ಮಂಗಳೂರು: ಜಿಎಸ್ಬಿ ಸಮುದಾಯದ ದೇವರ ಪಲ್ಲಕ್ಕಿ ಹೊತ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿವಾದಕ್ಕೆ ಗುರಿಯಾಗಿದ್ದಾರೆ. ಜಿ ಎಸ್ ಬಿ ಸಮುದಾಯ ದಲ್ಲದವರು ದೇವರ ಪಲ್ಲಕ್ಕಿ ಹೊತ್ತಿರುವುದು ಅಪಚಾರ ಮಾಡಿದಂತೆ, ಮೈಲಿಗೆ ಯಾದಂತೆ ಎಂಬ ಅಸಮಾಧಾನ ಜಿಎಸ್ಬಿ ಸಮುದಾಯದಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಈ ವಿವಾದಕ್ಕೆ ಕಾರಣರಾದ ಯುವಕರಿಂದ ದೇವರಿಗೆ ಕಪ್ಪಕಾಣಿಕೆ ಸಲ್ಲಿಸಿ ಕ್ಷಮಾಪಣೆ ಕೋರಲಾಗಿದೆ ಎಂಬ ಮಾತು ಕೇಳಿಬಂದಿದೆ.
ದಕ್ಷಿಣ ಕನ್ನಡ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೊಸ ವಿವಾದಕ್ಕೆ ತುತ್ತಾಗಿದ್ದಾರೆ. ಬೆಳ್ತಂಗಡಿಯ ಲಾಯಿಲಾ ದಲ್ಲಿರುವ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತಿದ್ದಾಗ, ಹೆಗಲು ಕೊಟ್ಟ ವಿಚಾರ ಜಾಲತಾಣದಲ್ಲಿ ತೀವ್ರ ಪರ ವಿರೋಧ ಚರ್ಚೆಗೆ ಗುರಿಯಾಗಿದೆ. ಅಲ್ಲದೆ, ಅನ್ಯ ಸಮುದಾಯದ ವ್ಯಕ್ತಿ ದೇವರ ಪಲ್ಲಕ್ಕಿಯನ್ನು ಹೊತ್ತಿದ್ದಕ್ಕೆ ಜಿಎಸ್ ಬಿ ಸಮುದಾಯದ ಧಾರ್ಮಿಕ ಮುಖಂಡರು ಗರಂ ಆಗಿದ್ದು, ಪಲ್ಲಕ್ಕಿ ಶುದ್ಧೀಕರಣ ಮಾಡಿ, ಈ ಪ್ರಮಾದಕ್ಕೆ ಕಾರಣವಾದ ಯುವಕರಲ್ಲಿ ತಪ್ಪು ಕಾಣಿಕೆ ಹಾಕಿಸಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.
ಕಾರ್ತಿಕ ಹುಣ್ಣಿಮೆ ದಿನದಂದು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಲಾಯಿಲಾದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಪ್ರಯುಕ್ತ ದೇವರ ಪಲ್ಲಕ್ಕಿ ಉತ್ಸವ ಜರುಗಿತ್ತು . ಪಲ್ಲಕ್ಕಿ ಮೆರವಣಿಗೆ ಆರಂಭಗೊಳ್ಳುವ ಸಂದರ್ಭದಲ್ಲಿ ಶಾಸಕ ಹರೀಶ ಪೂಂಜ ಕೂಡ ಅಲ್ಲಿಗೆ ಬಂದಿದ್ದು ಅಲ್ಲಿದ್ದ ಕೆಲವು ಯುವಕರ ಒತ್ತಾಯದಂತೆ ಶಾಸಕ ಹರೀಶ್ ಪೂಂಜಾ ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದರು.ಹರೀಶ್ ಪೂಂಜ ಅವರ ಪಲ್ಲಕ್ಕಿ ಹೊತ್ತ ವಿಡಿಯೋವನ್ನು ಅವರ ಫೇಸ್ಬುಕ್ ಖಾತೆಯಲ್ಲಿ ಹಾಕಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಎಸ್ ಬಿ ಸಮುದಾಯದ ಸಂಪ್ರದಾಯಸ್ಥರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಪಲ್ಲಕ್ಕಿಗೆ ಎಲ್ಲರೂ ಹೆಗಲು ಕೊಡುವ ಸಂಪ್ರದಾಯ ಇಲ್ಲ. ಪಲ್ಲಕ್ಕಿ ಹೊರುವವವರು ಅದಕ್ಕೆಂದೇ ನಿಗದಿತ ಕಟ್ಟುಪಡುಗಳನ್ನು ಪಾಲಿಸಬೇಕಾಗುತ್ತದೆ. ಪಲ್ಲಕ್ಕಿ ಹೋರುವವರೂ ಕೂಡ ಜಿಎಸ್ಬಿ ಸಮುದಾಯದವರೇ ಆಗಿರಬೇಕು ಎಂಬ ನಿಯಮವಿದೆ. ಶಾಸಕರು ಗೃಹಪ್ರವೇಶ, ಮದುವೆ, ಮುಂಜಿ ಹೀಗೆ ಎಲ್ಲೆಲ್ಲೋ ಸುತ್ತಾಡಿ ಸಂಜೆ ಹೊತ್ತಿಗೆ ಮನೆಗೆ ತೆರಳುವ ಸಂದರ್ಭದಲ್ಲಿ ಉತ್ಸವಕ್ಕೆ ಬಂದಿದ್ದು ಅಂಥ ಸಂದರ್ಭದಲ್ಲಿ ಪಲ್ಲಕ್ಕಿ ಹೊತ್ತಿದ್ದ ಅಪವಿತ್ರ ಮಾಡಿದಂತಾಗಿದೆ ಎಂಬ ಟೀಕೆ ಕೇಳಿ ಬಂದಿತ್ತು.
ಹರೀಶ್ ಪೂಂಜಾ ಪಲ್ಲಕ್ಕಿ ಹೊರುವಂತೆ ಇಬ್ಬರು ಜಿಎಸ್ ಬಿ ಸಮುದಾಯದ ಯುವಕರು ಒತ್ತಾಯ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಅದಕ್ಕೆ ಮಣಿದು ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದರು. ಆದರೆ, ಈ ವಿಚಾರ ತಿಳಿಯುತ್ತಿದ್ದಂತೆ ಯುವಕರಿಬ್ಬರನ್ನು ಕರೆದು ಸಮುದಾಯದ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಪಲ್ಲಕ್ಕಿಯನ್ನು ಶುದ್ಧೀಕರಣ ಮಾಡಿದ್ದಾಗಿ ಹೇಳಲಾಗುತ್ತಿದೆ. ಯುವಕರನ್ನು ದೇವರ ಮುಂದು ಕಪ್ಪಕಾಣಿಕೆ ಹಾಕಿಸಿ ಕ್ಷಮಾಪಣೆ ಕೋರಲಾಗಿದೆ. ಈ ವಿಚಾರ ಪರ- ವಿರೋಧ ಚರ್ಚೆಗೆ ಗ್ರಾಸವಾಗಿದೆ.
ವಿಶೇಷ ವರದಿ: ಕಿರಣ್, ನ್ಯೂಸ್ ಫಸ್ಟ್, ಮಂಗಳೂರು..