ಪಶ್ಚಿಮ ಬಂಗಾಳ ರೇಪ್​ ಕೇಸ್​; ಟಿಎಂಸಿ ಮುಖಂಡನ ಪುತ್ರನೇ ಪ್ರಮುಖ ಆರೋಪಿ, ಡಿಎನ್​ಎ ಟೆಸ್ಟ್​ಗೆ ಮುಂದಾದ ಸಿಬಿಐ | CBI collects evidence from son of TMC leader In West Bengal


ಪಶ್ಚಿಮ ಬಂಗಾಳ ರೇಪ್​ ಕೇಸ್​; ಟಿಎಂಸಿ ಮುಖಂಡನ ಪುತ್ರನೇ ಪ್ರಮುಖ ಆರೋಪಿ, ಡಿಎನ್​ಎ ಟೆಸ್ಟ್​ಗೆ ಮುಂದಾದ ಸಿಬಿಐ

ಟಿಎಂಸಿ ನಾಯಕನ ಮನೆಗೆ ಭೇಟಿ ಕೊಟ್ಟ ಸಿಬಿಐ ತಂಡ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹನ್ಸ್​ಖಾಲಿಯಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಕೈಗೆತ್ತಿಕೊಂಡಿದ್ದು, ಡಿಎನ್​ಎ ಟೆಸ್ಟ್​ ನಡೆಸಲು ಯೋಜನೆ ರೂಪಿಸುತ್ತಿದೆ. ಅಪರಾಧ ನಡೆದ ಸ್ಥಳದಿಂದ ಸಂಗ್ರಹಿಸಲಾದ ಮಾದರಿಗಳು, ಬಂಧಿತರಾದ ಆರೋಪಿಗಳೊಂದಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಲು ಮುಂದಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.  ಈ ಪ್ರಕರಣಕ್ಕೆ ಸಂಬಂಧಪಟ್ಟು ಸ್ಥಳೀಯ ಟಿಎಂಸಿ ಮುಖಂಡನೊಬ್ಬನ ಪುತ್ರ ಮತ್ತು ಇನ್ನೊಬ್ಬನನ್ನು ಈಗಾಗಲೇ ಬಂಧಿಸಲಾಗಿದ್ದು, ಡಿಎನ್​ಎ ಟೆಸ್ಟ್ ಮಾಡಿಸಲು ಯೋಜನೆ ರೂಪಿಸಿರುವ ಸಿಬಿಐ ಈಗಾಗಲೇ ಟಿಎಂಸಿ ನಾಯಕನ ಮನೆಗೆ ಭೇಟಿ ನೀಡಿ, ಟೆಸ್ಟ್​ಗೆ ಬೇಕಾದ ಅಂಶಗಳನ್ನು ಸಂಗ್ರಹಿಸಿದೆ.

ರೇಪ್​ ಕೇಸ್​​ನಲ್ಲಿ ಪ್ರಮುಖ ಆರೋಪಿ ಟಿಎಂಸಿ ನಾಯಕನ ಪುತ್ರನೇ ಆಗಿದ್ದಾನೆ. ಹನ್ಸ್​​ಖಾಲಿಯಲ್ಲಿ ಇರುವ ಈತನ ಮನೆಯಲ್ಲಿ ಏಪ್ರಿಲ್​ 4ರಂದು ರಾತ್ರಿ ಬರ್ತ್​ ಡೇ ಪಾರ್ಟಿ ಇತ್ತು. ಆ ಪಾರ್ಟಿಗೆ ಹೋಗಿದ್ದ 9 ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅದಾದ ಕೆಲವೇ ಹೊತ್ತಲ್ಲಿ ಆಕೆ ಸಾವನ್ನಪ್ಪಿದ್ದಳು. ನಂತರ ಬಾಲಕಿಯ ತಂದೆ ಏಪ್ರಿಲ್​ 10ರಂದು ಪೊಲೀಸರಿಗೆ ದೂರು ನೀಡಿ, ಆರೋಪಿಗಳೇ ಆಕೆಯ ದೇಹವನ್ನು ಅಂತ್ಯಕ್ರಿಯೆ ಮಾಡಿದ್ದಾರೆ. ಬಂದೂಕು ತೋರಿಸಿ ಹೆದರಿಸಿ ಶವವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.

ಸಿಬಿಐ ಸಿಬ್ಬಂದಿ ಈಗಾಗಲೇ ಎರಡು ಬಾರಿ ಟಿಎಂಸಿ ಮುಖಂಡನ ಮನೆಗೆ ಭೇಟಿ ಕೊಟ್ಟು, ಹಲವು ವಸ್ತುಗಳನ್ನು  ವಶಪಡಿಸಿಕೊಂಡಿದೆ.  ಡಿಎನ್​ಎ ಪರೀಕ್ಷೆ ಎಂಬುದು ನಮ್ಮ ತನಿಖೆಗೆ ಒಂದು ನಿರ್ಣಾಯಕ ಆಯಾಮವನ್ನು ಕೊಡುತ್ತದೆ. ಈ ರೇಪ್​ ಕೇಸ್​ಗೆ ಸಂಬಂಧಿಸಿದಂತೆ ನಾವು ಹಲವು ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. ಬಾಲಕಿಯ ಶವವನ್ನು ಅಂತ್ಯಕ್ರಿಯೆ ಮಾಡಿದ ಸ್ಥಳಕ್ಕೂ ನಾಲ್ವರು ಅಧಿಕಾರಿಗಳು ಭೇಟಿ ಕೊಟ್ಟಿದ್ದರು. ಅಲ್ಲೆಲ್ಲ, ಸಮಗ್ರವಾಗಿ ವಿಡಿಯೋ ಕೂಡ ಮಾಡಲಾಗಿದೆ.

ಸದ್ಯ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಅತ್ಯಾಚಾರ ಕೇಸ್​ ದೇಶಾದ್ಯಂತ ಸುದ್ದಿಯಾಗಿದೆ. ಅದರಲ್ಲೂ ಮಮತಾ ಬ್ಯಾನರ್ಜಿ ಈ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಟೀಕೆಗೆ ಗುರಿಯಾಗಿದೆ. ಈ ಬಾಲಕಿ ಸತ್ತಿದ್ದು ರೇಪ್​ನಿಂದಲಾ? ಅವಳು ಪ್ರೇಮ ಸಂಬಂಧ ಹೊಂದಿದ್ದಳು ಎಂದು ಪಾಲಕರೂ ಒಪ್ಪಿಕೊಂಡಿದ್ದಾರೆ. ಆಕೆ ಗರ್ಭಿಣಿಯಾಗಿದ್ದಳಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಮಮತಾ ಬ್ಯಾನರ್ಜಿ ಕೇಳಿದ್ದರು. ಇದು ಅತ್ಯಂತ ಟೀಕೆಗೆ ಗುರಿಯಾಗಿತ್ತು. ಈ ಮಧ್ಯೆ ಮುಖ್ಯಮಂತ್ರಿ ಮಹಿಳೆಯೇ ಇರುವ ಪಶ್ಚಿಮ ಬಂಗಾಳದಲ್ಲಿ ಮಹಿಳೆ ಮೇಲೆ ಒಂದೇ ಒಂದು ದೌರ್ಜನ್ಯವಾದರೂ ಅದು ನಾಚಿಕೆ ಗೇಡು ಎಂದು ಟಿಎಂಸಿ ಸಂಸದರೊಬ್ಬರು ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *