ಇಂದು ಭಾರತದ ಅತೀ ಉದ್ದದ ಹೆದ್ದಾರಿ ಉದ್ಘಾಟನೆ
ಭಾರತದ ಅತೀ ಉದ್ದದ ಎಕ್ಸ್ಪ್ರೆಸ್ ಮಾರ್ಗವಾಗಿರುವ ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್ಪ್ರೆಸ್ ಹೆದ್ದಾರಿಯನ್ನು ಇಂದು ಮಧ್ಯಾಹ್ನ 1.30ಕ್ಕೆ ಪ್ರಧಾನಿ ನರೆಂದ್ರ ಮೋದಿ ಉದ್ಘಾಟಿಸಲಿದ್ದಾರೆ. 42 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 340 ಕಿಲೋ ಮೀಟರ್ ಹೆದ್ದಾರಿ ನಿರ್ಮಾಣವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ದಿನ ಉತ್ತರ ಪ್ರದೇಶ ಬೆಳವಣಿಗೆಗೆ ವಿಶೇಷ ದಿನವಾಗಿದ್ದು, ಯುಪಿಯ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
‘ಇದು ಹಿಂದೂ ಧರ್ಮದ ಮೇಲೆ ನಡೆದ ದಾಳಿ’
ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಶಿದ್ ಬರೆದಿರುವ ಸನ್ರೈಸ್ ಓವರ್ ಅಯೋಧ್ಯ ಪುಸ್ತಕಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ನೈನಿತಾಲ್ನಲ್ಲಿರೋ ಸಲ್ಮಾನ್ ಖುರ್ಷಿದ್ ನಿವಾಸಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖುರ್ಷಿದ್ ಇಂತಹ ಹೀನ ಕೃತ್ಯಗಳನ್ನು ಮಾಡುವವರು ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎಂದು ನಾನು ಹೇಳಿದ್ದೇನೆ. ಹಿಂದೂ ಧರ್ಮವು ಈ ದೇಶಕ್ಕೆ ಅದ್ಭುತವಾದ ಸಂಸ್ಕೃತಿಯನ್ನು ನೀಡಿದೆ, ನನಗೆ ಹಿಂದು ಧರ್ಮದ ಬಗ್ಗೆ ಹೆಮ್ಮೆ ಇದೆ. ಈ ದಾಳಿ ನನ್ನ ಮೇಲಾದ ದಾಳಿಯಲ್ಲಿ, ಇದು ಹಿಂದೂ ಧರ್ಮದ ಮೇಲೆ ಮಾಡಿದಂತ ದಾಳಿ ಎಂದು ಖುರ್ಷಿದ್ ಹೇಳಿದ್ದಾರೆ.
ಪಾಕ್ನಿಂದ 20 ಮಂದಿ ಮೀನುಗಾರರ ಬಿಡುಗಡೆ
ಪಾಕಿಸ್ತಾನ ಬಿಡುಗಡೆ ಮಾಡಿರುವ 20 ಮಂದಿ ಮೀನುಗಾರರು ಅಧಿಕೃತವಾಗಿ ಭಾರತದ ಗಡಿ ಪ್ರವೇಶ ಮಾಡಿದ್ದಾರೆ. ಪಂಜಾಬ್ನ ಅಟ್ಟಾರಿ-ವಾಘಾ ಗಡಿಯಿಂದ ಆಗಮಿಸಿದ ಮೀನುಗಾರರು, ಭೂತಾಯಿಗೆ ನಮನ ಸಲ್ಲಿಸುವ ಮೂಲಕ ಭಾರತ ಪ್ರವೇಶಿಸಿದರು. ಈ ಬಗ್ಗೆ ಮೀನುಗಾರರು ಸಂತಸ ಹಂಚಿಕೊಂಡಿದ್ದು, ಸಮುದ್ರದಲ್ಲಿ ನಮ್ಮನ್ನು ಬಂಧಿಸಿ ಕಳೆದ ನಾಲ್ಕು ವರ್ಷಗಳಿಂದ ಲಾಂಧಿ ಜೈಲಿನಲ್ಲಿಟ್ಟಿದ್ದರು. ಜೈಲಿನಲ್ಲಿರುವ ತನಕ ನಮ್ಮ ಕುಟುಂಬಗಳಿಗೆ 9 ಸಾವಿರ ರೂಪಾಯಿನಷ್ಟು ಧನ ಸಹಾಯ ನೀಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ವಿಪ್ಲವ್ ತಿವಾರಿಗೆ ಜನಸ್ತೋಮದಿಂದ ಶ್ರದ್ಧಾಂಜಲಿ
ಮಣಿಪುರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದ ಕರ್ನಲ್ ವಿಪ್ಲವ್ ತಿವಾರಿಗೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಸಿಂಘತ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಅಸ್ಸಾಂ ರೈಫಲ್ಸ್ ಘಟಕದ ಕಮಾಂಡಿಂಗ್ ಆಫೀಸರ್ ಕರ್ನಲ್ ವಿಪ್ಲವ್ ತಿವಾರಿ ಮತ್ತು ಅವರ ಕುಟುಂಬಸ್ಥರು ಸೇರಿದಂತೆ ಮೂವರು ಯೋಧರು ಹತರಾಗಿದ್ದರು. ಛತ್ತಿಸ್ಗಢದ ರಾಯಗಢ್ ನಗರದ ರಾಮ್ಲೀಲಾ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿತ್ತು, ಈ ವೇಳೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದಿದ್ದಾರೆ.
ಸೇನಾ ಸಮರಾಭ್ಯಾಸಕ್ಕೆ ಪುಟಿನ್ ನಿರಾಕರಣೆ
ಕಪ್ಪು ಸಮುದ್ರದಲ್ಲಿ ಅಮೆರಿಕಾ ಸೇನಾ ಸಮರಾಭ್ಯಾಸ ಆರಂಭಿಸಿದೆ. ಆದರೂ ಕಪ್ಪು ಸಮುದ್ರ ಪ್ರದೇಶದಲ್ಲಿ ಸೇನಾ ನಿಯೋಜನೆ ಹೆಚ್ಚಿಸಬೇಕು ಎಂಬ ರಕ್ಷಣಾ ಸಚಿವಾಲಯದ ಪ್ರಸ್ತಾವನೆಯನ್ನು ನಾನು ತಿರಸ್ಕರಿಸಿದ್ದೇನೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಇತ್ತೀಚೆಗೆ ಕಪ್ಪು ಸಮುದ್ರದಲ್ಲಿ ಅಮೆರಿಕಾ ಸೇನಾ ಚಟುವಟಿಕೆ ಹೆಚ್ಚಿಸಿದ ಹಿನ್ನೆಲೆ ನಮ್ಮ ರಕ್ಷಣಾ ಇಲಾಖೆ ಅಧಿಕಾರಿಗಳು ನಾವೂ ಸಮರಾಭ್ಯಾಸ ನಡೆಸೋಣ ಎಂದು ಹೇಳಿದ್ದರು. ಆದ್ರೆ ಈ ಪ್ರಸ್ತಾವನೆ ಅರ್ಥಹೀನವಾದದ್ದು ಮತ್ತು ಸುಖ ಸುಮ್ಮನೆ ಪರಿಸ್ಥಿತಿ ಜಟಿಲಗೊಳಿಸುವುದು ಬೇಡವೆಂದು ನಾನೇ ಅಧಿಕಾರಿಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇನೆ ಎಂದು ಪುಟಿನ್ ಹೇಳಿದ್ದಾರೆ.
3ನೇ ತರಗತಿ ಪಾಸಾದ 104 ವರ್ಷದ ಅಜ್ಜಿ
ಕೇರಳದ ಕೊಟ್ಟಾಯಂನಲ್ಲಿ 104 ವರ್ಷದ ಅಜ್ಜಿಯೊಬ್ಬರು 3ನೇ ತರಗತಿ ಪರೀಕ್ಷೆ ಬರೆದಿದ್ದು, 100ಕ್ಕೆ 89 ಅಂಕಗಳನ್ನು ಪಡೆದುಕೊಂಡಿದ್ದಾರೆ. ಮನಸಿದ್ದರೆ ಮಾರ್ಗ ಎನ್ನುವಂತೆ ಕುಟ್ಟಿಯಮ್ಮ ಎಂಬುವವರು ತಮ್ಮ 104 ವಯಸ್ಸಿನಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈಗ 4ನೇ ತರಗತಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದಾರೆ. ಎಂದೂ ಶಾಲೆಗೆ ತೆರಳದ ಕುಟ್ಟಿಯಮ್ಮ, ಇತ್ತೀಚೆಗೆ ಮನೆಯಲ್ಲಿಯೇ ಸಾಕ್ಷರತಾ ತರಗತಿಗಳಿಗೆ ಹಾಜರಾಗಿ ಈ ಸಾಧನೆ ಮಾಡಿದ್ದಾರೆ ಎಂದು ಅವರ ಶಿಕ್ಷಕಿ ಫೆಹ್ರಾ ಜಾನ್ ಹೇಳಿದ್ದಾರೆ.
ವಿವಾದಕ್ಕೀಡಾದ ‘ಜೈ ಭೀಮ್’ ಸಿನಿಮಾ
ನಟ ಸೂರ್ಯ ನಟನೆಯ ಜೈ ಭೀಮ್ ಚಿತ್ರ ಮತ್ತೊಂದು ವಿವಾದ ಸೃಷ್ಟಿಸಿದೆ. ಈ ಚಿತ್ರದಲ್ಲಿ ವನ್ನಿಯಾರ್ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಅಂತ ವನ್ನಿಯಾರ್ ಸಮುದಾಯದ ಅಧ್ಯಕ್ಷ ಅರುಳ್ಮೋಳಿ ಕಿಡಿಕಾರಿದ್ದಾರೆ. ಅರುಳ್ಮೋಳಿ ಈ ಚಿತ್ರದಲ್ಲಿ ಬರುವ ಕೆಲವು ದೃಶ್ಯಗಳಿಗೆ ವಿರೋಧ ವ್ಯಕ್ತಪಡಿಸಿದ್ದು, ಈ ದೃಶ್ಯಗಳನ್ನ ತೆಗೆದು ಹಾಕುವಂತೆ ಚಿತ್ರ ತಂಡಕ್ಕೆ ನೋಟಿಸ್ ನೀಡಿದ್ದಾರೆ.
ದ್ರಾವಿಡ್ ಬಗ್ಗೆ ಕೆ.ಎಲ್.ರಾಹುಲ್ ಮೆಚ್ಚುಗೆ
ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಇದು ನನ್ನ ಅದೃಷ್ಟ ಎಂದು ಭಾರತದ ಕ್ರಿಕೆಟಿಗ ಕೆಎಲ್ ರಾಹುಲ್ ತಿಳಿಸಿದ್ದಾರೆ. ಮಾಧ್ಯಮಗೋಷ್ಟಿಯೊಂದರಲ್ಲಿ ಮಾತನಾಡಿರುವ ಕೆಎಲ್ ರಾಹುಲ್, ನಾನು ಚಿಕ್ಕವನಿದ್ದಾಗ ದ್ರಾವಿಡ್ ಅವರ ಆಟವನ್ನು ನೋಡಿ, ಅವರಂತೆಯೇ ಅಭ್ಯಾಸ ಮಾಡ್ತಿದ್ದೆ. ದ್ರಾವಿಡ್ ಕೂಡ ಕರ್ನಾಟಕದಲ್ಲಿ ನಮಗೆ ಸಾಕಷ್ಟು ಬಾರಿ ಪಂದ್ಯಗಳಲ್ಲಿ ಆಡುವಾಗ ಸಲಹೆ, ಸೂಚನೆ ಕೊಟ್ಟಿದ್ದಾರೆ. ಈಗ ಟೀಂ ಇಂಡಿಯಾಗೆ ಕೋಚ್ ಆಗಿರುವ ದ್ರಾವಿಡ್ರಿಂದ ನಾವೆಲ್ಲಾ ಹೆಚ್ಚಿನದ್ದನ್ನು ಕಲಿಯುವ ಅವಕಾಶ ಕೂಡ ಇದೆ ಎಂದು ಮೆಚ್ಚುಗೆಯ ಮಾತಾಡಿದ್ದಾರೆ.
ಆರ್ಸಿಬಿ ತಂಡಕ್ಕೆ ನಾಯಕ ಯಾರು?
ವಿರಾಟ್ ಕೊಹ್ಲಿ ಆರ್ಸಿಬಿಯ ನಾಯಕತ್ವಕ್ಕೆ ವಿದಾಯ ಹೇಳಿದ್ರು. ಆಗಾದ್ರೆ ಆರ್ಸಿಬಿಗೆ ಮುಂದಿನ ಕ್ಯಾಪ್ಟನ್ ಯಾರು ಎಂದು ಚರ್ಚೆಯಾಗ್ತಿರುವ ಸಮಯದಲ್ಲೇ ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್, ಡೇವಿಡ್ ವಾರ್ನರ್ ಆರ್ಸಿಬಿ ನಾಯಕ ಆಗೋದು ಪಕ್ಕಾ ಅಂತ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಹಾಗ್, ವಾರ್ನರ್ ಒಬ್ಬ ಆಟಗಾರನಾಗಿ ಹಾಗೂ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಆರ್ಸಿಬಿ ಅವರನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆ ಅಂತ ತಿಳಿಸಿದ್ದಾರೆ. ವಾರ್ನರ್ ಕೂಡ ನಾಯಕತ್ವವನ್ನು ಎದುರು ನೋಡುತ್ತಿದ್ದು, ಆರ್ಸಿಬಿ ತಂಡಕ್ಕೆ ಇವರೇ ಸೂಕ್ತ ನಾಯಕ ಅಂತ ಬ್ರಾಡ್ ಹಾಗ್ ತಿಳಿಸಿದ್ದಾರೆ.
ಜೈಪುರದಲ್ಲಿ ಮಿಂಚಲು ದ್ರಾವಿಡ್ ಪಡೆ ರೆಡಿ
ಇಂಗ್ಲೆಂಡ್ ಟೆಸ್ಟ್ ಸರಣಿ ಮತ್ತು ಐಸಿಸಿ ಟಿ20 ವಿಶ್ವಕಪ್ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಟೀಂ ಇಂಡಿಯಾ, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ನಾಳೆ ಜೈಪುರದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಜೈಪುರ ಕ್ರೀಡಾಂಗಣದಲ್ಲಿ ಮಿಂಚಲು ಬ್ಲೂ ಬಾಯ್ಸ್ ರೆಡಿಯಾಗ್ತಿದ್ದಾರೆ. ಇನ್ನೂ ರಾಹುಲ್ ದ್ರಾವಿಡ್ ಟೀಂ ಇಂಡಿಯಾಗೆ ಕೋಚ್ ಆದ ಬಳಿಕ ಇದು ಮೊದಲ ಸರಣಿಯಾಗಿದ್ದು, ಈ ಪಂದ್ಯವನ್ನು ಆಟಗಾರರು ಹಾಗೂ ದ್ರಾವಿಡ್ ಸಹ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.