಬ್ ಕಾಂಗ್ರೆಸ್​ ಘಟಕದ ಅಧ್ಯಕ್ಷ ಸಿಧು ಮಧ್ಯೆ ಸಿಎಂ ಅಭ್ಯರ್ಥಿಯಾಗಲು ಪೈಪೋಟಿ ನಡೆಯುತ್ತಿದ್ದು, ಪಕ್ಷದಲ್ಲಿ ಈಗಾಗಲೇ ಬಣ ರಾಜಕೀಯ ಜೋರಾಗಿದೆ. ಆದರೆ ಸಿಎಂ ಅಭ್ಯರ್ಥಿ ಘೋಷಣೆಗೂ ಮುನ್ನವೇ ಕೈ ಕೋಟೆಯಲ್ಲಿನ ಭಿನ್ನಮತ ಬಟಾಬಯಲಾಗಿದೆ.

ಪಂಜಾಬ್​ ಕಾಂಗ್ರೆಸ್​​ನ ಭಿನ್ನಾಭಿಪ್ರಾಯ ಮತ್ತೆ ಬಹಿರಂಗ

ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಇಂದು ಪಂಜಾಬ್​ ಸಿಎಂ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಸಾಧ್ಯತೆಯಿದೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಮುನ್ನವೇ ಕಾಂಗ್ರೆಸ್‌ ಪಾಳಯದ ಆಂತರಿಕ ಕಲಹ ಬೀದಿಗೆ ಬಿದ್ದಿದೆ. ತಾರಾ ಪ್ರಚಾರ ಪಟ್ಟಿಯಿಂದ ಹಿರಿಯ ನಾಯಕ ಮನೀಶ್​ ತಿವಾರಿಯನ್ನು ಹೊರಗಿಡಲಾಗಿದೆ. ಪಂಜಾಬ್​ನ ಸಂಸದರಾಗಿರುವ ಮನೀಶ್​ ತಿವಾರಿಯನ್ನು ಪ್ರಚಾರಕರ ಪಟ್ಟಿಯಿಂದ ಹೊರಗಿಟ್ಟಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇತ್ತ ಸಿಧು ಮತ್ತೊಮ್ಮೆ ಸಿಎಂ ಅಭ್ಯರ್ಥಿ ಬಗ್ಗೆ ಹೇಳಿಕೆ ನೀಡಿದ್ದು, ಚುನಾವಣೆಯಲ್ಲಿ 60 ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಮುಖವು ನಿರ್ಧರಿಸುತ್ತದೆ ಎಂದಿದ್ದಾರೆ.

ಉತ್ತರಾಖಂಡ ಕದನಕಣದಲ್ಲಿ ರಾಹುಲ್​ ಪ್ರಚಾರ
ಗಂಗಾ ಆರತಿ ಮಾಡಿ ಮೋದಿ ವಿರುದ್ಧ ಗುಡುಗು

ಉತ್ತರಾಖಂಡದಲ್ಲಿ ಕಾಂಗ್ರೆಸ್​ ಪಕ್ಷದ ಪರ ರಾಹುಲ್​ ಗಾಂಧಿ ಇಂದು ಭರ್ಜರಿ ಪ್ರಚಾರ ನಡೆಸಿದ್ರು. ಹರಿದ್ವಾರದಲ್ಲಿ ಮೊದಲಿಗೆ ಗಂಗಾ ಆರತಿ ಮಾಡಿದ ರಾಹುಲ್​ ಗಾಂಧಿ ಬಳಿಕ ಕಿಸಾನ್ ಸ್ವಾಭಿಮಾನ ಱಲಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ರು. ಸದ್ಯ ಭಾರತದಲ್ಲಿ ಪ್ರಧಾನ ಮಂತ್ರಿಯಿಲ್ಲ. ಬದಲಿಗೆ ರಾಜ ಆಡಳಿತ ನಡೆಸುತ್ತಿದ್ದಾನೆ. ತನ್ನ ನಿರ್ಧಾರಗಳನ್ನು ಜನರು ಮರುಮಾತಿಲ್ಲದೆ ಒಪ್ಪಿಕೊಳ್ಳಬೇಕೆಂಬ ಹಠ ರಾಜನಿಗಿದೆ ಅಂತಾ ಪ್ರಧಾನಿ ಮೋದಿ ವಿರುದ್ಧ ವಾಕ್​ ಪ್ರಹಾರ ನಡೆಸಿದ್ರು.

ಉತ್ತರ ಪ್ರದೇಶದಲ್ಲಿ ಎಸ್​​ಪಿ-ಬಿಜೆಪಿ ತೀವ್ರ ಜಟಾಪಟಿ
ಬಿಜೆಪಿ ಕಾರ್ಯಕರ್ತರಿಗೆ ಪ್ರಣಾಳಿಕೆ ನೀಡಿದ ಪ್ರಿಯಾಂಕಾ

ಬಿಗ್​ ಸ್ಟೇಟ್​ ಉತ್ತರ ಪ್ರದೇಶದಲ್ಲಿ ಎಲೆಕ್ಷನ್​ ಬ್ಯಾಟಲ್​ ಬಿರುಸುಗೊಂಡಿದ್ದು, ಎಸ್​​ಪಿ ಹಾಗೂ ಬಿಜೆಪಿ ಮಧ್ಯೆ ಜಟಾಪಟಿ ಜೋರಾಗಿದೆ. ಅದರಲ್ಲೂ ಎಸ್​​ಪಿ ಜೊತೆ ಕೈ ಜೋಡಿಸಿರುವ ಆರ್​ಎಲ್​ಡಿ ಪಕ್ಷದ ನಾಯಕ ಜಯಂತ್​ ಚೌಧರಿ ವಿರುದ್ಧ ಕಮಲ ಕಲಿಗಳು ​ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಜಯಂತ್​ ಚೌಧರಿ ಜಾಟ್​ ಸಮುದಾಯದ ಪ್ರಬಲ ನಾಯಕನಾಗಿದ್ದು, ಬಿಜೆಪಿಗೆ ಜಾಟ್​ ಮತಗಳು ಕೈ ತಪ್ಪಿ ಹೋಗುವ ಭೀತಿ ಕಾಡುತ್ತಿದೆ. ಇತ್ತ ಕಾಂಗ್ರೆಸ್​ ಪರ ಪ್ರಿಯಾಂಗಾ ಗಾಂಧಿ ಭರ್ಜರಿ ಕ್ಯಾಂಪೇನ್​ ನಡೆಸ್ತಿದ್ದಾರೆ. ಯುಪಿಯ ಹಲವೆಡೆ ರೋಡ್​ ಶೋ ನಡೆಸಿದ ಕೈ ನಾಯಕಿ, ಬಿಜೆಪಿ ಹಾಗೂ ಯೋಗಿ ಪರ ಘೋಷಣೆ ಕೂಗ್ತಿದ್ದ ಕಾರ್ಯಕರ್ತರಿಗೆ ಕಾಂಗ್ರೆಸ್​ ಪಕ್ಷದ ಪ್ರಣಾಳಿಕೆ ನೀಡಿ ಗಮನ ಸೆಳೆದ್ರು.

ಪಂಚರಾಜ್ಯ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ನಾಯಕರು ಮಿಂಚಿನ ಸಂಚಾರ ನಡೆಸ್ತಿದ್ದಾರೆ. ಮತದಾರರ ಮನಗೆಲ್ಲಲು ಆಶ್ವಾಸನೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಪ್ರಚಾರದ ಓಟದಲ್ಲಿ ಎಲ್ಲ ಪಕ್ಷಗಳು ಪೈಪೋಟಿಗೆ ಬಿದ್ದು ಓಡುತ್ತಿವೆ. ದರೆ ಗೆಲುವಿನ ಗುರಿ ತಲುಪೋರು ಯಾರು ಅನ್ನೋದೇ ಕುತೂಹಲದ ಸಂಗತಿ..

News First Live Kannada


Leave a Reply

Your email address will not be published.