ಪಕ್ಷಗಳು ಚುನಾವಣಾ ತಯಾರಿ ಮಾಡಿಕೊಳ್ಳುವಾಗಲೇ ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿದ್ದಾರೆ! | Siddaramaiah resorts to fly in chopper even other party leaders begin preparations for 2023 polls ARB


ಬಾಗಲಕೋಟೆ:  2023 ರ ವಿಧಾನ ಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ (Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಅನ್ನೋದು ಕುತೂಹಲ ಹುಟ್ಟಿಸಿರುವ ಸಂಗತಿಯಾಗಿದೆ. ಅವರ ಬಾgಲಕೋಟೆಯಲ್ಲಿ (Bagalkot) ಓಡಾಡುತ್ತಿರುವುದು ಮತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದನ್ನು ಗಮನಿಸಿದರೆ ಅವರು ಬಾದಾಮಿ ಕ್ಷೇತ್ರದಿಂದಲೇ (Badami constituency) ಮರು ಆಯ್ಕೆ ಬಯಸುತ್ತಿರುವುದು ವೇದ್ಯವಾಗುತ್ತದೆ. ಶುಕ್ರವಾರವೂ ಸಿದ್ದರಾಮಯ್ಯ ಜಿಲ್ಲೆಯಲ್ಲಿ ನಡೆದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮೊದಲಿಗೆ ಅವರು ಸೂಳಿಭಾವಿಯಲ್ಲಿನ ಸಹಕಾರಿ ಸಂಘದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡರು. ಆಮೇಲೆ ಗಾಯತ್ರಿ ಪತ್ತಿನ ಸಹಕಾರಿ ಸಂಘದ ಹೊಸ ಕಟ್ಟಡದ ಉದ್ಘಾಟನೆಯಲ್ಲಿ ಭಾಗಿಯಾದರು.

ಗಮನಿಸಬೇಕಾದ ಸಂಗತಿಯೇನೆಂದರೆ ವಿಪಕ್ಷ ನಾಯಕರು ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿದ್ದಾರೆ. ಕಳೆದ ವಾರವಷ್ಟೇ ಅವರು ದಾವಣಗೆರೆಯ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಚಾಪರ್ನಲ್ಲೇ ಬಂದಿದ್ದರು. ಅವರು ಹೇಗಾದರೂ ಓಡಾಡಲಿ, ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ದುಡ್ಡು ಇರುವಂತಿದೆ, ಹಾಗಾಗೇ ಪಕ್ಷದ ಶಾಸಕರೊಬ್ಬರಿಗೆ ಅದು ಹೆಲಿಕಾಪ್ಟರ್ ಹೈರ್ ಮಾಡಬಲ್ಲದು, ಆದರೆ ವಿಷಯ ಅದಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಈಗಿಂದಲೇ ತಯಾರಿ ಶುರು ಮಾಡಿವೆ. ಈ ಬಾರಿ ಆಪ್ ಕೂಡ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಜೆಡಿ(ಎಸ್) ಪಕ್ಷದ ಕುಮಾರಸ್ವಾಮಿ ಅವರು ಸಂಪೂರ್ಣವಾಗಿ ರೈತರ ಪರವಾಗಿರುವ ಮೌಖಿಕ ಪ್ರಣಾಳಿಕೆ ತಯಾರು ಮಾಡಿಕೊಂಡು ಎಲ್ಲೆಡೆ ಅದನ್ನು ಹೇಳುತ್ತಿದ್ದಾರೆ.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಮ್ಮೆಲ್ಲ ಬೆಂಬಲಿಗರೊಂದಿಗೆ ಆಪ್ ಸೇರಿರುವುದು ಅವರಲ್ಲಿ ಆತಂಕ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ.

ಕುಮಾರ ಸ್ವಾಮಿಯವರು ತಮ್ಮ ಪಕ್ಷ ನಿರಾಯಾಸವಾಗಿ 95 ಸೀಟು ಗೆಲ್ಲಲಿದೆ ಅನ್ನುತ್ತಿದ್ದಾರೆ. ಯಾರೇನೇ ತಿಪ್ಪರಲಾಗ ಹಾಕಿದರೂ ನಾವೇ ಸರ್ಕಾರ ರಚಿಸೋದು ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

ಎಲ್ಲರ ಲೆಕ್ಕಾಚಾರಗಳು ಜೋರಾಗಿವೆ ಮಾರಾಯ್ರೇ !

TV9 Kannada


Leave a Reply

Your email address will not be published. Required fields are marked *