ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್ ಕುಲಭೂಷಣ್ ಜಾಧವ್
ಇಸ್ಲಾಮಾಬಾದ್: ಗೂಢಚರ್ಯೆ ಆರೋಪದ ಮೇಲೆ ಪಾಕಿಸ್ತಾನದ ಸೇನಾ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿರುವ ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್ ಕುಲಭೂಷಣ್ ಜಾಧವ್ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಯನ್ನು ಪಾಕಿಸ್ತಾನದ ಸಂಸತ್ತು ಅಂಗೀಕರಿಸಿದೆ. ಅಂತರರಾಷ್ಟ್ರೀಯ ನ್ಯಾಯಮಂಡಳಿ ತೀರ್ಪನ್ನು ಜಾರಿಗೆ ತರುವ ಉದ್ದೇಶದಿಂದ ಪಾಕಿಸ್ತಾನದ ಸಂಸತ್ತು ಈ ನಿರ್ಧಾರ ತೆಗೆದುಕೊಂಡಿದೆ. ಪಾಕಿಸ್ತಾನದ ಕಾನೂನು ಸಚಿವ ಫರೋಘ್ ನಸೀಮ್ ‘ಅಂತರರಾಷ್ಟ್ರೀಯ ನ್ಯಾಯಮಂಡಳಿ (ಮರುಪರಿಶೀಲನೆ) ಮಸೂದೆ’ಯನ್ನು ಪಾಕ್ ಸಂಸತ್ತಿನ ಜಂಟಿ ಅಧಿವೇಷನದಲ್ಲಿ ಮಂಡಿಸಿದರು ಎಂದು ಪಾಕಿಸ್ತಾನದ ಪ್ರಮುಖ ದೈನಿಕ ಡಾನ್ ವರದಿ ಮಾಡಿದೆ.
ಕುಲಭೂಷಣ್ ಜಾಧವ್ ಬಂಧನ ಮತ್ತು ಶಿಕ್ಷೆಯ ವಿಚಾರವನ್ನು ಭಾರತ ಸರ್ಕಾರವು ಅಂತರರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು. ಭಾರತೀಯ ಪ್ರಜೆ ಕುಲಭೂಷಣ್ ಯಾದವ್ ಬಂಧನವು ವಿಯೆನ್ನಾ ಒಪ್ಪಂದದ ಉಲ್ಲಂಘನೆ ಎಂದು ಹೇಳಿತ್ತು. ಏಪ್ರಿಲ್ 2017ರಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವು ಕುಲಭೂಷಣ್ ಜಾಧವ್ ಅವರಿಗೆ ಮರಣದಂಡನೆ ವಿಧಿಸಿತ್ತು. ಭಾರತದ ಮನವಿಯ ಮೇಲೆ ಪ್ರಕರಣದ ವಿಚಾರಣೆ ನಡೆಸಿದ್ದ ಅಂತರರಾಷ್ಟ್ರೀಯ ನ್ಯಾಯಮಂಡಳಿ ಜುಲೈ 17, 2019ರಲ್ಲಿ ತೀರ್ಪು ನೀಡಿ, ಜಾಧವ್ ಅವರಿಗೆ ಮೇಲ್ಮನವಿಗೆ ಅವಕಾಶ ಕಲ್ಪಿಸಬೇಕು ಎಂದು ಪಾಕಿಸ್ತಾನಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಾಧವ್ ಅವರಿಗೆ ಮರುಪರಿಶೀಲನೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಮಸೂದೆಯನ್ನು ಪಾಕ್ ಸಂಸತ್ತು ಅಂಗೀಕರಿಸಿದೆ.
ಭಾರತ ಮತ್ತು ಪಾಕಿಸ್ತಾನಗಳ ವಾದ ಆಲಿಸಿದ್ದ ಅಂತರರಾಷ್ಟ್ರೀಯ ನ್ಯಾಯಮಂಡಳಿಯು ಜಾಧವ್ ಅವರನ್ನು ಭೇಟಿಯಾಗಲು ಭಾರತದ ರಾಜತಾಂತ್ರಿಕರಿಗೆ ಅವಕಾಶ ಕಲ್ಪಿಸಬೇಕು ಎಂದು ಸಹ ಸೂಚಿಸಿತ್ತು. 2020ರಲ್ಲಿ ಜಾಧವ್ಗೆ ಮೇಲ್ಮನವಿ ಸಲ್ಲಿಕೆಗೆ ಅವಕಾಶ ಕೋರಿ ಪಾಕಿಸ್ತಾನ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ ಜಾಧವ್ ಮೇಲ್ಮನವಿ ಸಲ್ಲಿಸಲು ಒಪ್ಪಲಿಲ್ಲ. ರಕ್ಷಣಾ ಕಾರ್ಯದರ್ಶಿ ಇಸ್ಲಾಮಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಜಾಧವ್ ಪರ ವಕೀಲರನ್ನು ನೇಮಿಸಲು ಕೋರಿತ್ತು. ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ರಚಿಸಿದ್ದ ಇಸ್ಲಾಮಾಬಾದ್ ಹೈಕೋರ್ಟ್ ವಕೀಲರನ್ನು ನೇಮಿಸುವಂತೆ ಭಾರತ ಸರ್ಕಾರಕ್ಕೆ ಸೂಚಿಸಿತ್ತು. ಪಾಕಿಸ್ತಾನದ ವಕೀಲರನ್ನು ನೇಮಿಸಲು ನಿರಾಕರಿಸಿದ್ದ ಭಾರತ ಸರ್ಕಾರವು, ಭಾರತೀಯ ವಕೀಲರನ್ನೇ ನೇಮಿಸಲು ಅವಕಾಶ ನೀಡಬೇಕು ಎಂದು ಕೋರಿತ್ತು.
ಜಾಧವ್ ಪ್ರಕರಣದ ವಿಚಾರಣೆಯು ಕಳೆದ ಅಕ್ಟೋಬರ್ 5ರಂದು ನಡೆದಿತ್ತು. ಭಾರತ ಸರ್ಕಾರಕ್ಕೆ ವಕೀಲರನ್ನು ನೇಮಿಸುವಂತೆ ಸೂಚಿಸಬೇಕೆಂದು ಪಾಕ್ ಕೋರ್ಟ್ ಅಂದು ಸಹ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿತ್ತು. ಜಾಧವ್ ಪ್ರಕರಣದ ವಿಚಾರಣೆಯನ್ನು ಪ್ರಸ್ತುತ ಡಿಸೆಂಬರ್ 9ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತ, ಏನಿದರ ಹಕೀಕತ್ತು?
ಇದನ್ನೂ ಓದಿ: ಪಾಕಿಸ್ತಾನ ಸರ್ಕಾರದ ಹೊಸ ವರಸೆ, ಉಗ್ರರಿಗೆ ಕ್ಷಮಾದಾನ ಮತ್ತು ಮುಖ್ಯವಾಹಿನಿಗೆ ಬರುವ ಅವಕಾಶ!