ಬೆಂಗಳೂರು: ಕೊರೊನಾ ತೀವ್ರತೆ ಹಾಗೂ ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ಜಾರಿ ಮಾಡಿರುವ ಕಠಿಣ ಕ್ಲೋಸ್​ಡೌನ್​ ನಿಯಮಗಳ ಕಾರಣಗಳಿಂದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಬಡವರ ನೆರವಿಗೆ ಆಗಮಿಸಲು ಬಂದ ಕೆಲವರು ಪೇಚಿಗೆ ಸಿಲುಕಿದ ಘಟನೆ ನಗರದ ವಿಲ್ಸನ್‌ ಗಾರ್ಡನ್​ನಲ್ಲಿ ನಡೆದಿದೆ.

ಸಂಕಷ್ಟಕ್ಕೆ ಸಿಲುಕಿದ ಜನರ ನೆರವಿಗೆ ಬರಲು ವಿಲ್ಸನ್‌ ಗಾರ್ಡನ್‌ನಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ತರಕಾರಿ ಖರೀದಿ ಮಾಡಿದ್ದ ಕೆಲ ಸ್ವಯಂ ಸೇವಕರು ಅದನ್ನು ಉಚಿತವಾಗಿ ನೀಡಲು ಮುಂದಾಗಿದ್ದರು. ಆದರೆ ಮೊದಲು ಕಡಿಮೆ ಸಂಖ್ಯೆಯಲ್ಲಿ ಬಂದ ಜನರು ಏಕಾಏಕಿ ಗುಂಪು ಗುಂಪಾಗಿ ಆಗಮಿಸಿದರು. ಈ ಹಂತದಲ್ಲಿ ಸ್ಥಳದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ನಿರ್ಲಕ್ಷ್ಯ ಮಾಡಿ, ಮಾಸ್ಕ್​ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡದೆ ಮುಗಿಬಿದಿದ್ದರು. ಇದನ್ನು ಕಂಡ ಆಯೋಜಕರು ಕೂಡ ಜನರನ್ನು ನಿಯಂತ್ರಣ ಮಾಡಲಾಗದೆ ಸೋತು ನಿಂತರು.

ಘಟನೆ ಕುರಿತಂತೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನು ನಿಯಂತ್ರಣ ಮಾಡಲು ಮುಂದಾದರು. ಆದರೆ ಜನರು ಪೊಲೀಸರ ಮಾತಿಗೂ ಜಗ್ಗದೆ ತರಕಾರಿ ಪಡೆಯುವಲ್ಲಿ ಬ್ಯುಸಿಯಾಗಿದ್ದರು. ಕೂಡಲೇ ತರಕಾರಿ ಹಾಗೂ ಅನುಮತಿ ಇಲ್ಲದೇ ತರಕಾರಿ ಹಂಚಿಕೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಿದರು.

The post ಪಾಪ ಜನರಿಗೆ ತೊಂದರೆ ಆಗುತ್ತೆ ಅಂತಾ ಫ್ರೀ ತರಕಾರಿ ಕೊಡಲು ಬಂದ್ರು; ಜನ ಮುಗಿಬಿದ್ದ ಕಾರಣ ಅರೆಸ್ಟ್ ಆದ್ರು appeared first on News First Kannada.

Source: newsfirstlive.com

Source link