ಪಾದಯಾತ್ರೆ ಮೂಲಕ ಅಪ್ಪು ಸಮಾಧಿ ನೋಡುವ ಹಂಬಲ: ದಾವಣಗೆರೆ ತಲುಪಿದ ದಾಕ್ಷಾಯಣಿ ಪಾಟೀಲ್ | Puneeth rajkumar fan dharwad women dakshayani pateel reached to davanagere


ಪಾದಯಾತ್ರೆ ಮೂಲಕ ಅಪ್ಪು ಸಮಾಧಿ ನೋಡುವ ಹಂಬಲ: ದಾವಣಗೆರೆ ತಲುಪಿದ ದಾಕ್ಷಾಯಣಿ ಪಾಟೀಲ್

ದಾಕ್ಷಾಯಣಿ ಅವರಿಗೆ ಅದ್ದೂರಿ ಸ್ವಾಗತ

ದಾವಣಗೆರೆ:  ಅ.29ರಂದು ನಿಧನರಾದ ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನೆನಪು ಅಭಿಮಾನಿಗಳಲ್ಲಿ ಸದಾ ಹಸಿರು. ಪುನೀತ್ ಸಾವಿನ ನೋವಿನಿಂದ ಇಡೀ ಕರ್ನಾಟಕದ ಜನತೆ ಇನ್ನೂ ಹೊರಬಂದಿಲ್ಲ. ಅವರ ಹೆಸರಿನಲ್ಲಿ ಹಲವು ಸಮಾಜ ಸೇವಾ ಕಾರ್ಯಗಳು ಮುಂದುವರೆದಿವೆ. ಇದರ ನಡುವೆ ಅಪ್ಪು ಅಭಿಮಾನಿ ಕುಟುಂಬದ ಧಾರವಾಡದ ಮನಗುಂಡಿಯ ದಾಕ್ಷಾಯಣಿ ಪಾಟೀಲ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ನೀಡಲು ಪಾದಯಾತ್ರೆ ಆರಂಭಿಸಿದ್ದರು. ಇದೀಗ ಅವರು ದಾವಣಗೆರೆ ತಲುಪಿದ್ದಾರೆದಾಕ್ಷಾಯಣಿ ಹಾಗೂ ಅವರ ಕುಟುಂಬ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಅವರನ್ನು ಕಣ್ಣಾರೆ ನೋಡುವ ಬಯಕೆ ಹೊಂದಿದ್ದರು. ಆದರೆ ಅಪ್ಪು ಅಕಾಲಿಕ ಮರಣದಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಸಮಾಧಿ ಇರುವ ಜಾಗಕ್ಕೆ ಧಾರವಾಡದ ಮನಗುಂಡಿಯಿಂದ ಪಾದಯಾತ್ರೆ ಮೂಲಕ ತಲುಪಲು ನಿರ್ಧರಿಸಿ ಹೊರಟಿದ್ದಾರೆ. ಇಂದು (ಡಿ.5) ಅವರು ದಾವಣಗೆರೆ ತಲುಪಿದ್ದಾರೆ.

ದಾವಣಗೆರೆ ತಲುಪಿದ ದಾಕ್ಷಾಯಣಿ ಪಾಟೀಲ್​ ಅವರಿಗೆ ಪಾದಯಾತ್ರೆ ವೇಳೆ ಗಾಡಿಯಲ್ಲಿ ಪತಿ, ತಾಯಿ ಹಾಗೂ ಮೂರು ಮಕ್ಕಳು ಸಾಥ್ ನೀಡಿದ್ದಾರೆ. ಪಾದಯಾತ್ರೆ ವೇಳೆ ದಾಕ್ಷಾಯಣಿ ಅವರು ನೇತ್ರದಾನ, ರಕ್ತದಾನ ಹಾಗೂ ಪರೋಪಕಾರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಕಾರ್ಯಗಳಿಂದ ಪ್ರೇರಿತರಾಗಿರುವ ದಾಕ್ಷಾಯಣಿ ಹಾಗೂ ಕುಟುಂಬ ಪುನೀತ್ ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ, ಸಮಾಜದ ಒಳಿತಿಗೆ ಪರೋಪಕಾರದ ಬಗ್ಗೆ ಪಾದಯಾತ್ರೆ ವೇಳೆ ಅರಿವು ಮೂಡಿಸುತ್ತಿದ್ದಾರೆ.

ಅದ್ದೂರಿ ಸ್ವಾಗತ
ಮನಗುಂಡಿಯಿಂದ ಬೆಂಗಳೂರಿಗೆ 500 ಕಿಲೋಮೀಟರ್ ದಾಕ್ಷಾಯಣಿ ಪಾಟೀಲ್ ಪಾದಯಾತ್ರೆ ನಡೆಸುತ್ತಿದ್ದಾರೆ. ಇದೇ ವೇಳೆ ದಾವಣಗೆರೆ ಆಗಮಿಸಿದ ದಾಕ್ಷಾಯಿಣಿ ಅವರಿಗೆ ಡಾ. ರಾಜ್ ಹಾಗೂ ಶಿವರಾಜಕುಮಾರ್​ ಸಂಘಟನೆಗಳು ಅದ್ದೂರಿ ಸ್ವಾಗತ ಕೋರಿವೆ. ಈ ಮೂಲಕ ದಾಕ್ಷಾಯಿಣಿ ಪಾಟೀಲ್ ಅವರು ಅಪ್ಪು ಮೇಲಿರುವ ಅಭಿಮಾನಕ್ಕೆ ಮಾಡುತ್ತಿರುವ ಪಾದಯಾತ್ರೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ದಾವಣಗೆರೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿಗೆ ದಾಕ್ಷಾಯಣಿ ಪಾಟೀಲ್ ಪಾದಯಾತ್ರೆ ಮುಂದುವರೆಸಿದ್ದಾರೆ.

30 ವರ್ಷ ವಯಸ್ಸಿನ ದಾಕ್ಷಾಯಣಿ ಪಾಟೀಲ್ ಉತ್ತಮ ಓಟಗಾರ್ತಿ ಕೂಡ ಹೌದು. ಪತಿ ಉಮೇಶ್ ಅವರ ಸಹಕಾರ ಹಾಗೂ ಕುಟುಂಬದ ಬೆಂಬಲೊಂದಿಗೆ ದಿನಕ್ಕೆ 40 ಕಿಮೀ ಪ್ರಯಾಣಿಸುವ ಗುರಿಹೊತ್ತ ದಾಕ್ಷಾಯಿಣಿ ದಾವಣಗೆರೆ ಮೂಲಕ ಬಂಗಳೂರಿಗೆ ಧಾವಿಸುತ್ತಿದ್ದಾರೆ. ಹೀಗಾಗಿ ತಮ್ಮ ಅಭಿಮಾನವನ್ನು ಪಾದಯಾತ್ರೆ ಮೂಲಕ ತೋರಿಸಿ ಅಗಲಿದ ಅಪ್ಪುವಿಗೆ ಪ್ರೀತಿಯ ನಮನ ಸಲ್ಲಿಸಲು ತೆರಳುತ್ತಿದ್ದಾರೆ. ಜತೆಗೆ ಪುನೀತ್ ಅವರ ಮನೆಯವರನ್ನು ಭೇಟಿಯಾಗುವ ಅಭಿಲಾಷೆ ಹೊಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *