ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಮಹಾಮಾರಿಯ ಅಟ್ಟಹಾಸದ ಮಧ್ಯೆ ಬೆಡ್​​ ಬ್ಲಾಕಿಂಗ್​ ಹಗರಣ ನಡೆಯುತ್ತಿರೋದನ್ನ ಸಂಸದ ತೇಜಸ್ವಿ ಸೂರ್ಯ ನಿನ್ನೆ ಬಯಲಿಗೆಳೆದಿದ್ದು, ತೀವ್ರ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್​ ಮಾಡಿರೋ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದಿದ್ದಾರೆ. ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆಯಲು ಕಾರಣ ಪಾಲು ಹಂಚಿಕೆಯಲ್ಲಾದ ಜಗಳ ಅಷ್ಟೇ ಅಲ್ವೇ  ಅಂತ ತೇಜಸ್ವಿಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಇನ್ನು ಪ್ರಕರಣದಲ್ಲಿ ಬಂಧಿತಳಾಗಿರೋ ಮಹಿಳೆ ಕಾಂಗ್ರೆಸ್​ ಕಾರ್ಯಕರ್ತೆ ಎಂದು ಇಂದು ಬೆಳಗ್ಗೆ ಬಿಜೆಪಿ ಆರೋಪ ಮಾಡಿದೆ. ಈ ಕುರಿತು ಸಿದ್ದರಾಮಯ್ಯ ತಮ್ಮ ಟ್ವೀಟ್​ನಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ‘ಬೆಡ್ ಬುಕ್ಕಿಂಗ್ ಹಗರಣ ಆರೋಪಿ ಕೈ ಕಾರ್ಯಕರ್ತೆ, ದಂಧೆ ಬಗ್ಗೆ ಸಿದ್ದರಾಮಯ್ಯ ಯಾಕೆ ತುಟಿ ಬಿಚ್ಚಿಲ್ಲ?’ -ಬಿಜೆಪಿ ಪ್ರಶ್ನೆ

ಸಿದ್ದರಾಮಯ್ಯ ಹೇಳಿದ್ದೇನು?

ತೇಜಸ್ವಿ ಸೂರ್ಯ, ರವಿಸುಬ್ರಹ್ಮಣ್ಯ,‌ ಸತೀಶ್ ರೆಡ್ಡಿ‌ ಅವರೇ.. ಕೋವಿಡ್ ನಿರ್ವಹಣೆಯ ಗುಪ್ತ ಕಾರ್ಯಾಚರಣೆ‌ ನಡೆಸಬೇಕಾಗಿರುವುದು BBMPಯ ಅಧಿಕಾರಿಗಳ ವಿರುದ್ಧವಲ್ಲ.. ವಿಧಾನಸೌಧದಲ್ಲಿ ಕೂತಿರುವ ಮುಖ್ಯಮಂತ್ರಿ,‌ ಸಚಿವರು ಮತ್ತು ಬಿಜೆಪಿ ಶಾಸಕರು‌, ಸಂಸದರ ವಿರುದ್ಧ. ಸಣ್ಣ ಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಲಗಳ ರಕ್ಷಣೆಗಾ?

ಕೋವಿಡ್ ಪ್ರಾರಂಭದ ದಿನಗಳಲ್ಲಿಯೇ ನಾನು ಪತ್ರಿಕಾಗೋಷ್ಠಿ ನಡೆಸಿ ಕೋವಿಡ್ ನಿರ್ವಹಣೆಯಲ್ಲಿನ ಭ್ರಷ್ಟಾಚಾರವನ್ನು ದಾಖಲೆ‌ಸಹಿತ ಬಹಿರಂಗಗೊಳಿಸಿದ್ದೆ. ಅದರ ಜೊತೆ ಈಗ ನೀವು ಹೇಳುತ್ತಿರುವುದನ್ನೂ ಸೇರಿಸಿ‌ ಹೈಕೋರ್ಟ್ ಹಾಲಿ‌ ನ್ಯಾಯಾಧೀಶರಿಂದ ತನಿಖೆ ನಡೆಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ತೇಜಸ್ವಿ ಸೂರ್ಯ.

ಬೆಡ್ ಬ್ಲಾಕಿಂಗ್ ನಿಮ್ಮ ಗಮನಕ್ಕೆ ಬಂದು ಹತ್ತು ದಿನ ಆಯ್ತು ಅಂತೀರಿ. ಇಷ್ಟು ದಿನ ಅಧಿಕಾರಿಗಳ ಮನವೊಲಿಸುತ್ತಿದ್ದೀರಾ? ಬೇರೇನಾದರೂ ವ್ಯವಹಾರದ ಮಾತುಕತೆ ನಡೆದಿತ್ತಾ? ನಿಮ್ಮ ನಿಗೂಢ ಮೌನವನ್ನು ಹೇಗೆ ಅರ್ಥೈಸುವುದು ತೇಜಸ್ವಿ ಸೂರ್ಯ? ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದ ವರೆಗೆ ಎಲ್ಲದರಲ್ಲಿಯೂ ಜಾತಿ-ಧರ್ಮವನ್ನು ಎಳೆದು ತರುವ ನಿಮ್ಮ ಕೊಳಕು ಬುದ್ಧಿಯನ್ನು ಕೊರೊನಾ ರೋಗಕ್ಕೂ ಯಾಕೆ ಎಳೆದು ತರ್ತೀರಿ ತೇಜಸ್ವಿ ಸೂರ್ಯ? ಕೊರೊನಾ ವೈರಸ್ ಗಿಂತಲೂ ಅಪಾಯಕಾರಿ ನಿಮ್ಮ ಮೆದುಳಲ್ಲಿರುವ ಕೋಮು ವೈರಸ್, ಅದಕ್ಕೆ ಚಿಕಿತ್ಸೆ ಪಡ್ಕೊಳ್ಳಿ.

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಶಾಮೀಲಾಗಿರುವವರು ಒಂದೇ ಕೋಮಿನವರು ಎನ್ನುವ ರೀತಿಯಲ್ಲಿ ಆರೋಪಿಗಳ ಪಟ್ಟಿ ಓದಿದ ತೇಜಸ್ವಿ ಅವರೇ, ಮುಖ್ಯ ಆರೋಪಿಗಳಾದ ಯಡಿಯೂರಪ್ಪ ಅವರಿಂದ ಹಿಡಿದು ಸಚಿವರು, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು? ಅದನ್ನೂ ಓದಿ ಹೇಳಿಬಿಡಿ.

‘ಯಥಾ ರಾಜಾ ತಥಾ‌ ಮಂತ್ರಿ’. ‘ಮೈ ಬೀ ಕಾವೂಂಗಾ, ತುಮ್ ಬಿ ಕಾವೋ’ ಎನ್ನುವುದೇ ನಿಮ್ಮ ನರೇಂದ್ರ ಮೋದಿ ಅವರ ನಿಜವಾದ ಘೋಷಣೆ.‌ ಅದನ್ನೇ ನೀವೆಲ್ಲ ಮಾಡ್ತಿದ್ದೀರಿ. ಪಾಲು ಹಂಚಿಕೆಯಲ್ಲಿ ಜಗಳವಾದಾಗ ಇಂತಹ ಕಿಡಿಗಳು ಸಿಡಿಯುತ್ತವೆ ಅಷ್ಟೆ ಅಲ್ಲವೇ ತೇಜಸ್ವಿ ಸೂರ್ಯ?ಮುಖ್ಯಮಂತ್ರಿಗಳಿಂದ ಕರ್ತವ್ಯಲೋಪ-ಭ್ರಷ್ಟತೆ ನಡೆದಿದ್ದರೆ ಅವರ ವಿರುದ್ಧ ನೇರ ಆರೋಪ‌ಪಟ್ಟಿ ಸಲ್ಲಿಸಿ ಅವರನ್ನು ಕಿತ್ತು ಹಾಕಿ. ಇದಕ್ಕಾಗಿ ಸರ್ಕಾರಿ ಅಧಿಕಾರಿ-ಸಿಬ್ಬಂದಿಗಳನ್ನು‌ ಯಾಕೆ ಬಳಸಿಕೊಳ್ತೀರಿ? ನಿಮ್ಮ ಆಂತರಿಕ ಕಿತ್ತಾಟಕ್ಕೆ ಕೊರೊನಾವನ್ನು ಯಾಕೆ ಬಳಸಿಕೊಳ್ತೀರಿ?

ಕೋವಿಡ್ ನಿರ್ವಹಣೆಯಲ್ಲಿ‌ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದು ಜಗಜ್ಜಾಹೀರಾಗಿದೆ. ನಿಮ್ಮ ಕೇಂದ್ರ ಸರ್ಕಾರ ಏನು ಕಡಿದು ಕಟ್ಟೆ ಹಾಕಿದೆ‌‌ ಅದನ್ನೂ ರಾಜ್ಯದ ಜನತೆಗೆ ತಿಳಿಸಿ. ಕೇಂದ್ರ ಮತ್ತು ರಾಜ್ಯದಲ್ಲಿ‌ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಯ ಭಾಗ್ಯದ ಬಾಗಿಲು ತೆರೆಯುತ್ತೆ ಎಂದು ಮತದಾರರ ದಿಕ್ಕುತಪ್ಪಿಸಿ ಅಧಿಕಾರಕ್ಕೆ ಬಂದಿದ್ದೀರಿ. ಈಗ ರಾಜ್ಯದಲ್ಲಿ ದೌರ್ಭಾಗ್ಯದ ಬಾಗಿಲು ತೆರೆದಿದೆ,‌ ಸ್ಮಶಾನದಲ್ಲಿ‌ ಹೆಣಗಳ ಸಾಲು ಬೆಳೆಯುತ್ತಿದೆ. ಇದೇನಾ ಮೋದಿ ಅವರ ಅಚ್ಚೇ ದಿನ್ ತೇಜಸ್ವಿ ಸೂರ್ಯ?

-ಸಿದ್ದರಾಮಯ್ಯ , ವಿಪಕ್ಷ ನಾಯಕ

ಇದಲ್ಲದೆ ತೇಜಸ್ವಿ ಸೂರ್ಯಗೆ ಸಿದ್ದರಾಮಯ್ಯ ಮತ್ತಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ.

  • ಪಿಎಂ ಕೇರ್ಸ್ ನಿಧಿಗೆ ರಾಜ್ಯದಿಂದ ಎಷ್ಟು‌ ಹಣ ಸಂದಾಯವಾಗಿದೆ? ಅದರಿಂದ ರಾಜ್ಯಕ್ಕೆ ಎಷ್ಟು ನೆರವು ಹರಿದು ಬಂದಿದೆ?
  • ರಾಜ್ಯಕ್ಕೆ ವೆಂಟಿಲೇಟರ್,‌ ಐಸಿಯು,‌ ಆಕ್ಸಿಜನ್ ಎಷ್ಟು ಸಿಕ್ಕಿದೆ? ಮಾಹಿತಿ ಹಕ್ಕಿಗೆ ನಿಷೇಧ ಹೇರಿ ಮೋದಿ ರಕ್ಷಿಸುತ್ತಿರುವುದು ಯಾರನ್ನು ತಮ್ಮನ್ನೋ? ಅಧಿಕಾರಿಗಳನ್ನೋ?
  • ರಾಜ್ಯದ ಕೊರೊನಾ ರೋಗಿಗಳಿಗೆ ಬೆಡ್ ಕೊಡಿ,‌ ವೆಂಟಿಲೇಟರ್ ಕೊಡಿ, ಆಕ್ಸಿಜನ್ ಕೊಡಿ ಎಂದು ಯಡಿಯೂರಪ್ಪ ಭಿಕ್ಷುಕರ ರೀತಿ ಪ್ರಧಾನಿಯನ್ನು ಬೇಡುತ್ತಿದ್ದಾರೆ.
  • ರಾಜ್ಯದ 25 ಬಿಜೆಪಿ ಸಂಸದರು ಯಾವ ಬಿಲ ಸೇರಿದ್ದಾರೆ? ಇಲ್ಲಿ ಹುಲಿಯಂತೆ ಕಿರುಚಾಡುವ ಸಂಸದರು ಪ್ರಧಾನಿ ಮೋದಿ ಎದುರು ಇಲಿಗಳಾಗಿ ಬಿಲ ಸೇರುವುದು ಯಾಕೆ?

 

The post ‘ಪಾಲು ಹಂಚಿಕೆ ಜಗಳದಿಂದ ಇಂಥ ಕಿಡಿ ಅಷ್ಟೆ ಅಲ್ವೇ ತೇಜಸ್ವಿ ಸೂರ್ಯ?’ -ಸಿದ್ದರಾಮಯ್ಯ ವಾಗ್ದಾಳಿ appeared first on News First Kannada.

Source: newsfirstlive.com

Source link