ಪಾದಯಾತ್ರೆ ತಡೆಯುತ್ತೇವೆಂದು ಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಲು ಸರ್ಕಾರ ನಿರ್ಧಾರ; ಕೋರ್ಟ್ ಆಕ್ಷೇಪ ಹಿನ್ನೆಲೆ ಕ್ರಮ | Basavaraj Bommai Karnataka Govt to take action against Congress Mekedatu Padayatra details here


ಪಾದಯಾತ್ರೆ ತಡೆಯುತ್ತೇವೆಂದು ಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಲು ಸರ್ಕಾರ ನಿರ್ಧಾರ; ಕೋರ್ಟ್ ಆಕ್ಷೇಪ ಹಿನ್ನೆಲೆ ಕ್ರಮ

ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೋರ್ಟ್ ಆಕ್ಷೇಪ ಹಿನ್ನೆಲೆ ಪಾದಯಾತ್ರೆ ತಡೆಯುತ್ತೇವೆಂದು ಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧಾರ ಮಾಡಿದೆ. ಪಾದಯಾತ್ರೆ ನಡೆಸದಂತೆ ಈವರೆಗೆ ನೀಡಿದ ನೋಟಿಸ್​ಗಳು, ಸೂಚನೆಗಳು, ಮೌಖಿಕ ಮನವಿ, ದಾಖಲಿಸಿರುವ FIR ಸೇರಿ ಎಲ್ಲ ವಿವರ ಒಳಗೊಂಡ ಅಫಿಡವಿಟ್​ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಸಚಿವರು, ಅಧಿಕಾರಿಗಳ ಜತೆ ಚರ್ಚೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೋರ್ಟ್ ಆಕ್ಷೇಪ ಹಿನ್ನೆಲೆ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ. ದೂರವಾಣಿ ಮೂಲಕ ಚರ್ಚೆ ನಡೆಸಿದ ಸಿಎಂ ಬೊಮ್ಮಾಯಿ‌, ಸಚಿವರಾದ ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಆರ್‌.ಅಶೋಕ್, ಡಾ.ಸುಧಾಕರ್, ಸಿಎಸ್ ರವಿಕುಮಾರ್, ಡಿಜಿ & ಐಜಿಪಿ ಸೂದ್, ಎಜಿ ನಾವದಗಿ ಜತೆ ಸಿಎಂ ಚರ್ಚೆ ಮಾಡಿದ್ದಾರೆ. ಸರ್ಕಾರದ ಮುಂದಿನ ನಿಲುವಿನ ಬಗ್ಗೆ ಬೊಮ್ಮಾಯಿ ಚರ್ಚಿಸಿದ್ದು ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ವಯ ಕ್ರಮದ ಬಗ್ಗೆ ಮಾತುಕತೆ ನಡೆಸಲಾಗಿದೆ. ಕ್ರಮಕೈಗೊಳ್ಳುವ ವಿಚಾರವಾಗಿ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ.

ಪಾದಯಾತ್ರೆ ಗುರುವಾರ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗುವ ಹಿನ್ನೆಲೆ; ಸಂಚಾರ ಸ್ಥಗಿತಗೊಳಿಸದಿರಲು ನಿರ್ಧಾರ

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​ ಪಾದಯಾತ್ರೆ ನಾಳೆ (ಜನವರಿ 13) ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗುವ ಹಿನ್ನೆಲೆ ಪಾದಯಾತ್ರೆ ವೇಳೆ ಸಂಚಾರ ಸ್ಥಗಿತಗೊಳಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ. ವಾಹನ ಸಂಚಾರ ಸ್ಥಗಿತಗೊಳಿಸದಿರಲು ಸರ್ಕಾರ ನಿರ್ಧಾರ ಮಾಡಿದೆ. ಎಂದಿನಂತೆ ಸಂಚಾರ ಇರುವಂತೆ ನೋಡಿಕೊಳ್ಳಲು ಸೂಚನೆ ಕೊಡಲಾಗಿದೆ. ರಾಮನಗರ ಪೊಲೀಸ್ ಇಲಾಖೆಗೆ ಸರ್ಕಾರದಿಂದ ಸೂಚನೆ ಕೊಡಲಾಗಿದೆ.

ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಶಾಲೆ ಬಂದ್​ಗೆ ಚರ್ಚೆ

ಪಾದಯಾತ್ರೆಯ ವೇಳೆ ಡಿ.ಕೆ. ಶಿವಕುಮಾರ್​ಗೆ ಸನ್ಮಾನ ಹಾಗೂ ಜೈಕಾರ, ಶಾಲಾ ಮಕ್ಕಳ ಜತೆ ಡಿಕೆಶಿ ಫೋಟೋ ತೆಗೆಸಿಕೊಂಡ ಹಿನ್ನೆಲೆ ಪಾದಯಾತ್ರೆ ಮುಗಿಯುವವರೆಗೂ ಶಾಲೆ ಬಂದ್​ಗೆ ಮನವಿ ಮಾಡಲಾಗಿದೆ. ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಶಾಲೆ ಬಂದ್​ಗೆ ಚರ್ಚೆ ವೇಳೆ ಸಿಎಂ ಬೊಮ್ಮಾಯಿಗೆ ಹಿರಿಯ ಸಚಿವರು ಮನವಿ ಮಾಡಿದ್ದಾರೆ. ದೂರವಾಣಿ ಮೂಲಕ ಚರ್ಚೆ ವೇಳೆ ಸಿಎಂಗೆ ಸಚಿವರು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ; ಕಾಂಗ್ರೆಸ್ ಟೀಕಿಸಿದ ಗೋವಿಂದ ಕಾರಜೋಳ

ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಮಾಡಿದ್ರಲ್ಲ. 15 ಲಕ್ಷ ಎಕರೆಗೆ ನೀರಾವರಿ ಕಲ್ಪಿಸುತ್ತೇವೆಂದು ಆಸೆ ಹುಟ್ಟಿಸಿದ್ರು. ಜನರಿಗೆ ಆಸೆ ತೋರಿಸಿ ಅಧಿಕಾರಕ್ಕೆ ಕಾಂಗ್ರೆಸ್​ನವರು ಬಂದಿದ್ದರು. ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್​ನವರು ಏನನ್ನೂ ಮಾಡಲಿಲ್ಲ ಎಂದು ಬಾಗಲಕೋಟೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಕೇವಲ ನಾಟಕ. ಅವರಿಗೆ DPR, PFR ಯಾವುದೇ ಮೊದಲು ಎಂಬ ಪರಿಜ್ಞಾವಿಲ್ಲ ಎಂದು ಟೀಕಿಸಿದ್ದಾರೆ.

ಇಂತಹ ಗಿಮಿಕ್ ಬಿಡಬೇಕು, ಪಾದಯಾತ್ರೆ ಸಂಬಂಧ ಕ್ಷಮೆಕೇಳಲಿ. ಪಾದಯಾತ್ರೆಯಲ್ಲಿ ಶಾಸಕರು, ಮುಖಂಡರಿಗೆ ಸೋಂಕು ತಗುಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ಸಂಖ್ಯೆ ಸುಳ್ಳು ಎಂದು ಕಾಂಗ್ರೆಸ್​ನವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್​ 50 ವರ್ಷದ ಸುಳ್ಳು ಹೇಳಿಕೊಂಡೇ ಕಾಲ ಕಳೆದಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್​ನವರಿಗೆ ಹೆಚ್ಚಿನ ದುರಂತ ಕಾದಿದೆ. ಕೊವಿಡ್​ ಕೇಸ್​ ಹೆಚ್ಚಾಗುತ್ತೆ ಪಾದಯಾತ್ರೆ ಬೇಡವೆಂದು ಹೇಳಿದ್ವಿ ಎಂದು ತಿಳಿಸಿದ್ದಾರೆ.

ಎಂ.ಬಿ. ಪಾಟೀಲ್ ಮನೆಗೆ ಬೆಂಬಲಿಗರು ಮುತ್ತಿಗೆ ಹಾಕಿದ ವಿಚಾರವಾಗಿ ಮಾತನಾಡಿ, ಅಂತಹ ನೀಚ ಕೆಲಸಕ್ಕೆ ಇಳಿಯಲ್ಲ, ನಾನು ಅವರು ಚೆನ್ನಾಗಿದ್ದೇವೆ ಎಂದು ಬಾಗಲಕೋಟೆಯಲ್ಲಿ ಜಲಸಂಪನ್ಮೂಲ ಸಚಿವ ಕಾರಜೋಳ ಹೇಳಿದ್ದಾರೆ.

ಮೇಕೆದಾಟು ಯೋಜನೆ ವಿಚಾರವಾಗಿ ಎಂ.ಬಿ. ಪಾಟೀಲ್ ಹೇಳಿಕೆಗೆ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಹರಿಕಥೆ ಭಟ್ಟರ ಪುರಾಣ ಈ ರಾಜ್ಯದ ಜನರಿಗೆ ಬೇಕಾಗಿಲ್ಲ. ಯೋಜನೆ ನೀವು ಜಾರಿಗೊಳಿಸದಿರಲು ಕಾರಣ ಏನು ಹೇಳಿ? ಈ ಹಿಂದೆಯೂ ಪಾದಯಾತ್ರೆ ಮಾಡಿ ಮೋಸ ಮಾಡಿದ್ದೀರಿ. ಕಾಂಗ್ರೆಸ್​ ನಡಿಗೆ ಕೃಷ್ಣೆ ಕಡೆಗೆ ಎಂದು ಮೋಸ ಮಾಡಿದ್ದೀರಿ. ಇದರಿಂದ ಜನರು ಸಂತೃಪ್ತಿ ಆಗಲ್ಲ, ರೈತರಿಗೆ ದ್ರೋಹ ಆಗುತ್ತೆ. ರೈತರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ನೀವು ಮಾಡುತ್ತಿದ್ದೀರಿ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *