ಪದವಿ ತರಗತಿಗಳಲ್ಲಿ ಕನ್ನಡ ವಿಷಯ ಅಧ್ಯಯನ ಕಡ್ಡಾಯ ಆದೇಶ; ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆ | Kannada Language Compulsory Subject In UG Courses Karnataka High Court To Consider Interim Relief Against Government Order

ಪದವಿ ತರಗತಿಗಳಲ್ಲಿ ಕನ್ನಡ ವಿಷಯ ಅಧ್ಯಯನ ಕಡ್ಡಾಯ ಆದೇಶ; ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆ

ಹೈಕೋರ್ಟ್

ಬೆಂಗಳೂರು: ಪದವಿ ಕೋರ್ಸ್‌ಗಳ ಎಲ್ಲ ತರಗತಿಯಲ್ಲೂ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕು ಎಂಬ ಸರ್ಕಾರದ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್​ನಲ್ಲಿ ಅರ್ಜಿ ದಾಖಲಾಗಿದೆ. ಆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ನೀಡಿದೆ. ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆಯನ್ನು ನಿನ್ನೆ ನಡೆಸಿದ್ದ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಹಾಗೇ, ಕನ್ನಡ ಕಡ್ಡಾಯದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಪದವಿ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕಡ್ಡಾಯ ವಿಷಯವನ್ನಾಗಿ ಕಲಿಯಬೇಕು ಎಂದು ರಾಜ್ಯ ಸರ್ಕಾರ ಆಗಸ್ಟ್ 7 ಮತ್ತು ಸೆಪ್ಟೆಂಬರ್ 15ರಂದು ಎರಡು ಆದೇಶಗಳನ್ನು ಹೊರಡಿಸಿತ್ತು. ಇದು ನೂತನ ರಾಷ್ಟ್ರೀಯ ನೀತಿಗೆ ವಿರುದ್ಧವಾಗಿದೆ. ವಿದ್ಯಾರ್ಥಿಗಳು ಇದೇ ಭಾಷೆ ಅಥವಾ ವಿಷಯವನ್ನು ಕಲಿಯಬೇಕೆಂದು ಒತ್ತಾಯ ಹೇರುವಂತಿಲ್ಲ ಎಂದು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಎಸ್.ಎಸ್ ನಾಗಾನಂದ್ ಈ ಬಗ್ಗೆ ಹೈಕೋರ್ಟ್​ನಲ್ಲಿ ವಾದ ಮಂಡಿಸಿದ್ದು, ಇದು ಸುಮಾರು 1,32,000 ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿ ದೆಹಲಿಯಿಂದ ಕರ್ನಾಟಕಕ್ಕೆ ಶಿಕ್ಷಣ ಕಲಿಯಲು ಬಂದರೆ ಆತ ಪದವಿಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂಬುದು ಎಷ್ಟರ ಮಟ್ಟಿಗೆ ಸರಿ? ಇದೇ ರೀತಿ ತಮಿಳುನಾಡಿನಲ್ಲಿ ತಮಿಳನ್ನು, ಉತ್ತರ ಪ್ರದೇಶದಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಿದರೆ ನಾನಾ ಕಾರಣಗಳಿಂದ ಬೇರೆ ರಾಜ್ಯಗಳಲ್ಲಿ ಓದಬೇಕಾದ ಅನಿವಾರ್ಯತೆ ಇರುವ ಮಕ್ಕಳ ಕತೆಯೇನು? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರವು ಪದವಿ ಹಂತದಲ್ಲಿ ಕನ್ನಡ ಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್‌, ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ಗುರುವಾರ ನಡೆಸಿದೆ.

ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವುದರಿಂದ 12ನೇ ತರಗತಿ ಪೂರೈಸಿ ಕರ್ನಾಟಕಕ್ಕೆ ಶಿಕ್ಷಣ ಮುಂದುವರಿಸಲು ಬರುವ ಇತರೆ ರಾಜ್ಯಗಳ ವಿದ್ಯಾರ್ಥಿಗಳು ಕನ್ನಡವನ್ನು ಕಲಿತಿರುವುದಿಲ್ಲ. ಇದರಿಂದ ಪದವಿ ಹಂತದಲ್ಲಿ ಅವರಿಗೆ ಸಮಸ್ಯೆಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ -2020ರಲ್ಲಿ ಪ್ರಾದೇಶಿಕ ಭಾಷೆಯನ್ನು ಕಡ್ಡಾಯ ಭಾಷೆಯನ್ನಾಗಿ ಕಲಿಯಬೇಕು ಎಂದು ಹೇಳಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಹಾಗೇ, ರಾಜ್ಯ ಸರ್ಕಾರದ ಆಕ್ಷೇಪಾರ್ಹ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದ್ದಾರೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಕನ್ನಡ ಮಾತಾಡಲು ನಮ್ಮಲ್ಲಿ ಕೀಳರಿಮೆ ಬೇಡ, ಕನ್ನಡಿಗರೇ ಭಾಷೆಯನ್ನು ಅಸಡ್ಡೆ ಮಾಡುತ್ತಿದ್ದಾರೆ: ಲೂಸ್ ಮಾದ

ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನ; ಸಂಕೇತ ಭಾಷೆಗಳ ಅಗತ್ಯತೆ ಮತ್ತು ಮಹತ್ವ ತಿಳಿಯಿರಿ

TV9 Kannada

Leave a comment

Your email address will not be published. Required fields are marked *