ಪಂಜಾಬ್ ಮುಖ್ಯಮಂತ್ರಿ ಛನ್ನಿ
ದೆಹಲಿ: ಪಂಜಾಬ್ನಲ್ಲಿ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ (Punjab Assembly Elections) ನಡೆಯಲಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿಗೆ ಅವರ ಸೋದರ ಸಂಬಂಧಿಯೊಬ್ಬರು ಶಾಕ್ ನೀಡಿದ್ದಾರೆ. ಛನ್ನಿ ಸೋದರ ಸಂಬಂಧಿಯಾದ ಜಸ್ವಿಂದರ್ ಸಿಂಗ್ ಧಳಿವಾಲ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಮ್ಮುಖದಲ್ಲಿ ಚಂಡಿಗಢ್ನಲ್ಲಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಇನ್ನು ಜಸ್ವಿಂದರ್ ಮಾತ್ರವಲ್ಲ ಅವರೊಟ್ಟಿಗೆ ಪಂಜಾಬ್ ಮಾಜಿ ಶಾಸಕ ಅರವಿಂದ್ ಖನ್ನಾ, ಶಿರೋಮಣಿ ಅಖಾಲಿ ದಳ್ದ ನಾಯಕ ಗುರ್ದೀಪ್ ಸಿಂಗ್ ಗೋಶಾ, ಅಮೃತಸರ್ದ ಮಾಜಿ ಕೌನ್ಸಿಲರ್ ಧರ್ಮವೀರ್ ಸರಿನ್ ಕೂಡ ಬಿಜೆಪಿಗೆ ಸೇರಿದ್ದಾರೆ.
ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಆಂತರಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಇದೀಗ ಬರುವ ತಿಂಗಳು ಚುನಾವಣೆ ನಡೆಯಲಿರುವ ಪಂಜಾಬ್ ಮತ್ತು ಉತ್ತರಾಖಂಡ್ಗಳಲ್ಲಿ ಕೂಡ ಕಾಂಗ್ರೆಸ್ ಮಧ್ಯೆ ಆಂತರಿಕ ಬಿಕ್ಕಟ್ಟು ಇದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಎಲ್ಲ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಕ್ಷದ ವಿರುದ್ಧ ಮಾತನಾಡುವವರನ್ನು, ಬಂಡಾಯ ಏಳುವವರು ಪಕ್ಷದಿಂದ ಅಮಾನತು ಮಾಡಲೂ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪದಲ್ಲಿರುವ ಪಕ್ಷದ ಸ್ವಾಸ್ಥ್ಯ ಕೆಡುವುದು ಇಷ್ಟವಿಲ್ಲ ಎಂದು ಹೈಕಮಾಂಡ್ ಹೇಳಿದ್ದಾಗಿ ವರದಿಯಾಗಿದೆ. ಆದರೆ ಪಂಜಾಬ್ನಲ್ಲಿ ಮುಖ್ಯಮಂತ್ರಿಯ ಹತ್ತಿರದ ಸಂಬಂಧಿಯೇ ಬಿಜೆಪಿ ಸೇರಿದ್ದು ಸದ್ಯ ತಲೆನೋವಾಗಿ ಪರಿಣಮಿಸಿದೆ.
ಪಂಜಾಬ್ನಲ್ಲಿ ಮುಂದಿನ ಸಿಎಂ ಯಾರು?
ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅರ್ಧದಲ್ಲಿಯೇ ಅಧಿಕಾರ ಬಿಟ್ಟ ಬಳಿಕ, ಚರಣಜಿತ್ ಸಿಂಗ್ ಛನ್ನಿ ಮುಖ್ಯಮಂತ್ರಿಯಾಗಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ? ಅಥವಾ ಬೇರೆ ಯಾರನ್ನಾದರೂ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿದೆಯಾ? ಹೀಗೊಂದು ಪ್ರಶ್ನೆ ಎದ್ದಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಈಗಾಗಲೇ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದವರು. ಹಿಂದಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರಾಜೀನಾಮೆಗೆ ಅವರೇ ಕಾರಣ ಎಂದೇ ಹೇಳಲಾಗಿದೆ. ಹಾಗೇ, ಛನ್ನಿ ಸಿಎಂ ಆದ ಬಳಿಕ ಮುನಿಸಿಕೊಂಡು ತಮ್ಮ ಪ್ರದೇಶ ಸಮಿತಿ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ತಾವೂ ಕೂಡ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂಬುದನ್ನು ಸೂಕ್ಷ್ಮವಾಗಿಯೇ ಹೇಳಿಕೊಂಡು ಬಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಕೂಡ ಸೂಕ್ಷ್ಮವಾಗಿಯೇ ಹೆಜ್ಜೆ ಇಡುತ್ತಿದೆ ಎನ್ನಲಾಗಿದೆ.
117 ಕ್ಷೇತ್ರಗಳಿರುವ ಪಂಜಾಬ್ನಲ್ಲಿ ಫೆಬ್ರವರಿ 14ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಮತಎಣಿಕೆ ನಡೆಯಲಿದೆ. 2017ರಲ್ಲಿ ಕಾಂಗ್ರೆಸ್ಗೆ ಇಲ್ಲಿ 77 ಕ್ಷೇತ್ರಗಳನ್ನು ಗೆದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿತ್ತು. ಅದು ಬಿಟ್ಟರೆ ಆಪ್ 20 ಸೀಟ್ ಗೆದ್ದುಕೊಂಡಿತ್ತು. ಶಿರೋಮಣಿ ಅಖಾಲಿ ದಳ 15 ಕ್ಷೇತ್ರಗಳನ್ನು ಗೆದ್ದಿದ್ದರೆ, ಬಿಜೆಪಿ 3 ಕ್ಷೇತ್ರದಲ್ಲಿ ಜಯಸಾಧಿಸಿತ್ತು. ಈ ಬಾರಿಯೂ ಕೂಡ ಅಲ್ಲಿ ಬಿಜೆಪಿಗೆ ಅಧಿಕಾರ ಹಿಡಿಯುವುದು ಕಷ್ಟ ಎಂದೇ ಭಾವಿಸಲಾಗುತ್ತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳ ವಿರುದ್ಧ ತಿರುಗಿಬಿದ್ದವರು ಈ ಪಂಜಾಬ್ ರೈತರೇ ಆಗಿದ್ದಾರೆ. ಹೀಗಾಗಿ ಅಲ್ಲಿ ಬಿಜೆಪಿಗೆ ಜಾಸ್ತಿ ವಿರೋಧ ವ್ಯಕ್ತವಾಗುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.