ಬೆಂಗಳೂರು: ಶಾಸಕ ಜಮೀರ್ ಅಹಮದ್ ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಹುಪರಾಕ್ ಹೇಳಿದ್ದು, ಪಕ್ಷ ಹೇಳಿದ್ದಕ್ಕಿಂತ ಹೆಚ್ಚು ಜನರ ಸೇವೆ ಮಾಡುತ್ತಿದ್ದಾರೆ. ಜಮೀರ್ ಆಡಳಿತ ಪಕ್ಷದವರಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.

ರಾಯಪುರ ವಾರ್ಡ್ ನಲ್ಲಿ ಜಮೀರ್ ಅಹಮದ್ ಆಯೋಜಿಸಿದ್ದ ದಿನಸಿ ಕಿಟ್ ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಮೀರ್ ಮನುಷ್ಯತ್ವ ಇರುವ ಶಾಸಕ. ಯಾರೇ ಬಂದರೂ, ಸಾಲ ಮಾಡಿಯಾದರೂ ಜನರಿಗೆ ಸಹಾಯ ಮಾಡುತ್ತಾರೆ. ಇಂಥ ಶಾಸಕರನ್ನು ಪಡೆದ ಚಾಮರಾಜಪೇಟೆ ಜನರು ಧನ್ಯರು. ಜಮೀರ್ ಇಲ್ಲೇ ಗೆದ್ದು ಮುಂದೆ ಸಚಿವರಾಗಲಿ ಎಂದು ಹಾಡಿ ಹೊಗಳಿದ್ದಾರೆ.

ಇದೇ ವೇಳೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಚಾಮರಾಜಪೇಟೆ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಪದೇ ಪದೇ ಹೋಗುತ್ತಾರೆ ಎಂದು ಬಹಳ ಜನ ಪ್ರಶ್ನಿಸುತ್ತಾರೆ. ತಮ್ಮ ಕ್ಷೇತ್ರಕ್ಕೆ ಜಮೀರ್ ಪದೇ ಪದೇ ಕರೆಯುತ್ತಾರೆ, ಅದಕ್ಕೆ ಬರುತ್ತಿರುತ್ತೇನೆ. ಬಾದಾಮಿ ಬಿಟ್ಟು ಚಾಮರಾಜಪೇಟೆಯಲ್ಲೇ ಸ್ಪರ್ಧಿಸಲು ಜಮೀರ್ ಹೇಳುತ್ತಾರೆ. ಅದು ಜಮೀರ್ ಖಾನ್ ಔದಾರ್ಯ, ಈ ಕ್ಷೇತ್ರಕ್ಕೆ ಬನ್ನಿ ಎಂದು ಔದಾರ್ಯ ತೋರಿಸುತ್ತಿದ್ದಾರೆ. ಆದರೆ ನಾನು ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ ಎಂದರು. ಈ ವೇಳೆ ಸಿದ್ದರಾಮಯ್ಯನವರಿಗೆ ಚಾಮರಾಜಪೇಟೆಯಲ್ಲೇ ಸ್ಪರ್ಧಿಸಿ ಎಂದು ಜಮೀರ್ ಒತ್ತಾಯಿಸಿದ್ದು, ಜಮೀರ್ ಬೆಂಬಲಿಗರು ಸಹ ಇದಕ್ಕೆ ದನಿಗೂಡಿಸಿದರು. ಬಳಿಕ ಅದೇನೇ ಇರಲಿ, ಅದರ ಬಗ್ಗೆ ಆಮೇಲೆ ಯೋಚನೆ ಮಾಡೋಣ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಯಪುರ ವಾರ್ಡ್ ನಲ್ಲಿ ಶಾಸಕ ಜಮೀರ್ ಅಹಮದ್ ರಿಂದ ದಿನಸಿ ಕಿಟ್ ಗಳ ವಿತರಣೆ ಕಾರ್ಯಕ್ರಮ ನಡೆಸಲಾಯಿತು. 300 ಜನ ಪೌರ ಕಾರ್ಮಿಕರಿಗೆ ಉಚಿತ ಕಿಟ್ ಗಳ ವಿತರಣೆ ಮಾಡಲಾಯಿತು.

The post ಪಕ್ಷ ಹೇಳಿದ್ದಕ್ಕಿಂತ ಹೆಚ್ಚು ಸೇವೆ ಮಾಡುತ್ತಿದ್ದಾರೆ- ಜಮೀರ್ ಗೆ ಸಿದ್ದರಾಮಯ್ಯ ಬಹುಪರಾಕ್ appeared first on Public TV.

Source: publictv.in

Source link