ಬೆಂಗಳೂರು: ಕಾಂಗ್ರೆಸ್-ಬಿಜೆಪಿ ಮಧ್ಯೆ ಮೇಲ್ನೋಟಕ್ಕೆ ಕಿತ್ತಾಟಗಳಿದ್ರೂ, ಅದರ ಆಳದಲ್ಲಿ ಸಾಕಷ್ಟು ಲಾಭ-ನಷ್ಟದ ಲೆಕ್ಕಾಚಾರವಿತ್ತು. ಆ ಕಾರಣದಿಂದಲೇ ನಾಲ್ಕು ದಿನದಿಂದ ಹಾಕಿ ಬಂದ ಹೆಜ್ಜೆಯನ್ನ ನಿರ್ಬಂಧಿಸುವ ಸಾಹಸಕ್ಕೆ ಸರ್ಕಾರ ಕೈಹಾಕಿರಲಿಲ್ಲ. ಈಗ ಕೋರ್ಟ್ ಪ್ರಶ್ನೆಯಿಂದ ಬಿಜೆಪಿಯ ಪ್ಲಾನ್ ಉಲ್ಟಾ ಹೊಡೆದಿದೆ.
ಪಾದಯಾತ್ರೆ ಬಗ್ಗೆ ಉಲ್ಟಾ ಹೊಡೀತಾ ಬಿಜೆಪಿ ಲೆಕ್ಕಾಚಾರ?
ಕಳೆದ ನಾಲ್ಕು ದಿನಗಳಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನ ಯಶಸ್ವಿಯಾಗಿ ನಡೆಸಿತ್ತು. ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆಯನ್ನ ಜಾರಿಗೊಳಿಸಿಯೇ ಸಿದ್ಧ ಅಂತಾ ನಡಿಗೆಯನ್ನ ಆರಂಭಿಸಿತ್ತು. ಆದ್ರೆ, ಕೊರೊನಾ ಕಾಟ.. ಒಮಿಕ್ರಾನ್ ಓಟದ ಮಧ್ಯೆ ಕೈ ಯಾತ್ರೆಗೆ ಭಾರೀ ಅಡ್ಡಿ ಎದುರಾಗಿದೆ. ಕಾಂಗ್ರೆಸ್ ಪಾದಯಾತ್ರೆ ಹೈಕೋರ್ಟ್ನ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ ಸರ್ಕಾರಕ್ಕೆ ಛೀಮಾರಿ ಹಾಕಿದ್ರೆ, ಕೈ ನಾಯಕರಿಗೆ ಮಂಗಳಾರತಿ ಮಾಡಿದೆ.
ಈ ಮಧ್ಯೆ ಪಾದಯಾತ್ರೆಗೆ ತಡೆಯೊಡ್ಡದೆ ಬಿಜೆಪಿ ಲಾಭದ ಲೆಕ್ಕಾಚಾರದಲ್ಲಿತ್ತು. ಆದ್ರೆ, ಹೈಕೋರ್ಟ್ನ ಮಧ್ಯ ಪ್ರವೇಶದಿಂದ ಬಿಜೆಪಿ ಪ್ಲಾನ್ ಚೇಂಜ್ ಆಗಿದೆ. ಲಾಭ-ನಷ್ಟದ ಲೆಕ್ಕಾಚಾರ ಬದಿಗಿಟ್ಟು ಕ್ರಮ ಅನಿವಾರ್ಯ ಎಂಬ ಸ್ಥಿತಿ ಎದುರಾಗಿದೆ.
ಲೆಕ್ಕಾಚಾರ ಬದಿಗಿಟ್ಟು ಕ್ರಮ!
ಮೇಕೆದಾಟು ಪಾದಯಾತ್ರೆಗೆ ಅಡ್ಡಿಪಡಿಸಿದರೆ ಕಾಂಗ್ರೆಸ್ಗೆ ರಾಜಕೀಯ ಲಾಭವಾಗಲಿದೆ. ಅನಗತ್ಯವಾಗಿ ಕಾಂಗ್ರೆಸ್ಗೆ ಮೈಲೇಜ್ ಕೊಟ್ಟಂತಾಗಲಿದೆ. ಈ ಕಾರಣದಿಂದ ಪಾದಯಾತ್ರೆಗೆ ಬಿಜೆಪಿ ಸರ್ಕಾರ ತಡೆ ನೀಡಿರಲಿಲ್ಲ. ಆದ್ರೀಗ ಹೈಕೋರ್ಟ್ ಪ್ರಶ್ನೆಗಳಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ, ಎಲ್ಲಾ ರೀತಿಯ ಲೆಕ್ಕಾಚಾರಗಳನ್ನ ಬದಿಗಿಟ್ಟು ಯಾತ್ರೆ ಮಾಡ್ತಿರೋ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ವಕೀಲ ಶ್ರೀಧರ್ ಪ್ರಭು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಮಾಡಿದ ಹೈಕೋರ್ಟ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಪಾದಯಾತ್ರೆ ತಡೆಯಲು ಸರ್ಕಾರ ಯಾವೆಲ್ಲಾ ಕ್ರಮ ಕೈಗೊಂಡಿದೆ ಅಂತಾ ಪ್ರಶ್ನಿಸಿತ್ತು. ಅಲ್ಲದೇ ಸರ್ಕಾರಕ್ಕೆ ಛೀಮಾರಿಯನ್ನೂ ಹಾಕಿದೆ. ಅಲ್ಲದೇ ಪಾದಯಾತ್ರೆಗೆ ಅನುಮತಿ ನೀಡಿರೋ ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದೆ.
ಸರ್ಕಾರಕ್ಕೆ ಕೋರ್ಟ್ ಛೀಮಾರಿ
- ಪ್ರಶ್ನೆ 1 : ಮೇಕೆದಾಟು ಪಾದಯಾತ್ರೆಗೆ ಅನುಮತಿ ಕೊಟ್ಟಿದ್ದೀರಾ?
- ಪ್ರಶ್ನೆ 2 : ಅನುಮತಿ ಇಲ್ಲದಿದ್ರೂ ಪಾದಯಾತ್ರೆ ಹೇಗೆ ಮಾಡ್ತಿದ್ದಾರೆ?
- ಪ್ರಶ್ನೆ 3 : ಅನುಮತಿ ನೀಡಿಲ್ಲವಾದರೆ, ತಡೆಯಲು ಯಾಕೆ ಆಗಿಲ್ಲ?
- ಪ್ರಶ್ನೆ 4 : ಯಾತ್ರೆ ತಡೆಯಲು ಸರ್ಕಾರ ಅಸಮರ್ಥವಾಗಿದೆಯೇ?
- ಪ್ರಶ್ನೆ 5 : ಪಾದಯಾತ್ರೆ ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ?
- ಪ್ರಶ್ನೆ 6 : ಕೋರ್ಟ್ ಆದೇಶ ನೀಡುವವರೆಗೆ ಕ್ರಮ ಕೈಗೊಳ್ಳಲ್ವಾ?
ಹೈಕೋರ್ಟ್ ಛೀಮಾರಿ ಹಾಕಿದ್ದೇ ತಡ, ರಾಜ್ಯ ಸರ್ಕಾರ ಮೇಕೆದಾಟು ಪಾದಯಾತ್ರೆಯನ್ನ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಅದೇನೆ ಇರ್ಲಿ ಮೇಕೆದಾಟು ಪಾದಯಾತ್ರೆಯಲ್ಲಿ ಬಿಜೆಪಿ ಹಾಕಿದ್ದ ಲೆಕ್ಕಾಚಾರಗಳು ಸದ್ಯ ಉಲ್ಟಾ ಹೊಡೆದಿವೆ. ಜೊತೆಗೆ ರಾಜಕೀಯ ಲಾಭದ ನಿರೀಕ್ಷೆಯಲ್ಲಿದ್ದ ಕೇಸರಿ ಪಾಳಯಕ್ಕೆ ತಿರುಗೇಟು ಕೊಟ್ಟಿದೆ.
ವಿಶೇಷ ವರದಿ: ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯೂರೋ