ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡಗೆ ಬೆಂಗಳೂರಲ್ಲಿ ಭವ್ಯ ಸ್ವಾಗತ | Tulasi Gowda Received Star Welcome in Bengaluru Airport


ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡಗೆ ಬೆಂಗಳೂರಲ್ಲಿ ಭವ್ಯ ಸ್ವಾಗತ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪದ್ಮಶ್ರೀ ತುಳಸಿಗೌಡ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಜನರು ಮುಗಿಬಿದ್ದರು.

ಬೆಂಗಳೂರು: ಪದ್ಮಶ್ರೀ ಪುರಸ್ಕಾರ ಪಡೆದು ದೆಹಲಿಯಿಂದ ಬೆಂಗಳೂರಿಗೆ ಮರಳಿದ ವೃಕ್ಷಮಾತೆ ತುಳಸಿ ಗೌಡರನ್ನು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು. ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಪುಟ್ಟ ಗ್ರಾಮ ಹೊನ್ನಳ್ಳಿಯ ತುಳಸಿ ಗೌಡ, ವರ್ಷಕ್ಕೆ 30 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು, ಪೋಷಿಸುವ ಮೂಲಕ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲೊಂದಾದ ಪದ್ಮಶ್ರೀಗೆ ಭಾಜನರಾಗಿದ್ದಾರೆ.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪುರಸ್ಕಾರ ಸ್ವೀಕರಿಸಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇಂದು (ನ.10) ರಾತ್ರಿ ಅವರು ಆಗಮಿಸುವ ಸುದ್ದಿ ತಿಳಿದು ಗಂಟೆಗೂ ಮುಂಚೆಯೇ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು‌. ನಿಲ್ದಾಣದಿಂದ ಹೊರಬರುತ್ತಿದ್ದಂತೆ ಜಯಕಾರ ಹಾಕಿ ತುಳಸಿ ಗೌಡರನ್ನು ಸ್ವಾಗತಿಸಿದ ಅಭಿಮಾನಿಗಳು, ಹಾರತುರಾಯಿ ಹಾಕಿ, ಶಾಲು ಹೊದಿಸಿ ಬರಮಾಡಿಕೊಂಡರು.

ತುಳಸಿಗೌಡರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದುಕೊಂಡ ರೀತಿಯನ್ನು ಕಂಡ ಜನತೆ, ಅವರ ಸರಳತೆ, ಮುಗ್ಧತೆಗೆ ಮೆಚ್ಚಿದ್ದಾರೆ. ಹೀಗಾಗಿ ಬೆಂಗಳೂರಿಗೆ ಬಂದ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನತೆ ಮುಗಿಬಿದ್ದ ದೃಶ್ಯ ಕಂಡುಬಂತು.

ಸಾಲುಸಾಲು ಕಾರ್ಯಕ್ರಮ
ಸಾಲುಸಾಲು ಕಾರ್ಯಕ್ರಮಕ್ಕೆ ಹಾಜರಾಗಲು ತುಳಸಿ ಗೌಡರಿಗೆ ಆಮಂತ್ರಣ ಬಂದಿದೆ. ಚಿಕ್ಕಬಳ್ಳಾಪುರದಲ್ಲಿ ಎಲ್ಲಪ್ಪ ರೆಡ್ಡಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂರು ತುಳಸಿ ಗಿಡವನ್ನು ಸ್ಥಳೀಯರಿಗೆ ಹಂಚುವ ಕಾರ್ಯಕ್ರಮವಿದೆ. ತದನಂತರ ಬೆಂಗಳೂರಿನಲ್ಲಿರುವ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದಲ್ಲಿ ವಾಸ್ತವ್ಯ ಹೂಡಲಿರುವ ಅವರು, ಮುಂಜಾನೆ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ ಅವರೊಂದಿಗೆ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಶನಿವಾರ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಅವರು ಕಾರ್ಯಕ್ರಮ ಆಯೋಜಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವೇಳೆ ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತುಳಸಿ ಗೌಡರನ್ನು ಗೌರವಿಸಲಾಗುವುದು.

ಇದನ್ನೂ ಓದಿ: Tulasi Gowda: ರಾಷ್ಟ್ರಪತಿಯಿಂದ ಪದ್ಮಶ್ರೀ ಸ್ವೀಕರಿಸಿದ ಅಂಕೋಲಾದ ಹೆಮ್ಮೆ; ವೃಕ್ಷಮಾತೆ ತುಳಸಿ ಗೌಡ ಪ್ರಧಾನಿ ಮೋದಿ ಕೈಕುಲುಕಿದ ಆ ಘಳಿಗೆ
ಇದನ್ನೂ ಓದಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್​ಗೆ ದೃಷ್ಟಿ ತೆಗೆದು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಜೋಗತಿ ಮಂಜಮ್ಮ; ವಿಡಿಯೋ ಫುಲ್ ವೈರಲ್

TV9 Kannada


Leave a Reply

Your email address will not be published. Required fields are marked *