ಬೆಂಗಳೂರು: ಸಿಎಂ ಯಡಿಯೂರಪ್ಪ ಬದಲಾವಣೆ ಸಂಬಂಧ ಬಿಜೆಪಿ ಹೈಕಮಾಂಡ್ ಹಾಗೂ ಪಕ್ಷ ಕೈ ಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದು ವಲಸಿಗ ಸಚಿವರು ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರಾದ ಬಿ.ಸಿ.ಪಾಟೀಲ್ ಹಾಗೂ ಶಿವರಾಂ ಹೆಬ್ಬಾರ್ ಜಂಟಿ ಹೇಳಿಕೆ ನೀಡಿದ್ದು, ನಾಯಕತ್ವ ಬದಲಾವಣೆ ಎಲ್ಲವೂ ಊಹಾಪೋಹ ಅಷ್ಟೆ. ಊಹಾಪೋಹಗಳಿಗೆ ನಾವು ಉತ್ತರ ಕೊಡುವುದಿಲ್ಲ. ಯಡಿಯೂರಪ್ಪನವರಾಗಲಿ ಹೈಕಮಾಂಡ್ ಆಗಲಿ ಯಾರೂ ನಾಯಕತ್ವ ಬದಲಾವಣೆ ಬಗ್ಗೆ ಎಲ್ಲೂ ಹೇಳಿಲ್ಲ. ನಾವು ಸಚಿವರುಗಳು ಊಟಕ್ಕೆ ಸೇರುತ್ತಿರುತ್ತೇವೆ ನಿನ್ನೆಯು 4-5 ಜನ ಊಟಕ್ಕೆ ಸೇರಿದ್ದೆವು ಎಂದರು.

ನಾಯಕತ್ವ ಬದಲಾವಣೆ ಇಲ್ಲ ಎಂದು ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಆದ್ದರಿಂದ ನಮಗೆ ಯಾವುದೇ ಗೊಂದಲ ಇಲ್ಲ. ನಾಯಕತ್ವ ಬದಲಾವಣೆಗೆ ಹೈ ಕಮಾಂಡ್ ಮುಂದಾದರೆ ಅದು ಅವರ ತೀರ್ಮಾನ. ನಾವು ಯಡಿಯೂರಪ್ಪ ಹಾಗೂ ಭಾರತೀಯ ಜನತಾಪಾರ್ಟಿಯನ್ನು ನಂಬಿಕೊಂಡು ಬಂದವರು. ಪಕ್ಷಕ್ಕೆ ಬಂದ ಮೇಲೆ ಪಕ್ಷದ ತೀರ್ಮಾನಕ್ಕೆ ಹೈ ಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ಸಿಎಂ ಬದಲಾದರೆ ಸಚಿವ ಸ್ಥಾನ ಕೈ ತಪ್ಪುತ್ತೆ ಎಂಬ ಆತಂಕ ನಮಗಿಲ್ಲ ಎಂದು ತಿಳಿಸಿದರು.

ಮಾಧ್ಯಮಗಳಲ್ಲಿ ಬರುತ್ತಿರುವುದು ಊಹಪೋಹದ ಸುದ್ದಿ. ಅದರ ಬಗ್ಗೆ ನಾವು ಮಾತನಾಡುವುದಿಲ್ಲ. ಸದ್ಯ ಯಾವುದೇ ಬದಲಾವಣೆ ಇಲ್ಲ, ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದಿದ್ದಾರೆ. ಈ ಮೂಲಕ ಬದಲಾವಣೆ ಅನಿವಾರ್ಯವಾದರೆ ತಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಬೇಕಾದ ಸಿದ್ಧತೆಯನ್ನು ವಲಸಿಗ ಸಚಿವರು ಆರಂಭಿಸಿದಂತಿದೆ.

The post ಪಕ್ಷ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ವಲಸಿಗ ಸಚಿವರು appeared first on Public TV.

Source: publictv.in

Source link