ಪಠ್ಯದಿಂದ ತಮ್ಮ ಪಾಠ ಕೈಬಿಡುವಂತೆ ಹಲವು ಲೇಖಕರಿಂದ ಮನವಿ: ಸಂಕಷ್ಟಕ್ಕೆ ಸಿಲುಕಿದ ಶಿಕ್ಷಣ ಇಲಾಖೆ | Many Writers Requests Education Department to withdraw their writings from text books


ಪಠ್ಯದಿಂದ ತಮ್ಮ ಪಾಠ ಕೈಬಿಡುವಂತೆ ಹಲವು ಲೇಖಕರಿಂದ ಮನವಿ: ಸಂಕಷ್ಟಕ್ಕೆ ಸಿಲುಕಿದ ಶಿಕ್ಷಣ ಇಲಾಖೆ

ಬರಹಗಾರರಾದ ಜಿ.ರಾಮಕೃಷ್ಣ ಮತ್ತು ದೇವನೂರು ಮಹಾದೇವ

ಇದೀಗ ಲೇಖಕರು ಹಾಗೂ ಕವಿಗಳಿಂದಲೂ ಪಠ್ಯದಿಂದ ತಮ್ಮ ಪಾಠಗಳನ್ನು ಕೈಬಿಡುವಂತೆ ಒತ್ತಾಯ ಕೇಳಿಬರುತ್ತಿದೆ.

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ (Text Book Revision Controversy) ವಿವಾದವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಬದಲಾವಣೆಗೆ ವಿರೋಧ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿದೆ. ಇದೀಗ ಲೇಖಕರು ಹಾಗೂ ಕವಿಗಳಿಂದಲೂ ಪಠ್ಯದಿಂದ ತಮ್ಮ ಪಾಠಗಳನ್ನು ಕೈಬಿಡುವಂತೆ ಒತ್ತಾಯ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಇದೊಂದು ಚಳವಳಿಯಾಗಿ ಬೆಳೆದರೆ ಶಿಕ್ಷಣ ಇಲಾಖೆಯು ಸಂಕಷ್ಟ ಪರಿಸ್ಥಿತಿಗೆ ಸಿಲುಕಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪಠ್ಯದಿಂದ ತಮ್ಮ ಪಾಠ ಕೈಬಿಡಬೇಕೆಂದು ಕೋರಿ ಹಿರಿಯ ಸಾಹಿತಿ ದೇವನೂರು ಮಹಾದೇವ ಮನವಿ ಮಾಡಿದ್ದರು. ಇದಾದ ನಂತರ ಇದೀಗ ಡಾ.ಜಿ.ರಾಮಕೃಷ್ಣ ಸಹ ಭಗತ್​ಸಿಂಗ್ ಕುರಿತ ತಮ್ಮ ಲೇಖನ ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ. ನೂತನ ಪಠ್ಯ ಪರಿಷ್ಕರಣೆ ವೇಳೆ 10ನೇ ತರಗತಿಯಲ್ಲಿದ್ದ ಡಾ.ಜಿ.ರಾಮಕೃಷ್ಣ ಅವರ ಭಗತ್ ಸಿಂಗ್ ಪಾಠ ತೆಗೆಯಲಾಗಿತ್ತು. ಇದೊಂದು ವಿವಾದದ ತಿರುವು ಪಡೆದ ನಂತರ ಶಿಕ್ಷಣ ಇಲಾಖೆಯು ಭಗತ್ ಸಿಂಗ್ ಕುರಿತ ಪಾಠವನ್ನು ಸೇರಿಸಿತ್ತು. ಆದರೆ ಈಗ ಡಾ.ಜಿ.ರಾಮಕೃಷ್ಣ ಅವರು ನಾನು ಬರೆದ ಲೇಖನ ಬಳಸಲು ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾರೆ.

‘ನಮ್ಮ ರಾಜ್ಯದ ಶಾಲೆಗಳ ಪಠ್ಯಪುಸ್ತಕಗಳ ಪರಿಷ್ಕರಣೆಯು ತೀರಾ ಅಪಾಯಕಾರಿ ಮಾರ್ಗದಲ್ಲಿ ಸಾಗುತ್ತಿದೆ. ವೈಚಾರಿಕ ಮತ್ತು ವೈಜ್ಞಾನಿಕ ಮಾರ್ಗದಲ್ಲಿ ನಡೆಯುತ್ತಿಲ್ಲ. ಶಿಕ್ಷಣವನ್ನು ಕೆಟ್ಟ ರಾಜಕೀಯಕ್ಕೆ ಗುರಿಮಾಡಲಾಗುತ್ತಿರುವುದು ಸರ್ವಥಾ ಕ್ಷಮಾರ್ಹವಲ್ಲ. ಮಕ್ಕಳಿಗೆ ವಿಷ ಉಣಿಸುವುದು ಬೌದ್ಧಿಕ ಕ್ಷೇತ್ರದಲ್ಲಿ ದುರಂತಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ನನ್ನ ಯಾವುದೇ ಬರಹವನ್ನು ಪಠ್ಯಪುಸ್ತಕದ ಪರಿಧಿಯಿಂದ ಹೊರಗಿಡುವುದು ಸೂಕ್ತ. ನನ್ನ ಯಾವುದಾದರು ಬರಹವನ್ನು ಆಯ್ಕೆ ಮಾಡಿಕೊಂಡಿದ್ದರು ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲ’ ಎಂದು ಅವರು ತಮ್ಮ ನಿಲುವು ಸ್ಪಷ್ಪಪಡಿಸಿದ್ದಾರೆ.

ಪಠ್ಯದಲ್ಲಿ ಹೆಡಗೆವಾರ್: ವಿರೋಧ

ಪಠ್ಯಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ಸಂಸ್ಥಾಪಕ ಕೇಶವ ಬಲಿರಾಂ ಹೆಡಗೆವಾರ್ ಅವರ ಬರಹ ಸೇರ್ಪಡೆ ಮಾಡಿರುವುದನ್ನೂ ಹಲವರು ವಿರೋಧಿಸಿದ್ದಾರೆ. ಪಠ್ಯಪುಸ್ತಕ ರಚನೆ, ಪರಿಷ್ಕರಣೆ ಮತ್ತು ಮರು ಪರಿಷ್ಕರಣೆಗೆ ಹಲವರು ಪಟ್ಟು ಹಿಡಿದಿದ್ದಾರೆ. ಹೀಗೆ ಒತ್ತಾಯಿಸುತ್ತಿರುವವರಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು ಹಾಗೂ ಕವಿಗಳೂ ಸೇರಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಬುಧವಾರ (ಮೇ 25) ಶಿಕ್ಷಣ ತಜ್ಞರು ಮತ್ತು ಚಿಂತಕರೊಂದಿಗೆ ನಗರದ ಗಾಂಧಿ ಭವನದಲ್ಲಿ ಚಿಂತಕರು ಚರ್ಚೆ ನಡೆಸಲಿದ್ದಾರೆ.

ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ, ಪ್ರೊ ಕೆ.ಮರುಳಸಿದ್ದಪ್ಪ, ಶ್ರೀಪಾದ ಭಟ್, ಬಂಜಗೆರೆ ಜಯಪ್ರಕಾಶ್, ಎಲ್.ಹನುಮಂತಯ್ಯ, ಇಂದೂಧರ ಹೊನ್ನಾಪುರ, ರಾಜೇಂದ್ರ ಚೆನ್ನಿ, ಜಿ ರಾಜಶೇಖರಮೂರ್ತಿ, ಎಸ್.ಜಿ.ಸಿದ್ದರಾಮಯ್ಯ, ವಸುಂಧರಾ ಭೂಪತಿ, ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಹಲವು ಚಿಂತಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

TV9 Kannada


Leave a Reply

Your email address will not be published. Required fields are marked *