ಪಾಳು ಕೊಂಪೆಯಂತಾದ ನೆಲಮಂಗಲ ನಗರದ ಬಹು ನೀರಿಕ್ಷಿತ ಹೈಟೆಕ್ ಬಸ್ ಸ್ಟ್ಯಾಂಡ್ – Bangalore rural nelamangala hi-tech bus stand Work halted bangalore news in kannada


ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನೆಲಮಂಗಲ ನಗರದ ಬಹು ನೀರಿಕ್ಷಿತ ಹೈಟೆಕ್ ಬಸ್ ಸ್ಟ್ಯಾಂಡ್ ಎರಡು ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡಿದ್ದರೂ ಆರಂಭಿಕ ಹಂತದಲ್ಲೆ ನೆನೆಗುದಿಗೆ ಬಿದ್ದು ಪಾಳು ಕೊಂಪೆಯಂತಾಗಿದೆ.

ಪಾಳು ಕೊಂಪೆಯಂತಾದ ನೆಲಮಂಗಲ ನಗರದ ಬಹು ನೀರಿಕ್ಷಿತ ಹೈಟೆಕ್ ಬಸ್ ಸ್ಟ್ಯಾಂಡ್

ನೆನೆಗುದಿಗೆ ಬಿದ್ದ ನೆಲಮಂಗಲ ನಗರದ ಬಹು ನೀರಿಕ್ಷಿತ ಹೈಟೆಕ್ ಬಸ್ ಸ್ಟ್ಯಾಂಡ್

ನೆಲಮಂಗಲ: ಕಾಂಗ್ರೆಸ್ ಸರ್ಕಾರ ಇದ್ದಾಗ 47 ಕೋಟಿ ರೂಪಾಯಿ ವೆಚ್ಚದಲ್ಲಿ ನೆಲಮಂಗಲ ಹೈಟೆಕ್ ಬಸ್ ನಿಲ್ದಾಣಕ್ಕಾಗಿ ಹಣ ಮಂಜೂರಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ಆರಂಭಗೊಂಡಿದ್ದ ನಿಲ್ದಾಣ ನಿರ್ಮಾಣ ಕಾಮಗಾರಿಯು ಈಗಾಗಲೆ ಮುಗಿಯುವ ಹಂತಕ್ಕೆ ತಲುಪಬೇಕಿತ್ತು. ಆದರೆ ನಗರಸಭೆ ಹಾಗೂ ಕೆಎಸ್​ಆರ್​ಟಿಸಿ ಸಮನ್ವಯತೆ ಕೊರತೆಯಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಪರಿಣಾಮ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೆ ಬಸ್​ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರು ಆಕ್ರೋಶ ಹೊರ ಹಾಕಲು ಆರಂಭಿಸಿದ್ದಾರೆ.

ಈ ಬಸ್ ನಿಲ್ದಾಣ ದೂಳು, ಮಣ್ಣಿನಿಂದ ಆವೃತ್ತವಾಗಿತ್ತು. ಸರ್ಕಾರ ಇದರ ಬಗ್ಗೆ ಕಣ್ಣು ಬಿಟ್ಟು ಕೆಲಸ ಮಾಡುತ್ತಿದೆ ಅಂತಾ ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಸದ್ಯ ಕೆ‌ಎಸ್‌ಆರ್‌ಟಿ‌ಸಿ ಹಾಗೂ ನೆಲಮಂಗಲ ನಗರಸಭೆ ಅಧಿಕಾರಿಗಳ ದಾಖಲಾತಿ ಕಿತ್ತಾಟದಿಂದ ಕೆಲಸ ಹಳ್ಳ ಹಿಡಿದಿದೆ. ಇತ್ತ ಬಸ್ ನಿಲ್ದಾಣ ನಿರ್ಮಾಣ ಮಾಡುತ್ತಿರುವ ಸ್ಥಳ ಶೇ 60ರಷ್ಟು ಸಾರಿಗೆ ಇಲಾಖೆಗೆ ಶೇ 40 ರಷ್ಟು ಜಾಗ ನಗರಸಭೆಗೆ ಸೇರುತ್ತದೆ. ಈ ವಿಚಾರದಲ್ಲಿ ಅಧಿಕಾರಿಗಳಿಗೆ ಕ್ಲಾರಿಟಿ ಇಲ್ಲದೆ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದೆ.

ಇನ್ನೂ ಕಳೆದ ಒಂದೂವರೆ ವರ್ಷದ ಹಿಂದೆ ಕೆಲಸ ಆರಂಭವಾಗಿದ್ದು, ಆರಂಭಿಕ ಹಂತದಲ್ಲೇ ಕೆಲಸ ನಿಂತಿದೆ. ಇದ್ದೊಂದು ಬಸ್ ನಿಲ್ದಾಣವು ಸಹ ಇಲ್ಲದೆ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ದೂರುದೂರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಮತ್ತು ಸಾರಿಗೆ ಚಾಲಕ ನಿರ್ವಾಹಕರಿಗೆ ವಿಶ್ರಾಂತಿ ಕೊಠಡಿ ಶೌಚಾಲಯ ಸಹ ಇಲ್ಲದೆ ಪರದಾಡುವಂತಾಗಿದೆ. ಇತ್ತ ನಗರಸಭೆ, ಯೋಜನಾ ಪ್ರಾಧಿಕಾರ, ಸಾರಿಗೆ ಇಲಾಖೆಗಳ ನಡುವಿನ ಹಗ್ಗ ಜಗ್ಗಾಟ ಒಂದು ಕಡೆಯಾದರೆ ಜಿಎಸ್‌ಟಿ ಹೆರಿಕೆ ಸಹ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ತೊಡುಕಾಗಿದೆ ಎನ್ನಲಾಗಿದೆ.

ಅಧಿಕಾರಿಗಳು ಹಾಗೂ ಇಲಾಖೆಗಳ ನಡುವಿನ ಒಳಜಗಳದ ನಡುವೆ ಸೊರಗುತ್ತಿರುವುದು ಮಾತ್ರ ಸಾರಿಗೆ ಪ್ರಯಾಣಿಕರು. ಅದೇನೆ ಇರಲಿ ಅಧಿಕಾರಿಗಳು ಮತ್ತು ಇಲಾಖೆಗಳು ಒಮ್ಮತಕ್ಕೆ ಬಂದು ಬಸ್ ನಿಲ್ದಾಣದ ಕಾಮಗಾರಿಗೆ ಅನುವು ಮಾಡಿಕೊಡಬೇಕಿದೆ. ಆ ಮೂಲಕ ಜನರಿಗೆ ಸುಸಜ್ಜಿತ ಬಸ್ ನಿಲ್ದಾಣ ಕಲ್ಪಿಸುವಲ್ಲಿ ನೆರವಾಗಬೇಕಿದೆ.

ವರದಿ: ವಿನಾಯಕ್ ಗುರವ್, ಟಿವಿ9 ನೆಲಮಂಗಲ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.