ಪಾಟರಿಟೌನ್ ಮೆಟ್ರೊ ನಿಲ್ದಾಣಕ್ಕೆ ಪುನೀತ್ ರಾಜ್​ಕುಮಾರ್ ಹೆಸರು ಇರಿಸಲು ಮನವಿ: ಪ್ರಧಾನಿ ಕಚೇರಿ ಸ್ಪಂದನೆ | PM Narendra Modi Office Instructs Karnataka Govt to Name Pottery Town Metro Station in Name of Puneeth Rajkumar


ಪಾಟರಿಟೌನ್ ಮೆಟ್ರೊ ನಿಲ್ದಾಣಕ್ಕೆ ಪುನೀತ್ ರಾಜ್​ಕುಮಾರ್ ಹೆಸರು ಇರಿಸಲು ಮನವಿ: ಪ್ರಧಾನಿ ಕಚೇರಿ ಸ್ಪಂದನೆ

ಮೆಟ್ರೊ ರೈಲು ಮತ್ತು ಪುನೀತ್ ರಾಜ್​ಕುಮಾರ್

ಬೆಂಗಳೂರು: ನಗರದ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ನಿರ್ಮಾಣವಾಗಲಿರುವ ಪಾಟರಿಟೌನ್​ ಮೆಟ್ರೊ ರೈಲು ನಿಲ್ದಾಣಕ್ಕೆ (Metro Station) ಈಚೆಗೆ ನಿಧನರಾದ ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಹೆಸರು ಇರಿಸುವಂತೆ ಪ್ರಧಾನಿ ಕಾರ್ಯಾಲಯವು (PM Office) ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಮೆಟ್ರೊ ನಿಲ್ದಾಣಕ್ಕೆ ಪುನೀತ್ ರಾಜ್​ಕುಮಾರ್ ಹೆಸರು ಇರಿಸುವ ಮೂಲಕ ಅವರ​ ಹೆಸರು ಚಿರಸ್ಥಾಯಿ ಆಗುವಂತೆ ಮಾಡಿ ಎಂದು ಕರ್ನಾಟಕ ಬಹುಜನ ಫೆಡರೇಷನ್ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜನವರಿ 2ರಂದು ಪತ್ರ ಬರೆದಿತ್ತು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಪ್ರಧಾನಿ ಕಾರ್ಯಾಲಯದಿಂದ ನಿರ್ದೇಶನ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಕಾರ್ಯಾಲಯದಿಂದಲೂ ಸ್ಪಂದನೆ ಸಿಕ್ಕಿದ್ದು, ಕರ್ನಾಟಕ ಸರ್ಕಾರವು ಶೀಘ್ರ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಪುಲಿಕೇಸಿ ನಗರ ಮೆಟ್ರೊ ನಿಲ್ದಾಣಕ್ಕೆ ಪುನೀತ್ ರಾಜ್​ಕುಮಾರ್ ಹೆಸರನ್ನು ಇರಿಸಬೇಕೆಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಕರ್ನಾಟಕ ಬಹುಜನ ಫೆಡರೇಷನ್ ಸಂಘಟನೆ ಮನವಿ ಮಾಡಿತ್ತು. ಈ ಕುರಿತು ಸಂಸದ ಡಿ.ವಿ.ಸದಾನಂದಗೌಡರ ಅವರಿಗೂ ಮನವಿ ಪತ್ರ ನೀಡಲಾಗಿತ್ತು.

ರಾಜ್ಯದ ಹೆಮ್ಮೆಯ ನಟ ಪುನೀತ್ ಅವರನ್ನು ಕನ್ನಡಿಗರು ಹಲವು ರೀತಿಗಳಲ್ಲಿ ಗೌರವಿಸುತ್ತಿದ್ದಾರೆ. ಬಿಬಿಎಂಪಿ ನೌಕರರ ಸಂಘವು ಬೆಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದೆ. ನಗರದ ಯಾವುದಾದರೂ ಒಂದು ಮೆಟ್ರೊ ನಿಲ್ದಾಣಕ್ಕೆ ಪುನೀತ್ ಹೆಸರು ನಾಮಕರಣ ಮಾಡಬೇಕು ಎಂಬ ಒತ್ತಾಯವೂ ವ್ಯಾಪಕವಾಗಿ ಕೇಳಿ ಬಂದಿತ್ತು. ಬೆಂಗಳೂರಿನಲ್ಲಿ ಪ್ರಸ್ತುತ ಬಾಲಗಂಗಾಧರನಾಥ ಸ್ವಾಮೀಜಿ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಮೆಟ್ರೊ ನಿಲ್ದಾಣಗಳು ಇವೆ.

TV9 Kannada


Leave a Reply

Your email address will not be published.