ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ಡೆತ್ ಸರ್ಟಿಫಿಕೆಟ್ ದಂಧೆಯನ್ನು ಪಬ್ಲಿಕ್ ಟಿವಿ ಸಾಕ್ಷಿ ಸಮೇತ ಬಯಲಿಗೆಳೆದಿದೆ. ಈ ವರದಿ ಬಿಗ್ ಇಂಪ್ಯಾಕ್ಟ್ ಆಗಿದ್ದು, ಪ್ರಕರಣದ ತನಿಖೆ ನಡೆಸುವಂತೆ ಸಚಿವ ಅಶೋಕ್ ಆದೇಶ ನೀಡಿದ್ದಾರೆ.

 ಪಬ್ಲಿಕ್ ಟಿವಿ ಮಂಗಳವಾರ ಬೆಳಗ್ಗೆಯಿಂದ ಪ್ರಸಾರ ಮಾಡಿದ್ದ ಡೆತ್ ಸರ್ಟಿಫಿಕೇಟ್ ಡೀಲ್ ಪ್ರಕರಣ ಬಿಗ್ ಇಂಪ್ಯಾಕ್ಟ್ ಆಗಿದೆ. ಪಬ್ಲಿಕ್ ಟಿವಿ ವರದಿ ನೋಡಿದ ಸಚಿವ ಆರ್.ಅಶೋಕ್ ದಂಧೆಕೋರರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕೆಲವು ಅಂಬುಲೆನ್ಸ್ ಚಾಲಕರು ಈ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ. ಕೆಲವು ವೈದ್ಯರು ಶಾಮೀಲಾಗಿದ್ದಾರೆ. ಇವರ ಮೇಲೆ ಕಟ್ಟುನಿಟ್ಟಿನ ಕ್ರಮ ತಗೊಳ್ತಿದ್ದೀವಿ. ಈಗಾಗಲೇ ಕೆಲವರ ವಿರುದ್ಧ ಕ್ರಮ ತಗೊಂಡಿದ್ದೇವೆ. ಸಾರ್ವಜನಿಕರು ಇಂಥ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ದಂಧೆಕೋರ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳುವಂತೆ ಸಚಿವ ಆರ್ ಅಶೋಕ್ ಆದೇಶ ನೀಡಿದ್ದಾರೆ.

ಬಿಬಿಎಂಪಿ ಕಮಿಷನರ್ ಶ್ಲಾಘನೆ!
ಬೆಂಗಳೂರಿನಲ್ಲಿ ನಡೀತಿದ್ದ ಡೆತ್ ಸರ್ಟಿಫಿಕೇಟ್ ದಂಧೆಯನ್ನು ಬಯಲಿಗೆಳೆದ ಪಬ್ಲಿಕ್ ಟಿವಿ ಕಾರ್ಯಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಶ್ಲಾಘಿಸಿದ್ದಾರೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ವರದಿ ತರಿಸಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸುಬ್ರಮಣ್ಯ ಠಾಣೆಗೆ ದೂರು ನೀಡಿ ಮಾಜಿ ಕಾರ್ಪೊರೇಟರ್!
ಬದುಕಿರುವಾಗಲೇ ಡೆತ್ ಸರ್ಟಿಫಿಕೇಟ್ ಕೊಟ್ಟಿದ್ದಕ್ಕೆ ಅರಕೆರೆ ವಾರ್ಡ್‍ನ ಮಾಜಿ ಕಾರ್ಪೊರೇಟರ್ ಭಾಗ್ಯಲಕ್ಷ್ಮೀ ಆಘಾತಕ್ಕೊಳಗಾಗಿದ್ದಾರೆ. ನನ್ನ ಹೆಸರಿನ ಮೇಲೆಯೇ ಡೆತ್ ಸರ್ಟಿಫಿಕೆಟ್ ಕೊಟ್ಟಿರೋದು ಅಘಾತ ತಂದಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅಂತ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಡೆತ್ ಸರ್ಟಿಫಿಕೇಟ್ ದಂಧೆ ವಿಚಾರವಾಗಿ ಸ್ಮಶಾನ ಸಿಬ್ಬಂದಿಯೇ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ನಕಲಿ ವೈದ್ಯನೊಬ್ಬನಿಂದ ಈ ದಂಧೆ ನಡೆಯುತಿತ್ತು. ಹಾಸ್ಪಿಟಲ್ ಕೇರ್ ಹೆಸರು, ಡಾಕ್ಟರ್ ಕಿರಣ್ ಹೆಸರನ್ನು ಬಳಸಿಕೊಂಡು ಡೆತ್ ಸರ್ಟಿಫಿಕೇಟ್ ಕೊಡುತ್ತಿದ್ರು. ಅಂಬುಲೆನ್ಸ್ ಡ್ರೈವರ್‍ಗಳು ತಂದ ಡೆತ್ ಸರ್ಟಿಫಿಕೇಟ್ ಪಡೆಯದಿದ್ದರೆ ಹಲ್ಲೆ ಮಾಡುತ್ತಿದ್ದರು ಎಂದು ಸ್ಮಶಾನದ ಉಸ್ತುವಾರಿ ನಾಗರಾಜ್ ಸತ್ಯ ಬಯಲು ಮಾಡಿದ್ದಾರೆ. ಅಲ್ಲದೇ ಅಂಬುಲೆನ್ಸ್ ಡ್ರೈವರ್‍ಗಳ ದೊಡ್ಡ ಗ್ಯಾಂಗೇ ಈ ದಂಧೆಯಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದ್ದಾರೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಧೆಕೋರರಿಗೆ ಬಲೆ ಬೀಸಿದ್ದಾರೆ.

The post ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಾಸು ಕೊಟ್ರೆ ಡೆತ್ ಸರ್ಟಿಫಿಕೇಟ್ ಡೀಲ್ ತನಿಖೆಗೆ ಅಶೋಕ್ ಆರ್ಡರ್! appeared first on Public TV.

Source: publictv.in

Source link