Cheteshwar Pujara, Mohammad Rizwan
ಭಾರತ-ಪಾಕಿಸ್ತಾನ್ ನಡುವಣ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಕಾಯುವಿಕೆ ಕೊನೆಗೊಳ್ಳುವುದು ಈ ವರ್ಷ ನಡೆಯಲಿರುವ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಮೂಲಕ ಎಂಬುದು ವಿಶೇಷ. ಇದಾಗ್ಯೂ ಭಾರತ-ಪಾಕ್ ಆಟಗಾರರು ಜೊತೆಯಾಗಿ ಆಡುವುದನ್ನು ನೋಡಬೇಕಿದ್ದರೆ ಇಂಗ್ಲೆಂಡ್‌ನ ಕೌಂಟಿ ಪಂದ್ಯಗಳನ್ನು ವೀಕ್ಷಿಸಬಹುದು. ಹೌದು, ಭಾರತ ಮತ್ತು ಪಾಕಿಸ್ತಾನದ ಆಟಗಾರರು ಇಂಗ್ಲೆಂಡ್‌ನ ತಂಡದಿಂದ ಪಾದಾರ್ಪಣೆ ಮಾಡಿದ್ದಾರೆ. ಇಬ್ಬರು ಆಟಗಾರರು ಜೊತೆಯಾಗಿ ಬ್ಯಾಟಿಂಗ್ ಮಾಡುವುದನ್ನು ಸಹ ಕಾಣಬಹುದು. ಟೀಮ್ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ (Cheteshwar Pujara) ಮತ್ತು ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಕೌಂಟಿ ಕ್ರಿಕೆಟ್‌ನಲ್ಲಿ ಸಸೆಕ್ಸ್ ತಂಡದ ಪರ ಪಾದಾರ್ಪಣೆ ಮಾಡಿದ್ದಾರೆ.
ಕೌಂಟಿ ಕ್ರಿಕೆಟ್ ಚಾಂಪಿಯನ್‌ಶಿಪ್ ಡಿವಿಷನ್-2 ರಲ್ಲಿ ಡರ್ಬಿಶೈರ್ ವಿರುದ್ಧದ ನಡೆದ ಪಂದ್ಯದಲ್ಲಿ ರಿಜ್ವಾನ್ ಹಾಗೂ ಪೂಜಾರ ಸಸೆಕ್ಸ್ ಪರ ಚೊಚ್ಚಲ ಪಂದ್ಯವಾಡಿದ್ದರು. ಪೂಜಾರ ಈ ಮೊದಲು ಇಂಗ್ಲೆಂಡ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಆದರೆ ರಿಜ್ವಾನ್ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುತ್ತಿರುವುದು ವಿಶೇಷ.
ಈ ಬಗ್ಗೆ ಟ್ವೀಟ್ ಮಾಡಿರುವ ಸಸೆಕ್ಸ್ ತಂಡವು ಇಬ್ಬರ ಆಟಗಾರರ ಫೋಟೋವನ್ನು ಹಂಚಿಕೊಂಡಿದೆ. ಟಾಮ್ ಡೇನ್ಸ್ ನೇತೃತ್ವದ ಸಸೆಕ್ಸ್‌ನ ಪ್ಲೇಯಿಂಗ್-11 ರಲ್ಲಿ ಪೂಜಾರ ಮತ್ತು ರಿಜ್ವಾನ್ ಇಬ್ಬರೂ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಭಾರತ ತಂಡದಿಂದ ಹೊರಗುಳಿದಿರುವ ಪೂಜಾರ, ಕೌಂಟಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾಗೆ ಮರಳುವ ವಿಶ್ವಾಸದಲ್ಲಿದ್ದಾರೆ.
ಇನ್ನು ರಿಜ್ವಾನ್ ಕಳೆದ ಕೆಲವು ವರ್ಷಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ವೃತ್ತಿ ಜೀವನವನ್ನು ಉಜ್ವಲಗೊಳಿಸುವ ಸಲುವಾಗಿ ಇಂಗ್ಲೆಂಡ್ ಕೌಂಟಿಯತ್ತ ಮುಖ ಮಾಡಿದ್ದಾರೆ. ಇನ್ನು ಸಸೆಕ್ಸ್ ಪರ ಪೂಜಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಹಾಗೆಯೇ ರಿಜ್ವಾನ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಮೊದಲ ಪಂದ್ಯದಲ್ಲಿ ಸಸೆಕ್ಸ್ ಸೋತಿದ್ದು, ಈ ಪಂದ್ಯದಲ್ಲಿ ಪೂಜಾರ ಹಾಗೂ ರಿಜ್ವಾನ್ ಆಡಿರಲಿಲ್ಲ. ಇದೀಗ ತಂಡಕ್ಕೆ ಸೇರ್ಪಡೆಯಾಗಿರುವ ಪೂಜಾರ ಅವರು ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಈ ಹಿಂದೆಯೂ ಅವರು ಕೌಂಟಿ ಕ್ರಿಕೆಟ್ ಆಡಿದ್ದಾರೆ. ಹೀಗಾಗಿ ಪೂಜಾರ ಅವರ ಆಗಮನ ಸಸೆಕ್ಸ್ ತಂಡದ ಬ್ಯಾಟಿಂಗ್ ಅನ್ನು ಬಲಪಡಿಸಲಿದೆ. ಹಾಗೆಯೇ ರಿಜ್ವಾನ್ ಕೂಡ ಇಂಗ್ಲೆಂಡ್ ಪಿಚ್ನಲ್ಲಿ ಆಡಿದ ಅನುಭವ ಹೊಂದಿದ್ದು, ಹಾಗಾಗಿ ಅನುಭವಿ ಆಟಗಾರರ ಆಗಮನದಿಂದಾಗಿ ಸಸೆಕ್ಸ್ ತಂಡವು ಗೆಲುವನ್ನು ಎದುರು ನೋಡುತ್ತಿದೆ.