ಪದೇ ಪದೇ ಹೇಳಿದರೂ ಅರ್ಥ ಮಾಡಿಕೊಳ್ಳದ ಸೋಮಾರಿಯನ್ನು ಕತ್ತೆ ಅಂತಾರೆ. ಅದ್ರೆ ಅದೇ ಕತ್ತೆಗಳೇ ಅದೊಂದು ದೇಶದ ಖಜಾನೆ ತುಂಬಿಸುತ್ತಿವೆ. ಆ ರಾಷ್ಟದಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಾದರೆ, ಪಕ್ಕದ ರಾಷ್ಟ್ರಕ್ಕೆ ಎಲ್ಲಿಲ್ಲದ ಖುಷಿ.

ಕತ್ತೆಗೂ ಒಂದು ಕಾಲ ಬಂದೇ ಬರುತ್ತೆ ಅನ್ನೋದನ್ನು ನಾವು ಕೇಳಿದ್ದೇವೆ. ಆದ್ರೆ, ಅದೊಂದು ರಾಷ್ಟ್ರದಲ್ಲಿ ಆಲ್‌ರೆಡಿ ಕತ್ತೆಗೆ ದೊಡ್ಡ ಕಾಲವೇ ಬಂದಾಗಿದೆ. ಕತ್ತೆಗಳೇ ಆ ದೇಶಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿ. ಇದು ನಿಮಗೆ ಅಚ್ಚರಿಯಾದರೂ ಸತ್ಯ. ಭಾರತದಲ್ಲಿ ಹೇಗೆ ದನ, ಎಮ್ಮೆ, ಕುರಿ, ಕೋಳಿಗಳ ಸಾಕಾಣಿಕೆ ಮತ್ತು ವ್ಯಾಪಾರ ನಡೆಯುತ್ತೋ ಅದೇ ರೀತಿಯಲ್ಲಿ ಅಲ್ಲಿ ಕತ್ತೆಗಳ ವ್ಯಾಪಾರ ನಡೆಯುತ್ತೆ. ಅವುಗಳಿಗಾಗಿಯೇ ಪ್ರತ್ಯೇಕ ಪಾರ್ಕ್‌, ಪ್ರತ್ಯೇಕ ಆಸ್ಪತ್ರೆ ನಿರ್ಮಿಸಿ ಯೋಗಕ್ಷೇಮ ನೋಡಿಕೊಳ್ಳಲಾಗುತ್ತೆ. ಯಾವ ಪ್ರಾಣಿ ಪಕ್ಷಿಗಳಿಗೂ ತೋರಿಸದ ಪ್ರೀತಿ, ಮಮತೆ ಕತ್ತೆಗಳಿಗೆ ತೋರಿಸಲಾಗುತ್ತೆ. ಗ್ರಾಮ ಪಂಚಾಯ್ತಿಯಿಂದ ಹಿಡಿದು ದೇಶದ ಸಂಸತ್‌ವರೆಗೂ ಕತ್ತೆ ಸಾಕಾಣಿಕೆಯ ವಿಷ್ಯ ಸದ್ದಾಗುತ್ತೆ. ಅಷ್ಟಕ್ಕೂ ಆ ರಾಷ್ಟ್ರ ಯಾವುದು? ಅಲ್ಲಿ ಯಾಕೆ ವರ್ಷದಿಂದ ವರ್ಷಕ್ಕೆ ಕತ್ತೆಗಳ ಸಂಖ್ಯೆ ಏರುತ್ತಿದೆ? ಪ್ರಧಾನಿಯನ್ನೇ ಏಕೆ ದಿ ಡಾಂಕಿ ಕಿಂಗ್‌ ಅಂದ್ರು? ಇದಕ್ಕೆಲ್ಲಾ ಉತ್ತರ ಇಲ್ಲಿದೆ

ನಮ್ಮ ರಾಮನಗರ, ಹಾಸನ, ಮಂಡ್ಯ, ಚಿತ್ರದುರ್ಗದಲ್ಲಿ ನಡೆಯುವಂತಹ ರಾಸುಗಳ ಜಾತ್ರೆಯಂತೆ ಅಲ್ಲಿ ಕತ್ತೆಗಳ ವ್ಯಾಪಾರ ನಡಯುತ್ತಿದೆ. ತಮಗೆ ಬೇಕಾದಷ್ಟನ್ನು ವ್ಯಾಪಾರ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ದಷ್ಟಪುಷ್ಟ ಆಗಿರುವಂತಹ ಕತ್ತೆಗಳಿಗೆ ಹೆಚ್ಚಿನ ಬೆಲೆ ಇರುತ್ತೆ, ಚಿಕ್ಕ ಚಿಕ್ಕ ಮರಿಗಳಿಗೆ ಎಲ್ಲಿಲ್ಲದ ಬೆಲೆ, ಈ ದೃಶ್ಯ ಕಂಡುಬರುತ್ತಿರುವುದು ಬೇರೆ ಎಲ್ಲೋ ದೂರದ ರಾಷ್ಟ್ರದಲ್ಲಿ ಅಲ್ಲ. ನಮ್ಮ ಪಕ್ಕದಲ್ಲೇ ಇರುವ ಪಾಕಿಸ್ತಾನದಲ್ಲಿ.

ಪಾಕ್‌ ಖಜಾನೆಗೆ ಕತ್ತೆಯೇ ಚಿನ್ನದ ಮೊಟ್ಟೆ
ವಾಣಿಜ್ಯೋದ್ಯಮಕ್ಕೆ ಕತ್ತೆ ಸಾಕಾಣಿಕೆ

ನಮ್ಮ ರಾಷ್ಟ್ರದಲ್ಲಿ ವಾಣಿಜ್ಯೋದ್ಯಮಕ್ಕೆ ಕುರಿ, ಕೋಳಿ ಸಾಕಾಣಿಗೆ ಮಾಡುತ್ತೇವೆ. ಅದೇ ರೀತಿ ಪಾಕ್‌ನಲ್ಲಿ ವಾಣಿಜ್ಯೋದ್ಯಮಕ್ಕೆ ಫಾರ್ಮ್‌ ಮಾಡಿ ಕತ್ತೆ ಸಾಕಾಣಿಕೆ ಮಾಡಲಾಗುತ್ತಿದೆ. ಸಾಕಾಣಿಕೆಗಾರರು, ವ್ಯಾಪಾರಸ್ಥರಿಗೆ ದೊಡ್ಡ ಪ್ರಮಾಣದ ಲಾಭವೇ ಬರುತ್ತಿದೆ. ಇದರಿಂದಾಗಿಯೇ ಪಾಕ್‌ನಲ್ಲಿ ಕತ್ತೆಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇತ್ತೀಚಿನ ಅಂಕ ಅಂಶದ ಪ್ರಕಾರ ಪಾಕ್‌ನಲ್ಲಿ ಕತ್ತೆಗಳ ಸಂಖ್ಯೆ 56 ಲಕ್ಷಕ್ಕೆ ಏರಿಕೆಯಾಗಿದೆಯಂತೆ. 2018-2019ರ ಅವಧಿಯಲ್ಲಿ 54 ಲಕ್ಷಗಳು ಕಂಡುಬಂದರೆ, 2019-2020ರ ಅವಧಿಯಲ್ಲಿ 55 ಲಕ್ಷ ಕತ್ತೆಗಳು ಪತ್ತೆಯಾಗಿದೆ. ಇದು ಎಲ್ಲೋ ಸಿಕ್ಕ ಮಾಹಿತಿಯಲ್ಲ, ಸ್ವತಃ ಸರ್ಕಾರವೇ ನೀಡಿರುವ ಮಾಹಿತಿ. ಇದನೆಲ್ಲಾ ನೋಡಿದ್ರೆ ಗೊತ್ತಾಗುತ್ತೆ ಪಾಕ್‌ ಖಜಾನೆಗೆ ಕತ್ತೆಗಳೇ ಚಿನ್ನದ ಮೊಟ್ಟೆ ಅನ್ನೋದು.

ಪಾಕಿಸ್ತಾನದ ಕತ್ತೆಗೆ ಚೀನಾದಲ್ಲಿ ಭಾರೀ ಬೇಡಿಕೆ
ಚೀನಾದಿಂದ ಹೋಗುತ್ತೆ ಕೋಟಿ ಕೋಟಿ ಹಣ

ಪಾಕಿಸ್ತಾನ ಕತ್ತೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಏನು ಮಾಡುತ್ತೆ, ಹೈನುಗಾರಿಕೆ ಮಾಡುತ್ತಾ, ಸಾವಯವ ಗೊಬ್ಬರ ಮಾಡುತ್ತಾ, ಇಲ್ಲಾ ಮಾಂಸ ವ್ಯಾಪಾರಕ್ಕೆ ಬಳಸಿಕೊಳ್ಳಲಾಗುತ್ತಾ? ಇಂತಹ ಹತ್ತಾರ ಪ್ರಶ್ನೆಗಳು ಉದ್ಭವವಾಗುವುದು ಸಹಜ. ಅದ್ರೆ ಅದ್ಯಾವುದು ಮುಖ್ಯ ಉದ್ದೇಶ ಅಲ್ಲವೇ ಇಲ್ಲ. ಅದಕ್ಕಿರುವ ಗುರಿ ಒಂದೇ. ಹೆಚ್ಚಿನ ಕತ್ತೆಗಳನ್ನು ಸಾಕಬೇಕು ಚೀನಾಕೆ ರಫ್ತು ಮಾಡಬೇಕು, ತನ್ನ ಖಜಾನೆ ತುಂಬಿಸಿಕೊಳ್ಳಬೇಕು ಅನ್ನೋದು. ಹೌದು, ಪಾಕ್‌ನಿಂದ ದೊಡ್ಡ ಪ್ರಮಾಣದಲ್ಲಿ ಕತ್ತೆಗಳು ಚೀನಾಕೆ ರಫ್ತಾಗುತ್ತವೆ. ಪ್ರತಿ ವರ್ಷ ಕೋಟಿ ಕೋಟಿ ಹಣ ಚೀನಾದಿಂದ ಪಾಕಿಸ್ತಾನಕ್ಕೆ ಹರಿದುಹೋಗುತ್ತೆ. ಹಾಗಾದ್ರೆ ಚೀನಾ ಕತ್ತೆಗಳನ್ನು ಏನು ಮಾಡುತ್ತೆ?

ಚೀನಾ ಯಾವುದೇ ವ್ಯವಹಾರಕ್ಕೆ ಕೈಹಾಕಿದರೂ ಅದಕ್ಕೊಂದು ಲೆಕ್ಕಾಚಾರ ಇದ್ದೇ ಇರುತ್ತೆ. ಭಾರತವನ್ನು ಮಣಿಸಬೇಕು, ಭಾರತದ ಆರ್ಥಿಕತೆ ಹಾಳು ಮಾಡಬೇಕು, ವಿಶ್ವ ಮಟ್ಟದಲ್ಲಿ ಭಾರತದ ಪ್ರಭಾವ ಕುಗ್ಗಿಸಬೇಕು ಅನ್ನೋ ಉದ್ದೇಶ ಇಟ್ಟುಕೊಂಡೇ ಪಾಕಿಸ್ತಾನಕ್ಕೆ ಯುದ್ಧಾಸ್ತ್ರಗಳನ್ನು ಪೂರೈಸುತ್ತೆ. ಚೀನಾದ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಲಾಭ ನಷ್ಟದ ಲೆಕ್ಕಾಚಾರಗಳೇ ತುಂಬಿರುತ್ತವೆ. ಪಾಕ್‌ನಿಂದ ಕತ್ತೆ ಆಮದು ಮಾಡಿಕೊಳ್ಳುವಲ್ಲಿಯೂ ದೊಡ್ಡ ಲೆಕ್ಕಾಚಾರವೆ ಅಡಗಿದೆ.

ಚೀನಾದಲ್ಲಿ ಔಷಧ ಬಳಕೆಗೆ ಕತ್ತೆ ಮಾಂಸ, ಚರ್ಮ ಬಳಕೆ
ಚರ್ಮದಿಂದ ತಯಾರಾದ ಔಷಧ ಇಮ್ಯೂನಿಟಿ ಹೆಚ್ಚಿಸುತ್ತ?

ವಿಶ್ವದಲ್ಲಿ ಅತೀ ಹೆಚ್ಚು ಔಷಧ ತಯಾರಿಕಾ ಕಂಪನಿಗಳನ್ನ ಹೊಂದಿರುವ ದೇಶಗಳಲ್ಲಿ ಚೀನಾ ಕೂಡ ಒಂದು. ಆದ್ರೆ, ಚೀನಾ ಅದಕ್ಕೆ ಬೇಕಾದಂತಹ ಕಚ್ಚಾವಸ್ತುಗಳಿಗೆ ಪಾಕಿಸ್ತಾನವನ್ನು ಅವಲಂಬಿಸಿದೆ. ಗೊತ್ತಾಯ್ತಲ್ಲ, ಪಾಕ್‌ ಕತ್ತೆಗಳನ್ನು ಚೀನಾ ಆಮದು ಮಾಡಿಕೊಳ್ಳುವ ಉದ್ದೇಶ ಏನು ಅಂತ. ಕತ್ತೆಯ ಮಾಂಸ, ಚರ್ಮವನ್ನು ಔಷಧಿಯ ತಯಾರಿಕೆಯಲ್ಲಿ ಬಳಸಿಕೊಳ್ಳುತ್ತಿದೆ. ಅದರಲ್ಲಿಯೂ ಕತ್ತೆ ಚರ್ಮದಿಂದ ತಯಾರಿಸಿದ ಔಷಧ ಇಮ್ಯೂನಿಟಿ ಪವರ್‌ ಹೆಚ್ಚಿಸುತ್ತೆ ಎನ್ನಲಾಗುತ್ತಿದೆ.

ಔಷಧ ಲೈಂಗಿಕ ಶಕ್ತಿ ಹೆಚ್ಚಿಸುತ್ತಾ?

ಮನುಷ್ಯನಿಗೆ ಲೈಂಗಿಕ ಆಸಕ್ತಿ ಸಹಜವಾದದ್ದು. ಆದ್ರೆ, ದುರಾದೃಷ್ಟವಶಾತ್‌ ಎಷ್ಟೋ ಜನರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಲು ಸಾಧ್ಯ ಆಗಲ್ಲ. ಅಂತಹ ವ್ಯಕ್ತಿಗಳಿಗಿರುವ ನಾನಾ ರೀತಿಯ ಸಮಸ್ಯೆಗಳೇ ಅದಕ್ಕೆಲ್ಲ ಅಡ್ಡಿ. ಯಾಕಾದ್ರೂ ಜೀವ ಇದೆಯೋ ಅನ್ನುವಷ್ಟು ಜಿಗುಪ್ಸೆ ಹೊಂದಿ ಬಿಡ್ತಾರೆ. ಖಿನ್ನತೆಗೆ ಒಳಗಾಗಿ ಬಿಡ್ತಾರೆ. ಅಂತವರಿಗಾಗಿಯೇ ಮಾರುಕಟ್ಟೆಯಲ್ಲಿ ಮಾತ್ರೆಗಳು, ಸ್ಟ್ರೇಗಳು ಲಭ್ಯ ಇವೆ. ಆದ್ರೆ, ಇಲ್ಲೇ ಇದೆ ನೋಡಿ ಅನುಮಾನ. ಅಂತಹ ಔಷಧದಲ್ಲಿ ಕತ್ತೆಯಲ್ಲಿ ಸಿಗುವ ಕೊಬ್ಬಿನಾಂಶವನ್ನು ಬಳಸಿಕೊಳ್ಳುತ್ತಾರಂತೆ. ಅಂತಹ ಬಹುಪಾಲು ಔಷಧಗಳು ಚೀನಾದಿಂದಲೇ ಬರುತ್ತವಂತೆ. ಆದ್ರೆ, ಈ ಬಗ್ಗೆ ಯಾವುದೇ ತಜ್ಞರು ಅಧಿಕೃತವಾಗಿ ಹೇಳಿಲ್ಲ.

ಕತ್ತೆ ಹಾಲಿಗೂ ಇದೆ ಭಾರೀ ಬೇಡಿಕೆ

ಕತ್ತೆಹಾಲಿನ ಮಾರಾಟ ಭಾರತದಲ್ಲಿಯೂ ಕಂಡುಬರುತ್ತಿದೆ. ಚಿಕ್ಕಮಕ್ಕಳಿಗೆ ಕತ್ತೆ ಹಾಲು ಕುಡಿಸಿದರೆ ಅನಾರೋಗ್ಯ ಹತ್ತಿರವೂ ಸುಳಿಯಲ್ಲ ಅನ್ನುವಂತ ಮಾತಿದೆ. ಅದು ಸತ್ಯವೂ ಸುಳ್ಳೋ ಇಲ್ಲವೇ ಮೂಢನಂಬಿಕೆಯೋ ತಿಳಿಯದು. ದೇಶದಲ್ಲಿ ಆಗಾಗ ಕತ್ತೆ ಹಾಲಿನ ಸದ್ದು ಮಾತ್ರ ಇದ್ದೆ ಇರುತ್ತೆ. ಕಳೆದ ವರ್ಷ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯಲ್ಲಿ 1 ಲೀಟರ್‌ ಕತ್ತೆ ಹಾಲು ಬರೋಬ್ರರಿ 10 ಸಾವಿರ ರೂಪಾಯಿಗೆ ಮಾರಾಟವಾಗಿತ್ತು. ಅದು, ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿತ್ತು. ಅದೇ ರೀತಿ ಪಾಕಿಸ್ತಾನ, ಚೀನಾದಲ್ಲಿ ಕೂಡ ಕತ್ತೆ ಹಾಲು ಬಳಸುತ್ತಾರಂತೆ.

ಪಾಕಿಸ್ತಾನದ ಸಂಸತ್‌ನಲ್ಲಿ ಪ್ರತಿಪಕ್ಷಗಳ ಗದ್ದಲ
ಇಮ್ರಾನ್‌ ಖಾನ್‌ಗೆ ಡಾಂಕಿ ಪ್ರಧಾನಿ ಅಂದ್ರು

ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಿಸಲು ಚೀನಾ ಪಾಕಿಸ್ತಾನಕ್ಕೆ ಸಾಲ ಕೊಡುತ್ತೆ. ಪಾಕಿಸ್ತಾನ ಕತ್ತೆಗಳ ಸಾಕಾಣಿಕೆಗೆ ಉತ್ತೇಜನ ನೀಡುತ್ತೆ. ಇದರ ಪರಿಣಾಮವೇ ಪಾಕ್‌ನಲ್ಲಿ ಪ್ರಸಕ್ತ ವರ್ಷದಲ್ಲಿ ಕತ್ತೆಗಳ ಸಂಖ್ಯೆ 56 ಲಕ್ಷಕ್ಕೆ ಏರಿದೆ. ಖಜಾನೆಗೆ ಹಣ ಬರುತ್ತೆ ಅಂತ ಪಾಕ್‌ ಸರ್ಕಾರ ಖುಷಿಯಾಗಿದ್ದರೆ ಪ್ರತಿಪಕ್ಷಗಳು, ಜನ ಮಾತ್ರ ಸಿಟ್ಟಾಗಿ ಬಿಟ್ಟಿದ್ದಾರೆ. ಸಂಸತ್‌ನಲ್ಲಿ ಡಾಂಕಿ ಪ್ರಧಾನಿ ನಮಗೆ ಬೇಡ ಎಂದು ಪ್ರತಿಪಕ್ಷಗಳು ಘೋಷಣೆ ಕೂಗಿವೆ. ಇದು ಪ್ರಧಾನಿ ಇಮ್ರಾನ್‌ ಖಾನ್‌ಗೆ ಮುಜುಗರ ತಂದಿದೆ.

ಅತ್ತೆಗೊಂದು ಕಾಲ ಆದ್ರೆ ಸೊಸೆಗೊಂದು ಕಾಲ ಅನ್ನೊ ಗಾದೆ ಮಾತಿನಂತೆ ಈಗ ಕತ್ತೆಗೂ ಒಂದು ಕಾಲ ಬಂದಿದೆ. ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಾದಂತೆ ಚೀನಾಕ್ಕೆ ಹಬ್ಬ. ಆದ್ರೆ, ಪಾಕ್‌ ಸರ್ಕಾರದ ಪ್ರತಿಪಕ್ಷಗಳ ಕೋಪ ಮಾತ್ರ ನೆತ್ತಿಗೇರಿಬಿಟ್ಟಿದೆ.

 

The post ಪಾಕಿಸ್ತಾನದಲ್ಲೀಗ ಕತ್ತೆಗೂ ಕಾಲ.. ಕೋಟಿ ಕೋಟಿ ಕೊಟ್ಟು ಪಾಕ್ ಕತ್ತೆಗಳನ್ನ ಖರೀದಿಸ್ತಿರೋದ್ಯಾಕೆ ಚೀನಾ? appeared first on News First Kannada.

Source: newsfirstlive.com

Source link