ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ನಂದಾ ಪ್ರಸ್ಟಿ ನಿಧನ; ಪ್ರಧಾನಿ ಮೋದಿಯವರಿಂದ ಸಂತಾಪ | Padma Shri Nanda Prusty of Odisha dies today


ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ನಂದಾ ಪ್ರಸ್ಟಿ ನಿಧನ; ಪ್ರಧಾನಿ ಮೋದಿಯವರಿಂದ ಸಂತಾಪ

ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಕೈಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದ ನಂದಾ ಪ್ರಸ್ಟಿ

ಒಡಿಶಾದ ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಂದಾ ಪ್ರಸ್ಟಿ ಅವರು ಇಂದು ನಿಧನರಾದರು. 102 ವರ್ಷದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವಾರ ಒಡಿಶಾದ ಜೈಪುರ ಜಿಲ್ಲೆಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಸ್ಟಿ ಅವರು ಕಳೆದ ಒಂದು ತಿಂಗಳಿಂದಲೂ ಜ್ವರ, ಕೆಮ್ಮು ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ನಂದಾ ಮಾಸ್ಟರ್​ ಎಂದೇ ಖ್ಯಾತರಾಗಿದ್ದ ಇವರು ಈ ಬಾರಿಯ ನವೆಂಬರ್​​ ತಿಂಗಳ 9ರಂದು ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್​ ಕೈಯಿಂದ ಸ್ವೀಕರಿಸಿದ್ದರು. ಅಂದು ರಾಮನಾಥ ಕೋವಿಂದ್ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ ಪ್ರಶಸ್ತಿ ಸ್ವೀಕರಿಸಿದ್ದರು. ನಂದಾ ಪ್ರಸ್ಟಿ ಹಲವು ದಶಕಗಳಿಂದಲೂ ಒಡಿಶಾದ ಜೈಪುರ ಜಿಲ್ಲೆಯಲ್ಲಿ ಅನೇಕ ಮಕ್ಕಳು ಮತ್ತು ದೊಡ್ಡವರಿಗೆ ಉಚಿತ ಶಿಕ್ಷಣ ನೀಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ಏಳನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಇವರು ತಮ್ಮ ಹಳ್ಳಿಯಲ್ಲಿ ಅನಕ್ಷರತೆ ಹೋಗಲಾಡಿಸಲು ಪಣತೊಟ್ಟಿದ್ದರು. ಸ್ವಾತಂತ್ರ್ಯ ಬಂದಾಗಿನಿಂದಲೂ ಮುಕ್ತ ಮನಸಿನಿಂದ ಉಚಿತವಾಗಿ ಶಿಕ್ಷಣ ನೀಡುತ್ತಿದ್ದರು.

ಪ್ರಧಾನಿ ಮೋದಿ ಸಂತಾಪ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಂದ ಪ್ರಸ್ಟಿ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಒಡಿಶಾದಲ್ಲಿ ಶಿಕ್ಷಣ ಎಂಬ ಸಂತೋಷವನ್ನು ಹಬ್ಬಿಸಿದ ನಂದಾ ಸರ್​ ಸದಾ ಕಾಲಕ್ಕೂ ಸ್ಮರಣೀಯರು. ಪದ್ಮಶ್ರೀ ಪ್ರಶಸ್ತಿ ಸಮಾರಂಭದಲ್ಲಿ ಎಲ್ಲರ ಗಮನಸೆಳೆದಿದ್ದರು ಎಂದು ಟ್ವೀಟ್ ಮಾಡಿ, ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *