ಪಂಜಾಬ್​ ಚುನಾವಣೆ ಮುಂದೂಡಿಕೆ ಆಗುತ್ತಾ..? ಟಾಪ್ 10 ಸುದ್ದಿಗಳ ಕ್ವಿಕ್​​ರೌಂಡಪ್


ಸಂಜೆ ಸಿಎಂ‌ ನೇತೃತ್ವದಲ್ಲಿ ಕೋವಿಡ್ ಮೀಟಿಂಗ್
ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಕೋವಿಡ್ ನಿಯಂತ್ರಣದ ಕುರಿತು ಇಂದು ಸಂಜೆ 4 ಗಂಟೆಗೆ ಮಹತ್ವದ ಸಭೆ ನಡೆಸಲಿದ್ದಾರೆ. ತಜ್ಞರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಹಿರಿಯ ಸಚಿವರ ಜೊತೆ ಸಿಎಂ, ವರ್ಚುವಲ್ ಮೀಟಿಂಗ್ ನಡೆಸಿ ಕೋವಿಡ್​ನ ಸದ್ಯದ ಸ್ಥಿತಿ ಬಗ್ಗೆ ಚರ್ಚಿಸಲಿದ್ದಾರೆ. ಸಭೆಯಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಕೋವಿಡ್ ರೂಲ್ಸ್ ಪಾಲನೆ ಬಗ್ಗೆ ಚರ್ಚಿಸಿ ಸಿಎಂ ಮತ್ತಷ್ಟು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಜೊತೆಗೆ, ಮುಂದೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ತಜ್ಞರ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದಾರೆ.

‘ನಮೋ’ಗಾಗಿ ಧರ್ಮಸ್ಥಳದಲ್ಲಿ ಮೃತ್ಯುಂಜಯ ಯಾಗ
ಪ್ರಧಾನಿ ನರೇಂದ್ರ ಮೋದಿ ಆಯುಷ್ಯ ಮತ್ತು ಆರೋಗ್ಯ ವೃದ್ಧಿಗಾಗಿ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಸಲಾಗ್ತಿದೆ. ಬೆಳ್ತಗಂಡಿ ಶಾಸಕ ಹರೀಶ್​ ಪೂಂಜಾ ನೇತೃತ್ವದಲ್ಲಿ ಯಾಗ ಕಾರ್ಯ ನಡೆಯುತ್ತಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಪ್ರಧಾನಿ ಮೋದಿ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ, ಮಂಜುನಾಥನ ಸನ್ನಿಧಿಯ ಅಮೃತವರ್ಷಿಣಿ ಸಭಾಂಗಣದಲ್ಲಿ ಯಾಗ ನಡೆಸಲಾಗುತ್ತಿದೆ.

‘ಕೈ’ ಪಾದಯಾತ್ರೆ ಕೇಸ್​ ವರದಿ ಸಲ್ಲಿಕೆಗೆ ಸಮಿತಿ
ಮೇಕೆದಾಟು ಪಾದಯಾತ್ರೆ ಹಿನ್ನಲೆ ಕಾಂಗ್ರೆಸ್ ನಾಯಕರ ಮೇಲೆ‌‌ ದಾಖಲಾಗಿರೋ‌ ಪ್ರಕರಣಗಳ ಬಗ್ಗೆ ವರದಿ ತಯಾರಿಸಲು ಸರ್ಕಾರ ಸಮಿತಿ ರಚಿಸಲಾಗಿದೆ. ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ಎ.ಎಸ್​. ಪೊನ್ನಣ್ಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಮೇಕೆದಾಟು ಪಾದಯಾತ್ರೆ ವೇಳೆ ದಾಖಲಾಗಿದ್ದ ಕೇಸ್​ಗಳ ಬಗ್ಗೆ ಈ ಸಮಿತಿ ವರದಿ ಸಿದ್ಧಪಡಿಸಲಿದ್ದು, ವರದಿ ಬಳಿಕ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಲಾಗಿದೆ.

ಮತ್ತೆ ಮತ್ತೆ ಕೊರೊನಾ ವೈರಸ್ ಆರ್ಭಟ
ಕರ್ನಾಟಕದಲ್ಲಿ ಕಳೆದ 24ಗಂಟೆಗಳಲ್ಲಿ ಬರೋಬ್ಬರಿ 34 ಸಾವಿರದ 47 ಕೊರೊನಾ ಕೇಸ್​ಗಳು ದಾಖಲಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 24 ಗಂಟೆಗಳಲ್ಲಿ 21 ಸಾವಿರದ 17 ಕೊರೊನಾ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಌಕ್ಟಿವ್ ಕೇಸ್​ಗಳ ಸಂಖ್ಯೆ 1 ಲಕ್ಷದ 97 ಸಾವಿರದ 982ಕ್ಕೆ ಏರಿಕೆಯಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 41 ಸಾವಿರದ 327 ಕೊರೊನಾ ಕೇಸ್​​ಗಳು ದಾಖಲಾಗಿವೆ.

‘ಸೈಕಲ್’ ಇಳಿದು ‘ಕಮಲ’ ಹಿಡಿದ ಎಂಎಲ್​ಸಿಗಳು
ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕರು ಹಾಗೂ ಸಚಿವರನ್ನ ಸಮಾಜವಾದಿ ಪಕ್ಷಕ್ಕೆ ಸೇರಿಸಕೊಂಡು ಠಕ್ಕರ್ ನೀಡಿದ್ದ ಅಖಿಲೇಶ್ ಯಾದವ್​ಗೆ ಹಿನ್ನಡೆಯಾಗಿದೆ. ಸದ್ಯ ಸಮಾಜವಾದಿ ಪಕ್ಷದ ಎಂಎಲ್​ಸಿಗಳಾಗಿದ್ದ ಜ್ಞಾನ್​ಶ್ಯಾಮ್​ ಲೋಧಿ ಹಾಗೂ ಶೈಲೇಂದ್ರ ಪ್ರತಾಪ್​ಸಿಂಗ್ ಬಿಜೆಪಿ ಸೇರಿದ್ದಾರೆ. ಇವರ ಜೊತೆಗೆ ಮಾಜಿ ಪೊಲೀಸ್​ ವರಿಷ್ಠಾಧಿಕಾರಿ ಓಂ ಪ್ರಕಾಶ್, ನಿವೃತ್ತ ಐಎಎಸ್ ಅಧಿಕಾರಿ ರಾಮ್ ಬಹದ್ದೂರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಂಜಾಬ್​ ಚುನಾವಣೆ ಮುಂದೂಡುವಂತೆ ಮನವಿ ಪತ್ರ
ಫೆಬ್ರವರಿ 14ಕ್ಕೆ ನಿಗದಿಯಾಗಿರುವ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ಪಂಜಾಬ್​ನಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿವೆ. ಫೆಬ್ರವರಿ 16ರಂದು ಗುರು ರವಿದಾಸ್​ಜೀಯ ಜನ್ಮಜಯಂತಿ ಇದೆ. ಈ ಹಿನ್ನೆಲೆ ಸುಮಾರು 20 ಲಕ್ಷ ಜನ ಫೆಬ್ರವರಿ 10ರಿಂದ 16ರ ತನಕ ಉತ್ತರಪ್ರದೇಶದ ಪುಣ್ಯಸ್ಥಳ ಬನಾರಸ್​ಗೆ​ ಯಾತ್ರೆ ಮಾಡಲಿದ್ದಾರೆ. ಹೀಗಾಗಿ ಆ 20 ಲಕ್ಷ ಜನ ಮತದಾನದಿಂದ ವಂಚಿತರಾಗಬಾರದು ಅನ್ನೋ ಕಾರಣಕ್ಕೆ ಚುನಾವಣೆಯನ್ನ ಫೆಬ್ರವರಿ 20ಕ್ಕೆ ನಡೆಸಬೇಕು ಅಂತಾ ಬಿಜೆಪಿ, ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಹಾಗೂ ಬಿಎಸ್​ಪಿ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿವೆ.

ಚಂದ್ರನ ಮೇಲೆ ಪ್ರಪ್ರಥಮ ಬಾರಿಗೆ ನೀರು ಪತ್ತೆ
ಚಂದ್ರನ ಮೇಲ್ಮೈನಲ್ಲಿ ಪ್ರಪ್ರಥಮ ಬಾರಿಗೆ ನೀರಿರೋದನ್ನ ಚೀನಾದ ಚಾಂಗ್ ಫೈವ್ ಚಂದ್ರ ನೌಕೆ ಪತ್ತೆ ಹಚ್ಚಿದೆ. ಈ ಹೊಸ ಶೋಧನೆಯಿಂದ ಚಂದ್ರ ಉಪಗ್ರಹ ಎನ್ನುವುದಕ್ಕೆ ನೂತನ ಸಾಕ್ಷ್ಯ ದೊರೆತಂತಾಗಿದೆ. ಚಂದ್ರ ನೌಕೆಯು ಇಳಿದಿದ್ದ ಚಂದ್ರನ ಮೇಲ್ಮೈನಲ್ಲಿ 120 ಪಿಪಿಎಂಗಿಂತಲೂ ಕಡಿಮೆ ಪ್ರಮಾಣದಲ್ಲಿನ ನೀರು ಪತ್ತೆಯಾಗಿದೆ. ಕಲ್ಲಿನ ಸುತ್ತ ಚಂದ್ರನ ಮೇಲ್ಮೈನಲ್ಲಿ ನೀರಿರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದೆ.

ಪಿಜ್ಜಾ ಆರ್ಡರ್​​ ಮಡಿದ್ದ ವೃದ್ಧೆಗೆ ₹11ಲಕ್ಷ ಪಂಗನಾಮ
ಪಿಜ್ಜಾ ವಿಷಯದಲ್ಲಿ ಅಜ್ಜಿಯೋರ್ವರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದ ವೃದ್ಧೆ ಅದಕ್ಕಾಗಿ ಹಣ ಕೂಡ ಕಳುಹಿಸಿದ್ದರು. ಆದರೆ, ಅವರು ತಪ್ಪಾಗಿ ಬಿಲ್‌ಗಿಂತ ಹೆಚ್ಚು ಅಮೌಂಟ್ ಕಳುಹಿಸಿದ್ದರು. ಅದನ್ನು ಹೇಗೆ ಮರಳಿ ಪಡೆಯೋದು ಅಂತಾ ಗೂಗಲ್‌ ಸರ್ಚ್​ ಮಾಡಿದ್ದಾರೆ. ಆ ವೇಳೆ ಗೂಗಲ್ ಮಾಹಿತಿಯಂತೆ ಯಾರಿಗೋ ಕರೆ ಮಾಡಿದ್ದಾರೆ. ಆಗ ಆ ಮೋಸಗಾರರು ಅಪ್ಲಿಕೇಶನ್ ಒಂದನ್ನ ಡೌನ್​ಲೋಡ್ ಮಾಡಲು ಹೇಳಿ, ವೃದ್ಧೆಯ ಬ್ಯಾಂಕ್ ವಿವರಗಳು ಮತ್ತು ಪಾಸ್‌ವರ್ಡ್‌ಗಳನ್ನು ಪಡೆದುಕೊಂಡು 11 ಲಕ್ಷಕ್ಕೂ ಹೆಚ್ಚು ಹಣವನ್ನು ಅವರ ಬ್ಯಾಂಕ್ ಖಾತೆಯಿಂದ ಎಗರಿಸಿದ್ದಾರೆ.

ಆಸ್ಟ್ರೇಲಿಯಾ ತೊರೆದ ನೊವಾಕ್ ಜೊಕೊವಿಕ್
ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಸಮರ ಸಾರಿದ್ದ ವಿಶ್ವ ನಂ.1 ಟೆನಿಸ್​ ಆಟಗಾರ ನೊವಾಕ್ ಜೋಕೊವಿಕ್‌ಗೆ ಸೋಲುಂಟಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಹಿನ್ನೆಲೆ ಸೆರ್ಬಿಯಾದ ಜೊಕೊವಿಕ್​ರ ವೀಸಾ ರದ್ದುಗೊಳಿಸಿ ಆಸ್ಟ್ರೇಲಿಯಾ ಸರ್ಕಾರ ಆದೇಶ ಮಾಡಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ಕೋರಿ ಜೊಕೊವಿಕ್ ಸಲ್ಲಿಸಿದ್ದ ಮನವಿಯನ್ನು ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ 21ನೇ ಗ್ರಾಂಡ್ ಸ್ಲಾಮ್ ಗೆದ್ದು ದಾಖಲೆ ನಿರ್ಮಿಸುವ ಜೊಕೊವಿಕ್ ಕನಸು ನುಚ್ಚುನೂರಾಗಿದೆ. ಇನ್ನು ಕೋರ್ಟ್​ನಲ್ಲಿ ತಮಗೆ ಸೋಲಾಗ್ತಿದ್ದಂತೆ ಸರ್ಬಿಯಾದ ಆಟಗಾರ ಜೊಕೊವಿಕ್ ಆಸ್ಟ್ರೇಲಿಯಾ ಬಿಟ್ಟು ತೊರಳಿದ್ದಾರೆ.

ಟೆಸ್ಟ್ ತಂಡಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಸಾರಥ್ಯ?
ಭಾರತದ ಟೆಸ್ಟ್ ಕ್ರಿಕೆಟ್​ ತಂಡಕ್ಕೆ ಕನ್ನಡಿಗ ಕೆ.ಎಲ್​.ರಾಹುಲ್ ನಾಯಕರಾಗಿ ಆಯ್ಕೆಯಾಗಬೇಕು ಎಂಬ ಮಾತು ಕ್ರಿಕೆಟ್ ವಲಯದಿಂದ ಕೇಳಿಬರುತ್ತಿದೆ. ರೋಹಿತ್ ಶರ್ಮಾ ಪದೇ ಪದೇ ಫಿಟ್​ನೆಸ್​ ಹಾಗೂ ಇಂಜುರಿ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಜೊತೆಗೆ ರೋಹಿತ್ ಶರ್ಮಾಗೆ ನಾಯಕನಾಗಿ ಏಕದಿನ ಹಾಗೂ ಟಿ-20 ವಿಶ್ವಕಪ್​ ಗೆಲ್ಲುವ ಸವಾಲು ಕಣ್ಣೆದುರಿಗಿದೆ. ಹೀಗಾಗಿ ರಾಹುಲ್​​ಗೆ ಕ್ಯಾಪ್ಟನ್ಸಿ ಕೊಡಬೇಕು ಎನ್ನೋ ಮಾತುಗಳು ಕೇಳಿಬರ್ತಿವೆ. ಇನ್ನೊಂದೆಡೆ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್, ರಿಷಭ್​ ಪಂತ್​ಗೆ ಟೆಸ್ಟ್ ನಾಯಕತ್ವ ನೀಡಬೇಕು ಎಂದಿದ್ದಾರೆ.

News First Live Kannada


Leave a Reply

Your email address will not be published. Required fields are marked *