ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕೊರೊನಾ ಸೋಂಕು, ಒಮಿಕ್ರಾನ್ ಸೋಂಕು ಹೆಚ್ಚಳ, ಅತಿಥಿ ಉಪನ್ಯಾಸಕರ ಮುಷ್ಕರದಿಂದ ಪಾಠ ಪ್ರವಚನ ಮುಗಿದಿಲ್ಲ. ಹೀಗಾಗಿ ಪದವಿ ಪರೀಕ್ಷೆಗಳನ್ನು 1 ತಿಂಗಳು ಮುಂದೂಡಲು ವಿಶ್ವ ವಿದ್ಯಾಲಯಗಳಿಗೆ ಸೂಚನೆ ನೀಡಲಾಗಿದೆ. ವಿಶ್ವವಿದ್ಯಾಲಯಗಳ ವಿಸಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಎಸಿಎಸ್ ಜಿ.ಕುಮಾರ್ ನಾಯಕ್ ಈ ಬಗ್ಗೆ ಸೂಚನೆ ನೀಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ವಿವಿಗಳ ಸೆಮಿಸ್ಟರ್ ಪರೀಕ್ಷೆ 1 ತಿಂಗಳ ಕಾಲ ಮುಂದೂಡಿ ಎಂದು ಉನ್ನತ ಶಿಕ್ಷಣ ಇಲಾಖೆ ಎಸಿಎಸ್ ತಿಳಿಸಿದ್ದಾರೆ.
ಕೊರೊನಾ ಬಳಿಕ ಇದೀಗ ಹಿಜಾಬ್ ವಿವಾದ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಕರ್ನಾಟಕ ರಾಜ್ಯಾದಂತ ಮೂರು ದಿನಗಳ ಕಾಲ ಹೈಸ್ಕೂಲ್ ಹಾಗೂ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆ ಬಳಿಕ, ಇದೀಗ ಕಾಲೇಜು ಮತ್ತೆ ಆರಂಭವಾಗಿದೆ. ಆದರೂ ಹಲವು ಜಿಲ್ಲೆಗಳಲ್ಲಿ ಶಿಕ್ಷಣ ಮತ್ತೆ ಮೊದಲಿನಂತೆ ಆರಂಭವಾಗಿಲ್ಲ. ನಿಷೇಧಾಜ್ಞೆ ಜಾರಿಯಲ್ಲಿದೆ.
ಅಷ್ಟೇ ಅಲ್ಲದೆ, ಇಂದಿನಿಂದ ನಿಷೇಧಾಜ್ಞೆ ಜಾರಿ ಮಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಶಾಲಾ-ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಆದೇಶಿಸಲಾಗಿದೆ. ಇಂದಿನಿಂದ ಫೆಬ್ರವರಿ 23ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಇರಲಿದೆ. ಇಂದು ಚಿಕ್ಕಮಗಳೂರು ನಗರದ ಕಾಲೇಜುಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ವಿದ್ಯಾರ್ಥಿನಿಯರು ಪ್ರತಿಭಟಿಸುವಾಗ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕಾಲೇಜು ಮುಂಭಾಗ ಬೃಹತ್ ಜನಸ್ತೋಮ, ಪೋಷಕರು ಸೇರಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 144 ಸೆಕ್ಷನ್ ಜಾರಿ ಮಾಡಿ ಡಿಸಿ ಕೆ ಎನ್ ರಮೇಶ್ ಆದೇಶ ನೀಡಿದ್ದಾರೆ.
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ವಿಜಯನಗರ ಜಿಲ್ಲೆಯ ಕಾಲೇಜುಗಳ ಬಳಿ ಕೂಡ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಆದೇಶ ನೀಡಿದ್ದಾರೆ. ಕಾಲೇಜು ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರಲಿದೆ.