2020ರ ಮೊದಲಾರ್ಧದಲ್ಲಿ ತೆರೆಕಂಡ ಮಲಯಾಳಂನ ಸೂಪರ್​ ಹಿಟ್​ ‘ಅಯ್ಯಪ್ಪನುಮ್​ ಕೋಷಿಯೂಮ್’​ ಸಿನಿಮಾ ತೆಲುಗಿನಲ್ಲಿ ರಿಮೇಕ್​ ಆಗ್ತಿದೆ ಅನ್ನೋದು ಹಳೆಯ ವಿಚಾರ. ಪವರ್​ಸ್ಟಾರ್​ ಪವನ್​ ಕಲ್ಯಾಣ್​ ಹಾಗೂ ಕಿಚ್ಚ ಸುದೀಪ್​ ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿದ್ದು, ನಟಿ ಸಾಯಿ ಪಲ್ಲವಿ ಪವನ್​ ಕಲ್ಯಾಣ್​ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದ್ರೆ ಇದೀಗ ಸಾಯಿ ಪಲ್ಲವಿ ಜಾಗಕ್ಕೆ ಕನ್ನಡತಿಯೊಬ್ಬರು ನಾಯಕಿಯಾಗಲು ಸಜ್ಜಾಗಿದ್ದಾರೆ.

ಹೌದು.. ಸಾಯಿ ಪಲ್ಲವಿ ಹೆಸರು ಈ ಮೊದಲು ಕೇಳಿ ಬಂದಿತ್ತಾದ್ರೂ, ಸದ್ಯದ ಮಟ್ಟಿಗೆ ಅಷ್ಟು ಪ್ರಬುದ್ಧ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲು ಇಷ್ಟ ಪಡೋದಿಲ್ಲ ಅನ್ನೋ ವದಂತಿಗಳೂ ಇದ್ದವು. ಇದೀಗ ಕನ್ನಡತಿ ನಿತ್ಯಾ ಮೆನೆನ್​ ಸಾಯಿ ಪಲ್ಲವಿ ಜಾಗ ಪಡೆದುಕೊಂಡು, ನಟ ಪವನ್​ ಕಲ್ಯಾಣ್​ ಪತ್ನಿಯಾಗಿ ನಟಿಸಲಿದ್ದಾರೆ.

ಇನ್ನೊಂದೆಡೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಇತ್ತಾದ್ರೂ, ಅದ್ಯಾವುದಕ್ಕೂ ಸ್ಪಷ್ಟನೆ ಲಭ್ಯವಾಗಿರಲಿಲ್ಲ. ಕಿಚ್ಚನಿಗಾಗಿ ಕಾಯ್ದಿಡಲಾಗಿದ್ದ ಪಾತ್ರವನ್ನ ಬಾಹುಬಲಿ ಸಿನಿಮಾದ ಬಲ್ಲಾಳದೇವ, ರಾಣಾ ದಗ್ಗುಬಾಟಿ ನಿಭಾಯಿಸಲಿದ್ದಾರೆ ಎನ್ನಲಾಗ್ತಿದೆ.

2020ರಲ್ಲಿ ನಿರ್ದೇಶಕ ಸಚಿ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾದಲ್ಲಿ ಖ್ಯಾತ ಮಲಯಾಳಂ ನಟರಾದ ಬಿಜು ಮೆನನ್​ ಹಾಗೂ ಪೃಥ್ವಿರಾಜ್​ ಸುಕುಮಾರನ್​​ ನಟಿಸಿದ್ದಾರೆ. ಸದ್ಯ ಈ ಚಿತ್ರದ ತೆಲುಗು ರಿಮೇಕ್​ನಲ್ಲಿ ಬಿಜು ಮೆನನ್​ ಪಾತ್ರದಲ್ಲಿ ಪವನ್​ ಕಲ್ಯಾಣ್​ ನಟಿಸಲಿದ್ದು, ಪೃಥ್ವಿರಾಜ್​ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬಿಜು ಮೆನನ್​ ಪತ್ನಿ ಪಾತ್ರದಲ್ಲಿ ನಟಿಸಿದ ಗೌರಿ ನಂದಾ ಪಾತ್ರವನ್ನ ನಿತ್ಯಾ ಮೆನೆನ್​ ನಿಭಾಯಿಸಲಿದ್ದಾರೆ. ಕೊರೊನಾ ಎರಡನೇ ಅಲೆ ಹರಡುವ ಮುನ್ನವೇ ಈ ಚಿತ್ರದ ಚಿತ್ರೀಕರಣ ಹೈದರಾಬಾದ್​ನಲ್ಲಿ ಶುರುವಾಗಿತ್ತು.

ವಿಶೇಷ ಬರಹ: ರಕ್ಷಿತಾ.ರೈ- ಫಿಲ್ಮ್​ ಬ್ಯೂರೋ

The post ಪವನ್​ ಕಲ್ಯಾಣ್​ಗೆ ಕನ್ನಡತಿ ನಾಯಕಿ; ಸಾಯಿ ಪಲ್ಲವಿ ಜಾಗ ಪಡೆದುಕೊಂಡ ನಿತ್ಯಾ ಮೆನೆನ್​ appeared first on News First Kannada.

Source: newsfirstlive.com

Source link