ಪಂಜಾಬ್​ ಸಿಎಂ ಛನ್ನಿ ಆಸ್ತಿ ಪ್ರಮಾಣ 5ವರ್ಷದಲ್ಲಿ ಇಳಿಕೆ; ಆಸ್ತಿ ಮೌಲ್ಯದಲ್ಲಿ100 ಕೋಟಿ ರೂ. ಹೆಚ್ಚಿಸಿಕೊಂಡ ಸುಖ್ಬೀರ್​ ಸಿಂಗ್ ಬಾದಲ್ | Punjab CM Charanjit Singh Channi Wealth Down By 5 Crore rs According to ADR Report


ಪಂಜಾಬ್​ ಸಿಎಂ ಛನ್ನಿ ಆಸ್ತಿ ಪ್ರಮಾಣ 5ವರ್ಷದಲ್ಲಿ ಇಳಿಕೆ; ಆಸ್ತಿ ಮೌಲ್ಯದಲ್ಲಿ100 ಕೋಟಿ ರೂ. ಹೆಚ್ಚಿಸಿಕೊಂಡ ಸುಖ್ಬೀರ್​ ಸಿಂಗ್ ಬಾದಲ್

ಸುಖ್ಬೀರ್ ಸಿಂಗ್ ಬಾದಲ್ ಮತ್ತು ಚರಣಜಿತ್​ ಸಿಂಗ್ ಛನ್ನಿ

ಪಂಜಾಬ್​ ವಿಧಾನಸಭೆ ಚುನಾವಣೆಗೆ (Punjab Assembly Election) ಇನ್ನೊಂದೇ ದಿನ ಬಾಕಿ ಇದ್ದು, ಈ ಮಧ್ಯೆ ಅಭ್ಯರ್ಥಿಗಳ ಆಸ್ತಿ ಮೌಲ್ಯದ ಪಟ್ಟಿಯನ್ನು  ಅಸೋಸಿಯೇಷನ್​ ಫಾರ್​​ ಡೆಮಾಕ್ರಟಿಕ್​ ರಿಫಾರ್ಮ್ಸ್​ (Association for Democratic Reforms) ಸಂಸ್ಥೆ ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ ಆಸ್ತಿ ಮೌಲ್ಯ ಕಳೆದ 5ವರ್ಷಗಳಲ್ಲಿ 5 ಕೋಟಿ ರೂಪಾಯಿಗಳಷ್ಟು ಕಡಿಮೆ ಆಗಿದ್ದು,  ಪಂಜಾಬ್​ನ ಹಿಂದಿನ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್ ಅವರ ಆಸ್ತಿ 2017ರಲ್ಲಿ ಇದ್ದುದಕ್ಕಿಂತಲೂ 20 ಕೋಟಿ ರೂಪಾಯಿ ಹೆಚ್ಚಾಗಿದೆ. ಅದಕ್ಕೂ ಮಿಗಿಲಾಗಿ ಅಚ್ಚರಿಗೆ ಕಾರಣವಾಗಿದ್ದು, ಶಿರೋಮಣಿ ಅಕಾಲಿ ದಳದ ಸುಖ್ಬೀರ್​ ಸಿಂಗ್​ ಬಾದಲ್​ ಅವರ ಆಸ್ತಿ ಪ್ರಮಾಣ. ಇವರ ಆಸ್ತಿ ಬರೋಬ್ಬರಿ 100 ಕೋಟಿ ರೂಪಾಯಿಗಳಷ್ಟು ಏರಿಕೆಯಾಗಿದೆ.

ಚರಣಜಿತ್​ ಸಿಂಗ್ ಛನ್ನಿಯವರು 2017ರಲ್ಲಿ ತಮ್ಮ ಆಸ್ತಿ ಮೌಲ್ಯ 14.51 ಕೋಟಿ ರೂಪಾಯಿ ಎಂದು ಘೋಷಿಸಿದ್ದರು. ಅದೇ ಈ ಬಾರಿ 9.45 ಕೋಟಿ ರೂಪಾಯಿ ಎಂದು ಹೇಳಿದ್ದಾರೆ ಎಂದು ಎಡಿಆರ್​ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೇ, ಪಂಜಾಬ್​ ಕಾಂಗ್ರೆಸ್ ಮುಖ್ಯಸ್ಥ ನವಜೋತ್​ ಸಿಂಗ್​ ಸಿಧು ಆಸ್ತಿ 2017ರಲ್ಲಿ 44.65 ಕೋಟಿ ರೂಪಾಯಿ ಇದ್ದಿದ್ದು, ಈ ಬಾರಿ 45.90 ಕೋಟಿ ರೂ. ಆಗಿದ್ದು, ಅಲ್ಲಿಗೆ 1.25 ಕೋಟಿ ರೂಪಾಯಿ ಕಡಿಮೆಯಾದಂತೆ ಆಗಿದೆ. 2017ರ ವಿಧಾನಸಭೆ ಚುನಾವಣೆಯಿಂದ ಇಲ್ಲಿಯವರೆಗೆ ಅಂದರೆ 5 ವರ್ಷದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿಯ ಮೌಲ್ಯದಲ್ಲಿ ಏರಿಕೆ ಕಂಡ ಶಾಸಕರ ಹೆಸರನ್ನೂ ಅಸೋಸಿಯೇಷನ್​ ಫಾರ್​​ ಡೆಮಾಕ್ರಟಿಕ್​ ರಿಫಾರ್ಮ್ಸ್​ ಸಂಸ್ಥೆ (ಎಡಿಆರ್​) ಬಿಡುಗಡೆ ಮಾಡಿದ್ದು, ಅದರಲ್ಲಿ ಮೊದಲ ಸ್ಥಾನದಲ್ಲಿ ಶಿರೋಮಣಿ ಅಕಾಲಿ ದಳದ ಸುಖ್ಬೀರ್​ ಸಿಂಗ್ ಬಾದಲ್​ ಇದ್ದಾರೆ. ಇವರು 2017ರಲ್ಲಿ ತಮ್ಮ ಆಸ್ತಿ 102 ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದ್ದು, ಪ್ರಸಕ್ತ ಸಲದಲ್ಲಿ ಆಸ್ತಿ ಮೌಲ್ಯ 202 ಕೋಟಿ ರೂ.ಎಂದು ಹೇಳಿದ್ದಾರೆ. ಅಲ್ಲಿಗೆ ಬರೋಬ್ಬರಿ 100 ಕೋಟಿ ರೂ.ಹೆಚ್ಚಳವಾದಂತೆ ಆಗಿದೆ.

ಇನ್ನುಳಿದಂತೆ 5ವರ್ಷದಲ್ಲಿ ಆಸ್ತಿ ಹೆಚ್ಚಿಸಿಕೊಂಡವರಲ್ಲಿ ಕಾಂಗ್ರೆಸ್​ನ ಮನ್​ಪ್ರೀತ್​ ಸಿಂಗ್ ಬಾದಲ್​, ಆಮ್​ ಆದ್ಮಿ ಪಕ್ಷದ ಶಾಸಕ ಅಮನ್ ಅರೋರಾ, ಕ್ಯಾಪ್ಟನ್​ ಅಮರಿಂದರ್ ಸಿಂಗ್​ (ಈ ಹಿಂದೆ ಕಾಂಗ್ರೆಸ್​​ನಲ್ಲಿದ್ದು, ಈಗ ಪಂಜಾಬ್​ ಲೋಕ ಕಾಂಗ್ರೆಸ್ ಪಾರ್ಟಿ ಕಟ್ಟಿದವರು) ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದ ಶಾಸಕ ಅಂಗದ್​ ಸಿಂಗ್​ ಸೇರಿದ್ದಾರೆ. ಇವರಲ್ಲಿ ಮನ್​ಪ್ರೀತ್ ಸಿಂಗ್​ ಬಾದಲ್​ ಆಸ್ತಿ ಮೌಲ್ಯ 2017ರಲ್ಲಿ 40 ಕೋಟಿ ರೂ.ಇದ್ದಿದ್ದು, ಈಗ 72 ಕೋಟಿ ರೂ.ಆಗಿದೆ. ಅಂದರೆ 32 ಕೋಟಿ ರೂಪಾಯಿ ಏರಿಕೆಯಾಗಿದೆ. ಹಾಗೇ, ಅಮನ್​ ಅರೋರಾ ಆಸ್ತಿ ಮೌಲ್ಯದಲ್ಲಿ 29 ಕೋಟಿ ರೂಪಾಯಿ ಹೆಚ್ಚಳವಾಗಿದೆ.

ಪಕ್ಷದ ಪ್ರಕಾರ ಹೋಲಿಕೆ ಮಾಡುವುದಾದರೆ ಕಾಂಗ್ರೆಸ್ ಪಕ್ಷದ ಸುಮಾರು 67 ಶಾಸಕರ ಆಸ್ತಿ ಕಳೆದ 5ವರ್ಷಗಳಲ್ಲಿ 1.47 ಕೋಟಿ ರೂ.ಏರಿಕೆಯಾಗಿದ್ದು, ಶಿರೋಮಣಿ ಅಕಾಲಿ ದಳದ ಶಾಸಕರದ್ದು ಸರಾಸರಿ 8.18 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಆಮ್​ ಆದ್ಮಿ ಪಕ್ಷದ 10 ಶಾಸಕರ ಆಸ್ತಿಯ ಬೆಲೆ 3.21 ಕೋಟಿ ರೂಪಾಯಿ ಏರಿದೆ. ಪಂಜಾಬ್​​ನಲ್ಲಿ ಫೆ.20ರಂದು 117 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 101 ಶಾಸಕರು ಸಲ್ಲಿಸಿರುವ ಅಫಿಡಿವಿಟ್​ ವಿಶ್ಲೇಷಣೆಯ ವರದಿಯ ಆಧಾರದ ಮೇಲೆ ಎಡಿಆರ್ ಬುಧವಾರ ಆಸ್ತಿ ಮೌಲ್ಯದ ಪಟ್ಟಿ ಬಿಡುಗಡೆ ಮಾಡಿದೆ.

TV9 Kannada


Leave a Reply

Your email address will not be published. Required fields are marked *