ಪಾಪ ಕಳೆಯಬೇಕಿದ್ದ ಯಮುನೆ ಕಲ್ಮಶ.. ಕೇಜ್ರಿವಾಲ್-ಕೇಂದ್ರ ಸರ್ಕಾರದ ರಾಜಕೀಯಕ್ಕೆ ವಿಷ ತುಂಬಿಕೊಂಡ ಪಾಪನಾಶಿನಿ..!


ಗಂಗೇಚ ಯಮುನೇಚೈವ ಗೋಧಾವರಿ ಸರಸ್ವತಿ.. ನರ್ಮದೇ ಸಿಂಧು ಕಾವೇರಿ ಜಲೇ ಅಸ್ಮಿನ್‌ ಸನ್ನಿಧಿಂ ಕುರು.. ಇದು ಭಾರತದ ಪವಿತ್ರ ನದಿಗಳ ಬಗ್ಗೆ ವೇದಗಳಲ್ಲಿರೋ ಶ್ಲೋಕ.. ನಾವು ಸ್ನಾನ ಮಾಡೋ ನೀರಿನಲ್ಲಿ ಈ ಸಪ್ತ ನದಿಗಳ ಪಾವಿತ್ರ್ಯತೆ ಇರಲಿ ಅನ್ನೋದು ಇದ್ರ ಅರ್ಥ.. ಆದ್ರೆ ಪಾಪ ಕಳೆಯಬೇಕಿದ್ದ ಯಮುನೆ ಕಲ್ಮಶಗೊಂಡಿದ್ದಾಳೆ. ರೋಗ ರುಜಿನ ಕಳೆಯಬೇಕಿದ್ದ ಯಮುನೆ ರೋಗ ತುಂಬಿಕೊಂಡಿದ್ದಾಳೆ. ಪಾಪನಾಶಿನಿ ಆಗಬೇಕಿದ್ದ ಯಮುನೆ ರಾಸಾಯನಿಕಗಳಿಂದ ತುಂಬಿ ಜೀವ ತೆಗೆಯೋಕೆ ನಿಂತಿದ್ದಾಳೆ.

ಹೌದು.. ದೆಹಲಿಯ ಯಮುನೆಯ ತಟದಲ್ಲಿ ನಿನ್ನೆ ಕಂಡುಬಂದಿರೋ ದೃಶ್ಯಗಳು ಎದೆ ನಡುಗಿಸ್ತಿದೆ. ರೋಗಗಳ ಸರಮಾಲೆಯೇ ಸೃಷ್ಟಿಯಾಗೋ ಆತಂಕ ಹುಟ್ಕೊಂಡಿದೆ.. ಛಟ್‌ ಮಹಾಪರ್ವ ಆರಂಭಗೊಂಡಿದೆ. ಇಂದಿನ ನಾಲ್ಕು ದಿನಗಳ ಕಾಲ ನಡೆಯೋ ಪರ್ವ ಇದು.. ಈ ಸಂದರ್ಭದಲ್ಲಿ ನದಿಯಲ್ಲಿ ಮುಳುಗಿ ಪವಿತ್ರ ಸ್ನಾನ ಮಾಡೋದು ಪದ್ಧತಿ ಇದೆ. ಹೀಗಾಗಿಯೇ ಇವತ್ತು ಬೆಳ್ಳಂಬೆಳಗ್ಗೆ ನೂರಾರು ಮಹಿಳೆಯರು ಯಮನೆಯ ದಡದಲ್ಲಿ ಸೇರಿದ್ರು. ನೊರೆಯೇ ತುಂಬಿದ್ರೂ, ನೀರು ಕಲುಷಿತಗೊಂಡಿದ್ರೂ ಕ್ಯಾರೇ ಅನ್ನದೆ ಇದೇ ಶುದ್ಧ ನೀರು. ಇದೇ ಪವಿತ್ರ ಜಲ ಅಂತ ಮುಳುಗೆದ್ದು ನಮಸ್ಕರಿಸಿದ್ರು.. ಯುಮನೆಗೆ ಪ್ರಾರ್ಥನೆ ಸಲ್ಲಿಸಿದ್ರು.

ಇಡೀ ದೇಶದ ಜನರ ನಂಬಿಕೆಯೇ ಬುಡಮೇಲಾಗೋ ದೃಶ್ಯವಿದು.. ಜನರ ನಂಬಿಕೆಗೇ ವಿಷ ತುಂಬಿದ ದೃಶ್ಯಗಳಿವು. ಮುಂದೇನಾಗುತ್ತೋ.. ಯಾವ ಕಾಯಿಲೆ ಬರುತ್ತೋ.. ದೇಶದ ಪವಿತ್ರ ನದಿಯ ಸ್ಥಿತಿ ಹೀಗಾಯ್ತಲ್ಲಾ.. ಅಂತ ಇಡೀ ದೇಶದ ಜನ ಚಿಂತೆಗೀಡಾಗಿದ್ರೆ ಅಷ್ಟು ಕೊಳಚೆಯಿದ್ರೂ ನಂಬಿಕೆ, ಆಚರಣೆಯೇ ಮುಖ್ಯ ಅಂತ ಆ ನದಿಯಲ್ಲಿ ಮುಳುಗೆದ್ದ ಜನ ಏನ್‌ ಹೇಳ್ತಾರೆ.

ನೀರು ಎಷ್ಟೇ ಮಲಿನವಾಗಿದ್ರೂ ನಾವು ಅದ್ರ ಬಗ್ಗೆ ಯೋಚನೆ ಮಾಡೋದಿಲ್ಲ. ನಾವು ಎಲ್ಲೀವರೆಗೆ ಗಂಗೆಯಲ್ಲಿ ಸ್ನಾನ ಮಾಡುವುದಿಲ್ಲವೋ ಅಲ್ಲೀವರೆಗೆ ನಮ್ಮ ಆಚರಣೆ ಪೂರ್ಣವಾಗುವುದಿಲ್ಲ. ಎಷ್ಟೇ ಮಲಿನವಾಗಿದ್ರೂ ಗಂಗೆ ಗಂಗೆಯೇ ಅಲ್ವಾ? ಹೀಗಾಗಿ ಸ್ನಾನ ಮಾಡೋದು ಅನಿವಾರ್ಯ ನಮಗೆ.
ನೀರಲ್ಲಿ ಮುಳುಗಿ ಎದ್ದವರು

ಈ ಪೂಜೆ ನಮ್ಮ ಜನ್ಮಕ್ಕಾಗಿ ಇರೋದ್ರಿಂದ ನಾವು ನೀರಲ್ಲಿ ಸ್ನಾನ ಮಾಡಲೇಬೇಕಲ್ವಾ. ಅದಕ್ಕೂ ಬಿಡಲ್ಲ ಅಂತ ಹೇಳ್ತಿದ್ದಾರೆ ಪೊಲೀಸ್ರು. ಅದಕ್ಕೂ ಬಿಡ್ತಿಲ್ಲ. ನಮ್ಮನ್ನ ತಡೀತಿದ್ದಾರೆ. ಯಾಕ್‌ ತಡೀತಿದ್ದಾರೆ? ನೀರು ಮಲಿನ ಆಗಿದೆ ಅಂದ್ರೆ ಅದ್ರ ಬಗ್ಗೆ ಸರ್ಕಾರ ಯೋಚಿಸಬೇಕಾಗಿತ್ತು. ನೀರು ಮಲಿನವಾಗಿದೆ, ಜನ ಛತ್ ಪೂಜೆ ಮಾಡ್ತಾರೆ ಅಂದ್ರೆ ನೀರನ್ನ ಶುದ್ಧಗೊಳಿಸೋ ಕೆಲಸ ಸರ್ಕಾರ ಮಾಡ್ಬೇಕಿತ್ತು. ಕ್ಲೀನಿಂಗ್ ಅವ್ರು ಮಾಡ್ತಾರೆ ತಾನೇ. ನಾವು ಮಾಡೋಕೆ ಆಗಲ್ವಲ್ಲ. ಭಯಾನೋ, ಇನ್ನೊಂದೋ ದೇವ್ರು ಹೆಸರು ಹೇಳಿಕೊಂಡು ನಾವು ಎಲ್ಲಿ ಬೇಕಾದ್ರೂ ಸ್ನಾನ ಮಾಡ್ತೀವಿ. ಛಟ್‌ ಮಯ್ಯಾ ಪೂಜಾ, ಆಕೆ ಹೆಸರಲ್ಲಿ ಸ್ನಾನ ಮಾಡ್ತೀವಿ. ನಂಗೇನ್‌ ಆದ್ರೂ ಅದು ಆಕೆಯ ತೀರ್ಮಾನ ಎನ್ನುತ್ತಿದ್ದಾರೆ ಭಕ್ತರು.

ಯುಮನೆ ವಿಷಪೂರಿತಳಾಗಿದ್ರೂ ಆಚರಣೆಯೇ ಮುಖ್ಯ ಅಂತ ಹೇಳ್ತಾ ಸಾವಿನ ಜೊತೆ ಸರಸವಾಡ್ತಿರೋ ಇಂಥಾ ಜನ್ರಿಗೆ ಏನ್‌ ಹೇಳೋಣ ಹೇಳಿ..? ಆದ್ರೂ ಇಲ್ಲಿ ನಾವು ತಿಳಿದುಕೊಳ್ಳಲೇಬೇಕಾದ ಕೆಲವೊಂದು ವಿಚಾರಗಳಿವೆ.

ಪರಿಶುದ್ಧ ಯಮುನೆ ಯಾಕೆ ವಿಷಪೂರಿತಳಾದಳು?
ಯಮುನೆಯ ಈ ಸ್ಥಿತಿಗೆ ಹೊಣೆಗಾರರು ಯಾರು?

ಕೇಳಲೇ ಬೇಕು ಈ ಪ್ರಶ್ನೆಗಳನ್ನ. ಯುಮನಾ ನದಿಯಲ್ಲಿ ಅಮೋನಿಯಂ ಫಾಸ್ಪೇಟ್‌ ಅಂಶ ಜಾಸ್ತಿಯಾಗಿದೆ. ಯಮುನೆಯನ್ನ ಸೇರ್ತಿರೋ ಡ್ರೈನೇಜ್‌ ನೀರಿನಲ್ಲಿ ಫಾಸ್ಪೇಟ್‌ ಅಂಶ ಹೆಚ್ಚಾಗಿರೋದು ಯಮುನೆಯನ್ನ ವಿಷಪೂರಿತ ಮಾಡ್ಬಿಟ್ಟಿದೆ. ದೆಹಲಿಯ ಶೇಕಡಾ 90 ರಷ್ಟು ವೇಸ್ಟ್‌ ವಾಟರ್‌ ಯಮುನಾ ನದಿಯನ್ನ ಸೇರ್ತಿದೆ. 58 ಶೇಕಡಾ ಕಸಕಡ್ಡಿಗಳು ಯಮುನೆಯ ಒಡಲು ಸೇರ್ತಿವೆ. ಶುದ್ಧೀಕರಣಗೊಳ್ಳದ ಕೊಳಚೆ ನೀರು ಯಮುನೆಯ ಒಡಲು ಸೇರ್ತಿರೋದು ಇವತ್ತಿನ ಈ ಸ್ಥಿತಿಗೆ ಪ್ರಮುಖ ಕಾರಣ. ಇದೇ ಕಾರಣಕ್ಕೆ ರಾಶಿ ರಾಶಿ ನೊರೆ ಎದ್ದಿದೆ. ಇದನ್ನ ಕ್ಲೀನ್‌ ಮಾಡ್ಬೇಕಾಗಿದ್ದು ಯಾರು? ಇದನ್ನ ಶುದ್ಧಗೊಳಿಸೋ ಹೊಣೆ ಯಾರದ್ದು? ಅದೂ ರಾಷ್ಟ್ರ ರಾಜಧಾನಿಯಲ್ಲಿ ಇಂಥಾ ಸ್ಥಿತಿ ಅಂದ್ರೆ ನಾಚಿಕೆಗೇಡು ಅಲ್ವಾ? ಇಡೀ ನದಿ ದುರ್ವಾಸನೆ ಬೀರ್ತಿದೆ. ಪಕ್ಕದಲ್ಲಿ ನಡ್ಕೊಂಡು ಹೋಗೋದೇ ಅಸಾಧ್ಯ. ಅಂಥಾದ್ರಲ್ಲಿ ನೂರಾರು ಮಂದಿ ಭಕ್ತರು ಅದೇ ನೀರಿನಲ್ಲಿ ಮುಳುಗೆದ್ದು ಛತ್‌ ಪೂಜಾ ಆಚರಿಸಿದ್ದಾರೆ ಅಂದ್ರೆ ಇದಕ್ಕಿಂತ ದುರಂತ ಬೇಕಾ ಹೇಳಿ.

ವಿಷಪೂರಿತವಾಗಿದೆ ದೆಹಲಿಯ ಗಾಳಿ.. ಕುಡಿಯೋ ನೀರು ಕೂಡ ವಿಷ..!
ಹೇಳಿಕೊಳ್ಳೋಕಷ್ಟೇ ದೆಹಲಿ ರಾಷ್ಟ್ರದ ರಾಜಧಾನಿ.. ಆದ್ರೆ ಇಲ್ಲಿನ ಸ್ಥಿತಿ.. ಅದು ಬರೀ ಸ್ಥಿತಿ ಅಲ್ಲ.. ದುಸ್ಥಿತಿ.. ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಗಾಳಿ ವಿಷವಾಗಿಬಿಟ್ಟಿದೆ.. ಪಟಾಕಿಯ ಹೊಗೆ ರಾಷ್ಟ್ರ ರಾಜಧಾನಿಯನ್ನ ಐಸಿಯುಗೆ ತಳ್ಳಿದೆ. ಏರ್‌ ಕ್ವಾಲಿಟಿ ಇಂಡೆಕ್ಸ್‌ 450ಕ್ಕಿಂತ ಹೆಚ್ಚಾಗಿಬಿಟ್ಟಿದೆ. ಇಡೀ ನಗರ ಹೊಗೆ ಮಯ ಆಗಿದ್ದು ಜನ ಮನೆಯಿಂದಾಚೆ ಬರೋಕೂ ಹೆದರ್ತಿದ್ದಾರೆ. ಶುದ್ಧ ಗಾಳಿಗಾಗಿ ತಡಕಾಡ್ತಿದ್ದಾರೆ. ಉಸಿರಾಡೋಕಾಗದೆ ಒದ್ದಾಡ್ತಿದ್ದಾರೆ. ಮತ್ತೊಂದ್ಕಡೆ ಈ ನೀರಿನ ದುಸ್ಥಿತಿ.. ದೆಹಲಿಯ ಜನ ಕುಡಿಯೋದು ಇದೇ ಯಮುನೆಯ ನೀರನ್ನ.. ಆಕೆಯ ಸ್ಥಿತಿ ನೋಡಿದ್ರೆ ಹೀಗೆ.. ಹೀಗೆ ಆದ್ರೆ ರಾಷ್ಟ್ರ ರಾಜಧಾನಿ ರೋಗಗಳ ತವರಾಗಿ ಬಿಡುತ್ತೋ ಏನೋ.. ಹಾಗಾದ್ರೆ ಇದನ್ನ ಸರಿಪಡಿಸೋ ಹೊಣೆ ಯಾರದ್ದು..?

ಕೇಂದ್ರ ಸರ್ಕಾರ ಏನೂ ಮಾಡ್ತಿಲ್ಲ ಅಂತಿದೆ ಆಪ್‌ ಸರ್ಕಾರ
ಕೇಜ್ರಿವಾಲ್‌ ಸರ್ಕಾರ ಜನರನ್ನ ಕೊಲ್ತಿದೆ ಅಂತಿದೆ ಬಿಜೆಪಿ

ಯಮುನೆಯ ಈ ಸ್ಥಿತಿ ಕಂಡ ಮೇಲೂ ಯಾರೂ ಆಕೆಯನ್ನ ಸ್ವಚ್ಛಗೊಳಿಸೋ ಕೆಲಸ ಮಾಡ್ತಿಲ್ಲ. ಬದಲಾಗಿ ಇದೇ ವಿಚಾರಕ್ಕೆ ರಾಜಕೀಯ ಕೆಸರೆರೆಚಾಟ ಜೋರಾಗಿಬಿಟ್ಟಿದೆ. ಯಮುನೆಯಲ್ಲಿ ಈ ರೀತಿಯ ಚಿತ್ರಣ ಇದೇ ಮೊದಲೇನಲ್ಲ. ಕಳೆದ ಬಾರಿಯೂ ಹೀಗೆ ಆಗಿತ್ತು. ಈಗ ದೆಹಲಿಯಲ್ಲಿ ಸರ್ಕಾರ ನಡೆಸ್ತಿರೋ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ ಕೇಂದ್ರದತ್ತ ಬೊಟ್ಟು ಮಾಡ್ತಿದೆ. ಕೇಂದ್ರ ಸರ್ಕಾರ ಯಮುನೆಯನ್ನ ಕ್ಲೀನ್‌ ಮಾಡೋಕೆ ಸಹಕರಿಸ್ತಿಲ್ಲ ಅಂತ ಹೇಳ್ತಿದೆ. ಆದ್ರೆ ಬಿಜೆಪಿ, ಇದೇ ವಿಚಾರವನ್ನ ಇಟ್ಕೊಂಡು ಆಮ್‌ ಆದ್ಮಿ ಪಕ್ಷದ ವಿರುದ್ಧ ಮುಗಿಬಿದ್ದಿದೆ. ದೆಹಲಿಯನ್ನ ವರ್ಲ್ಡ್‌ ಕ್ಲಾಸ್‌ ಸಿಟಿ ಮಾಡ್ತೀವಿ ಅಂತ ಮಾತು ಕೊಟ್ಟಿದ್ರಲ್ಲಾ.. ಇದೇನಾ ನಿಮ್ಮ ವಾಗ್ದಾನ ಅಂತ ಪ್ರಶ್ನಿಸ್ತಿದೆ. ಯಮನೆಯಲ್ಲಿ ರಾಸಾಯನಿಕ ಭರಿತ ನೀರಿನಲ್ಲಿ ರಾಜಕೀಯ ಪಕ್ಷಗಳು ಮುಳುಗೇಳ್ತಿವೆ.

ಈ ಕೆಸರರೆಚಾಟ ಕೊನೆಯಾಗ್ಬೇಕಿದೆ. ಯಮುನೆಯ ನೊರೆಯಲ್ಲಿ ಆಡ್ತಿರೋ ನಿರ್ಲಕ್ಷ್ಯದಾಟ ಕೊನೆಯಾಗ್ಬೇಕಿದೆ. ಯಮುನೆಯ ಶುದ್ಧತೆಯನ್ನ ಮರಳಿ ತರಬೇಕಿದೆ. ಯಮುನೆಯಲ್ಲಿ ಸ್ವಚ್ಛತೆಯನ್ನ ಮರು ಸ್ಥಾಪಿಸಬೇಕಿದೆ. ನಂಬಿಕೆಯೇ ಭಗವಂತ ಅಂತ ನಂಬಿರೋ ಜನರನ್ನ ಜೀವಕ್ಕೆ ಸಂಚಕಾರ ತಂದುಕೊಳ್ಳೋದ್ರಿಂದ ಕಾಪಾಡಬೇಕಿದೆ. ಪಾಪನಾಶಿನಿ ಯಮುನೆ ಅನ್ನೋ ನಂಬಿಕೆಯನ್ನ ಮತ್ತೆ ಗಟ್ಟಿಗೊಳಿಸಬೇಕಿದೆ. ಆದ್ರೂ ಯಮುನೆಯನ್ನ ಇಂಥಾ ಸ್ಥಿತಿಗೆ, ಇಂಥಾ ದುಸ್ಥಿತಿಗೆ ತಂದಿದ್ದಕ್ಕೆ ನಾವೆಲ್ಲರೂ ಆಕೆಯ ಕ್ಷಮೆಯನ್ನ ಕೇಳಲೇಬೇಕಿದೆ. ಕ್ಷಮಿಸಿಬಿಡು ಯಮುನೆ.

News First Live Kannada


Leave a Reply

Your email address will not be published. Required fields are marked *