ನವದೆಹಲಿ: ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಜೆಹಂಗೀರ್ ಸೊರಾಬ್ಜಿ ವಿಧಿವಶರಾಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸೊರಾಬ್ಜಿ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ತಗುಲಿತ್ತು.  ಪತ್ನಿ ಕೋವಿಡ್​​ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೊರಾಬ್ಜಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಸೋಲಿ ಜೆಹಂಗೀರ್ ಸೊರಬ್ಜಿ ಅವರು 1930 ರಲ್ಲಿ ಮುಂಬೈನಲ್ಲಿ ಜನಿಸಿದರು. 1953ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಲಾ ಪ್ರ್ಯಾಕ್ಟೀಸ್​ ಪ್ರಾರಂಭಿಸಿದ್ರು. 1971ರಲ್ಲಿ ಅವರನ್ನು ಸುಪ್ರೀಂಕೋರ್ಟ್ ಹಿರಿಯ ವಕೀಲರನ್ನಾಗಿ ನೇಮಿಸಿತು.  ಮೊದಲು 1989ರಲ್ಲಿ ಮತ್ತು ನಂತರ 1998 ರಿಂದ 2004 ರವರೆಗೆ ಸೊರಾಬ್ಜಿ ಅವರು  ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು.

ಮಾನವ ಹಕ್ಕುಗಳ ವಕೀಲರಾದ ಸೊರಾಬ್ಜಿಯವರನ್ನು 1997ರಲ್ಲಿ ನೈಜೀರಿಯಾಗೆ ವಿಶ್ವಸಂಸ್ಥೆಯ ಕಾರ್ಯಕಲಾಪ ವರದಿಗಾರರಾಗಿ ನೇಮಿಸಲಾಗಿತ್ತು. ಅವರು ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

ಸೊರಾಬ್ಜಿ ಅವರು ಸಾಂವಿಧಾನಿಕ ಕಾನೂನು ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಹೆಸರುವಾಸಿ. 1999ರ ಅಟ್ಲಾಂಟಿಕ್ ಡೌನಿಂಗ್ ಪ್ರಕರಣದಲ್ಲಿ ಪಾಕಿಸ್ತಾನ ವಿರುದ್ಧದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಗೆಲ್ಲಲು ಅವರ ಪಾತ್ರವಿತ್ತು. ಮುಂಬೈನಲ್ಲಿ 2008 ರಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಸೊರಾಬ್ಜಿ ಅವರು ಸುಪ್ರೀಂಕೋರ್ಟ್​​ನಲ್ಲಿ ಪಿಐಎಲ್ ಸಲ್ಲಿಸುವ ಮೂಲಕ ಭಯೋತ್ಪಾದಕರನ್ನು ನಿಭಾಯಿಸಲು ಮತ್ತು ನಾಗರಿಕರ ಜೀವನ ಹಕ್ಕನ್ನು ಹೊಂದಿರುವ ವಾತಾವರಣ ನಿರ್ಮಾಣಕ್ಕೆ ಶ್ರಮ ವಹಿಸಿದ್ದರು. ಕೇಂದ್ರಕ್ಕೆ ವಿಶೇಷ ಶಸ್ತ್ರಸಜ್ಜಿತ ತಂಡ ರಚಿಸುವಂತೆ ಆದೇಶ ಮಾಡಿಸಿದ ಕೀರ್ತಿ ಇವರಿಗಿದೆ.

ಸೋಲಿ ಸೊರಾಬ್ಜಿಯವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ , ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

The post ಪದ್ಮವಿಭೂಷಣ ಪುರಸ್ಕೃತ, ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಕೊರೊನಾದಿಂದ ನಿಧನ appeared first on News First Kannada.

Source: newsfirstlive.com

Source link