ಪಶ್ಚಿಮ ಬಂಗಾಳ: ಬಿಜೆಪಿಯಿಂದ ಟಿಎಂಸಿಗೆ ಮರಳಿದ ಸಬ್ಯಸಾಚಿ ದತ್ತ | BJP leader Sabyasachi Dutta rejoined his old party Trinamool Congress

ಪಶ್ಚಿಮ ಬಂಗಾಳ: ಬಿಜೆಪಿಯಿಂದ ಟಿಎಂಸಿಗೆ ಮರಳಿದ ಸಬ್ಯಸಾಚಿ ದತ್ತ

ಸಬ್ಯಸಾಚಿ ದತ್ತ

ಕೊಲ್ಕತ್ತಾ: ಬಿಜೆಪಿ ನಾಯಕ ಸಬ್ಯಸಾಚಿ ದತ್ತ (Sabyasachi Dutta )ಗುರುವಾರ ತಮ್ಮ ಹಳೆಯ ಪಕ್ಷವಾದ ತೃಣಮೂಲ ಕಾಂಗ್ರೆಸ್‌ಗೆ (TMC) ಮರಳಿದ್ದಾರೆ. ಭವಾನಿಪುರ ಉಪಚುನಾವಣೆಯಲ್ಲಿ ಗೆಲುವಿನ ನಂತರ ಗುರುವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದ ನಂತರ ದತ್ತ ಟಿಎಂಸಿ ನಾಯಕಿಯನ್ನು ಭೇಟಿಯಾದರು. ಹಿರಿಯ ಟಿಎಂಸಿ ನಾಯಕ ಮುಕುಲ್ ರಾಯ್ ಬಿಜೆಪಿಗೆ ಸೇರಿದ ಬೆನ್ನಲ್ಲೇ ಸಬ್ಯಸಾಚಿ ದತ್ತ 2019 ರಲ್ಲಿ ಬಿಜೆಪಿಗೆ ಸೇರಿಕೊಂಡರು. ಇವರಿಬ್ಬರೂ ಈಗ ಟಿಎಂಸಿ ಪಾಳಯಕ್ಕೆ ಮರಳಿದ್ದಾರೆ.

ಐದು ಬಾರಿ ಕೌನ್ಸಿಲರ್ ಮತ್ತು ಎರಡು ಬಾರಿ ಬಿಧನಗರ ಪುರಸಭೆಯ ಮೇಯರ್ ಆಗಿದ್ದ ಸಬ್ಯಸಾಚಿ ದತ್ತ “ಕೆಲವು ತಪ್ಪು ತಿಳುವಳಿಕೆ ಇತ್ತು ಮತ್ತು ನಾನು ಪಕ್ಷವನ್ನು ತೊರೆದು ಬಿಜೆಪಿ ಸೇರಿಕೊಂಡೆ. ಆದರೆ, ಮಮತಾ ಬ್ಯಾನರ್ಜಿ ಮತ್ತೊಮ್ಮೆ ನನ್ನನ್ನು ಒಪ್ಪಿಕೊಂಡರು ಮತ್ತು ನನ್ನ ಹಳೆಯ ಪಕ್ಷಕ್ಕೆ ಸೇರಲು ಅವಕಾಶ ಮಾಡಿಕೊಟ್ಟರು, ನಾನು ಋಣಿಯಾಗಿದ್ದೇನೆ. ನಾನು ಹೊಸ ಪ್ರಯಾಣ ಆರಂಭಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಸಬ್ಯಸಾಚಿ ದತ್ತ ಜತೆ ಎಂಎಲ್‌ಎ ಸುಜಿತ್ ಬಸು, ತಪಶ್ ಚಟರ್ಜಿ ಜೊತೆಗೆ ಪಾರ್ಥ ಚಟರ್ಜಿ ಮತ್ತು ಫಿರ್ಹಾದ್ ಹಕೀಮ್ ಸಹ ಹಾಜರಿದ್ದರು.

ಪಶ್ಚಿಮ ಬಂಗಾಳ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ, “ಮಮತಾ ಬ್ಯಾನರ್ಜಿಯ ಅನುಮೋದನೆಯ ನಂತರ, ಅವರು (ದತ್ತ) ಟಿಎಂಸಿಗೆ ಸೇರುತ್ತಾರೆ. ಇಂದು ಮಮತಾ ಬ್ಯಾನರ್ಜಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದು ಐತಿಹಾಸಿಕ ದಿನ. ಈ ದಿನ, ಸಬ್ಯಸಾಚಿ ದತ್ತ ಟಿಎಂಸಿಗೆ ಮರಳಲು ನಿರ್ಧರಿಸಿದರು. ನಾವು ಅವರನ್ನು ಸ್ವಾಗತಿಸುತ್ತೇವೆ. ಅವರು ಮರಳಿದ ನಂತರ ಪಕ್ಷವನ್ನು ಬಲಪಡಿಸಲಾಗುವುದು ಎಂದು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ, ಪಕ್ಷದ ತಂತ್ರವನ್ನು ಟೀಕಿಸಿದ ಪ್ರಮುಖ ನಾಯಕರಲ್ಲಿ ದತ್ತ ಒಬ್ಬರು. “ಹೊರಗಿನಿಂದ ಅನೇಕ ನಾಯಕರು ಬಿಜೆಪಿ ಪರ ಪ್ರಚಾರಕ್ಕಾಗಿ ಇಲ್ಲಿಗೆ ಬಂದರು ಆದರೆ ಜನರು ಅದನ್ನು ಸ್ವೀಕರಿಸಲಿಲ್ಲ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Covid Vaccine: ಸದ್ಯದಲ್ಲೇ ಭಾರತದಲ್ಲಿ 100 ಕೋಟಿ ಕೊವಿಡ್ ಲಸಿಕೆ ಗುರಿ ಪೂರ್ತಿಯಾಗಲಿದೆ; ಪ್ರಧಾನಿ ಮೋದಿ ವಿಶ್ವಾಸ

TV9 Kannada

Leave a comment

Your email address will not be published. Required fields are marked *