ಪದ್ಮಶ್ರೀ ಹಾಜಬ್ಬರ ಶಾಲೆ ನೋಡುವಾಸೆ ತುಳಸಿಗೌಡ್ರಿಗೆ -ಸಾಧಕನ ಊರಿಗೆ ಅರಸಿ ಬಂದ್ರು ವೃಕ್ಷಮಾತೆ


ಅವರಿಬ್ಬರು ಬರಿಗಾಲಲ್ಲಿ ಹಳ್ಳಿಯಿಂದ ದಿಲ್ಲಿವರೆಗೆ ತೆರಳಿ, ಪದ್ಮಶ್ರೀ ಮುಡಿಗೇರಿಸಿಕೊಂಡ ಕರಾವಳಿಯ ಸಾಧಕರು. ಒಬ್ರು ಮರಗಳನ್ನೇ ಮಕ್ಕಳಂತೆ ಸಾಕಿ, ಪೋಷಿಸಿದ ವೃಕ್ಷಮಾತೆ ತುಳಸಿ ಗೌಡ.  ಮತ್ತೊಬ್ರು, ಕಿತ್ತಳೆ ಹಣ್ಣು ಮಾರಿ ಶಾಲೆಯನ್ನೇ ಕಟ್ಟಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬ. ಇವತ್ತು ದೇಶದ ಅತ್ಯುನ್ನತ ಪ್ರಶಸ್ತಿಯನ್ನ ಪಡೆದವರ ಸಮಾಗಮವಾಗಿತ್ತು. ಇವರಿಬ್ಬರ ಈ ಸುಂದರ ಕ್ಷಣ ಕಂಡು ಇಡೀ ಕರಾವಳಿ ಮಂದಿ ಬೆರಗಾಗಿದ್ರು.

ಕೈ ಕೈ ಹಿಡಿದು, ತಮ್ಮ ಅನುಭವ ಹಂಚಿಕೊಳ್ತಿರೋ ಹಿರಿಜೀವಗಳು. ಪದ್ಮಶ್ರೀ ಪ್ರಶಸ್ತಿ ಪುಸ್ಕೃತರು. ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿಸಿ ಹಳ್ಳಿ ಮಕ್ಕಳ ಶಿಕ್ಷಣಕ್ಕೆ ನೆರವಾದ ಅಕ್ಷರ ಸಂತ ಹರೇಕಳ ಹಾಜಬ್ಬರನ್ನ ನೋಡಲು, ವೃಕ್ಷಮಾತೆ ತುಳಸಿಗೌಡ ಇವತ್ತು ಮಂಗಳೂರಿಗೆ ಭೇಟಿ ನೀಡಿದ್ದ ಸುಮಧರ ಕ್ಷಣವಿದು.

ಹಾಜಬ್ಬರ ಸಾಧನೆ ಬಗ್ಗೆ ಕೇಳಿ ತಿಳಿದಿದ್ದ ತುಳಸಿ ಗೌಡಗೆ, ಹಾಜಬ್ಬರ ಶಾಲೆ ನೋಡಬೇಕೆಂಬ ಆಸೆ ಇತ್ತಂತೆ. ಪದ್ಮಶ್ರೀ ಪ್ರಶಸ್ತಿ ಪಡೆದು ದೆಹಲಿಯಿಂದ ಬರುತ್ತಿದ್ದಾಗಲೇ, ಈ ಮಹದಾಸೆಯನ್ನು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರಂತೆ. ಹೀಗಾಗಿ, ದೆಹಲಿಯಿಂದ ಬೆಂಗಳೂರಿಗೆ ಬಂದವರೇ, ತಮ್ಮ ಊರು ಅಂಕೋಲಕ್ಕೆ ತೆರಳದೇ ನೇರವಾಗಿ ಅಕ್ಷರ ಸಂತನ ನೋಡಲು ಹರೇಕಳಕ್ಕೆ ಬಂದಿದ್ದರು.

ಮನೆಗೆ ಬಂದ ತುಳಸಿ ಗೌಡ ಅವರನ್ನ ಆಧರದಿಂದ ಬರಮಾಡಿಕೊಂಡ ಹಾಜಬ್ಬ, ಶಾಲು, ಹಾರ ಹಾಕಿ ಕಿತ್ತಳೆ ಹಣ್ಣು ನೀಡಿ ಸನ್ಮಾನ ಮಾಡಿದ್ರು. ತಮ್ಮ ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಶಾಲೆಗೆ ಕರೆದುಕೊಂಡು ಹೋದರು. ಹಾರ, ಶಾಲು ಹಾಕಿಕೊಂಡು ಸಾಧಕಿ ವೃಕ್ಷಮಾತೆ ಬರ್ತಾ ಇದ್ರೆ, ಅವರ ಕೈ ಹಿಡಿದು ಮುನ್ನಡಿಸಿಕೊಂಡು ಬರ್ತಿದ್ರು ಹರೇಕಳ ಹಾಜಬ್ಬ. ಬ್ಯಾಂಡ್, ವಾದ್ಯ ಮೊಳಗಿಸುತ್ತಾ ವೃಕ್ಷಮಾತೆಯನ್ನ ಮಕ್ಕಳು ಶಾಲೆಯೊಳಗೆ ಬರಮಾಡಿಕೊಂಡರು. ಮಕ್ಕಳಂತೂ ಸಾಧಕಿಯನ್ನ ಕಂಡು, ಸ್ಪರ್ಶಿಸಿ ಮಾತನಾಡಿಸಿ ಖುಷಿಪಟ್ರು. ಇದೇ ವೇಳೆ ಮಾತನಾಡಿದ ವೃಕ್ಷಮಾತೆ ತುಳಸಿಗೌಡ, ಪಿಯು ಕಾಲೇಜು ಕಟ್ಟಬೇಕೆಂಬ ಹಾಜಬ್ಬ ಆಸೆಗೆ ತಾವು ಆರ್ಥಿಕ ಸಹಾಯ ಮಾಡೋದಾಗಿ ತಿಳಿಸಿದ್ರು.

ಇನ್ನು, ವೃಕ್ಷಮಾತೆ ತುಳಸಿ ಗೌಡಗೆ ಪದ್ಮಶ್ರೀ ಪ್ರಶಸ್ತಿ ಪಡೆಯಲು, ದೆಹಲಿಗೆ ಹೋಗಲು ಹಣವಿರಲಿಲ್ಲವಂತೆ. ಹಾಲಕ್ಕಿ ಜನಾಂಗದ ಯುವಕರೆಲ್ಲಾ ಸೇರಿ ಹಣ ಸಂಗ್ರಹಿಸಿ, ಕೈಲಾದ ಸಹಾಯ ಮಾಡಿದ್ದರಂತೆ. ಹೀಗಾಗಿ, ದೆಹಲಿ ಪ್ರಯಾಣದ ಬಳಿಕ ತಮ್ಮಲ್ಲಿ ಉಳಿದಿದ್ದ ಹಣವನ್ನು ಸ್ವಂತಕ್ಕೆ ಉಪಯೋಗಿಸದೇ, ಹರೇಕಳ ಹಾಜಬ್ಬರ ಪಿಯು ಕಾಲೇಜು ಕಟ್ಟಿಸುವುದಕ್ಕಾಗಿ ನೀಡಿದ್ದಾರೆ. ಈ ಮೂಲಕ ಇಳಿವಯಸ್ಸಲ್ಲೂ ಸಾಧನೆ ಜೊತೆಗೆ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿ ವೃಕ್ಷಮಾತೆ ತುಳಸಿ ಗೌಡ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಶೇಷ ಬರಹ; ಕಿರಣ್ ಸಿರ್ಸಿಕರ್, ನ್ಯೂಸ್​ಫಸ್ಟ್, ಮಂಗಳೂರು 

News First Live Kannada


Leave a Reply

Your email address will not be published.