ಮೈಸೂರು: ಕರುಣೆ ಇಲ್ಲದೇ ಮನುಕುಲವನ್ನ ಕಾಡುತ್ತಿರುವ ಪಾಪಿ ಕೊರೊನಾ ದಂಪತಿಯೊಂದನ್ನ ಬಲಿ ಪಡೆದಿದೆ. ಪತ್ನಿಯ ತಿಥಿ ದಿನವೇ ಪತಿಯನ್ನ ಬಲಿ ಪಡೆದು ಅಟ್ಟಹಾಸಗೈದಿದೆ.

ಮೈಸೂರಿನ ಗಂಗೋತ್ರಿ ಲೇಔಟ್​ ನಿವಾಸಿಗಳಾಗಿದ್ದ ಕೆ.ಸುಷ್ಮಾ(37) ,ಡಿ.ಪ್ರಸನ್ನ(44) ಕೊರೊನಾಗೆ ಸಾವನ್ನಪ್ಪಿದ ದಂಪತಿ. ಕೆ.ಸುಷ್ಮಾ ಹಾಸನದ ಸರ್ಕಾರಿ ಕಾಲೇಜಿನಲ್ಲಿ ಅಥಿತಿ ಉಪನ್ಯಾಸಕಿಯಾಗಿದ್ದರು. ಇನ್ನು ಡಿ.ಪ್ರಸನ್ನ ಅವರು ಮೈಸೂರು ವಿವಿ ತೋಟಗಾರಿಕೆ ವಿಭಾಗದ ತಾತ್ಕಾಲಿಕ ವಾಹನ ಚಾಲಕರಾಗಿ ಕೆಲಸ ಮಾಡ್ತಿದ್ದರು.

ತಿಂಗಳ ಹಿಂದಷ್ಟೇ ಪತಿ ಪ್ರಸನ್ನಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಪತಿ ಉಳಿಸಿಕೊಳ್ಳಲು ಪತ್ನಿ ಸುಷ್ಮಾ ಪ್ರಯತ್ನ ಮಾಡಿದ್ದರು. ಅಲ್ಲೇ ಈ ದಂಪತಿ ಮನೆಯಲ್ಲಿಯೇ ಹೋಂ ಕ್ವಾರಂಟೀನ್​​ನಲ್ಲಿ ಇತ್ತು. ಆದರೆ ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮೆ 16 ರಂದು ಸುಷ್ಮಾ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಬಳಿಕ ಮೇಟಗಳ್ಳಿ ಕೋವಿಡ್ ಕೇಂದ್ರಕ್ಕೆ ಪ್ರಸನ್ನ ದಾಖಲಾಗಿದ್ದ. ಆದರೆ ಪತ್ನಿಯ ತಿಥಿ ಕಾರ್ಯದ ದಿನದಂದು ಪ್ರಸನ್ನ ಕೂಡ ಅಸುನೀಗಿದ್ದಾರೆ. ಇನ್ನು ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ಇದೀಗ ಅನಾಥರಾಗಿದ್ದಾರೆ.

The post ಪತ್ನಿಯ ತಿಥಿ ದಿನವೇ ಪತಿಯ ಬಲಿ ಪಡೆದ ಕೊರೊನಾ, ಇಬ್ಬರು ಮಕ್ಕಳು ಅನಾಥ appeared first on News First Kannada.

Source: newsfirstlive.com

Source link