ಪ್ರಜ್ವಲ್ ದೇವರಾಜ್, ಮಾಲಾಶ್ರೀ, ಕೋಟಿ ರಾಮು
ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ ರಾಮು (Koti Ramu) ಅವರ ಹೆಸರಿನ ಜತೆ ‘ಕೋಟಿ’ ಎಂಬ ವಿಶೇಷಣ ಕೂಡ ಸೇರಿಕೊಂಡಿತ್ತು. ಸಿನಿಮಾ ಮೇಲೆ ಅವರಿಗೆ ಅಷ್ಟರಮಟ್ಟಿಗೆ ಪ್ರೀತಿ ಇತ್ತು. ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ರಾಮು ನಿರ್ಮಿಸಿದ ಸಾಹಸ ಪ್ರಧಾನ ಚಿತ್ರಗಳು ಜನಮನ ಗೆದ್ದಿದ್ದು ಈಗ ಇತಿಹಾಸ. ಕೊರೊನಾದಿಂದ ಈ ವರ್ಷ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ರಾಮು ನಿಧನದಿಂದ ಅವರ ಪತ್ನಿ ಮಾಲಾಶ್ರೀ (Malashree) ಕಂಗೆಟ್ಟಿದ್ದರು. ಈಗ ಪತಿಯ ಕನಸನ್ನು ನನಸು ಮಾಡಲು ಅವರು ಮುಂದೆ ಬಂದಿದ್ದಾರೆ. ರಾಮು ನಿರ್ಮಾಣ ಮಾಡಿದ ಕೊನೇ ಸಿನಿಮಾ ‘ಅರ್ಜುನ್ ಗೌಡ’ (Arjun Gowda Movie) ತೆರೆಕಾಣಿಸಲು ಮಾಲಾಶ್ರೀ ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕ.
ಪ್ರಜ್ವಲ್ ದೇವರಾಜ್ ನಟನೆಯ ‘ಅರ್ಜನ್ ಗೌಡ’ ಒಂದು ಆ್ಯಕ್ಷನ್ ಪ್ರಧಾನ ಸಿನಿಮಾ. ಅದರ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈಗಾಗಲೇ ಟ್ರೇಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಚಿತ್ರಕ್ಕೆ ಈಗ ರಿಲೀಸ್ ದಿನಾಂಕ ನಿಗದಿ ಆಗಿದೆ. ಡಿ.31ರಂದು ‘ಅರ್ಜುನ್ ಗೌಡ’ ಸಿನಿಮಾವನ್ನು ತೆರೆಕಾಣಿಸಲು ಮಾಲಾಶ್ರೀ ನಿರ್ಧರಿಸಿದ್ದಾರೆ.
ಈ ಚಿತ್ರಕ್ಕೆ ಲಕ್ಕಿ ಶಂಕರ್ ನಿರ್ದೇಶನ ಮಾಡಿದ್ದಾರೆ. ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ಜೈ ಆನಂದ್ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಜ್ವಲ್ ದೇವರಾಜ್ ಅವರಿಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ಅಭಿನಯಿಸಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ಪ್ರಿಯಾಂಕಾ ಅವರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಇನ್ನಷ್ಟು ಫೇಮಸ್ ಆಗಿದ್ದಾರೆ. ಅವರ ಸಿನಿಮಾ ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಮಾಲಾಶ್ರೀ ಅವರು ಈಗಾಗಲೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ಅರ್ಜುನ್ ಗೌಡ’ ಚಿತ್ರದ ಪೋಸ್ಟರ್ಗಳನ್ನು ಹಂಚಿಕೊಂಡು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ‘ಸ್ಪರ್ಶ’ ರೇಖಾ, ದಿನೇಶ್ ಮಂಗಳೂರು, ಸಾಧು ಕೋಕಿಲ, ರಾಜ್ ದೀಪಕ್ ಶೆಟ್ಟಿ, ರಾಹುಲ್ ದೇವ್, ಕಡ್ಡಿಪುಡಿ ಚಂದ್ರು ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಡಿಸೆಂಬರ್ನಲ್ಲಿ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅವುಗಳ ಜತೆ ‘ಅರ್ಜುನ್ ಗೌಡ’ ಸಹ ಪೈಪೋಟಿಗೆ ಇಳಿಯಲಿದೆ.