ನವದೆಹಲಿ: ಅಕ್ಷಯ ತೃತೀಯದ ಶುಭ ದಿನದಂದು ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 8ನೇ ಕಂತಿನ 19 ಸಾವಿರ ಕೋಟಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಸಾವಯವ ಕೃಷಿ ಹಾಗೂ ಕೊರೊನಾ ನಿರ್ವಹಣೆ ಬಗ್ಗೆ ಸಹ ಮಾತನಾಡಿದ್ದಾರೆ.

ಇಂದು ಬೆಳಗ್ಗೆ ದೆಹಲಿಯ ತಮ್ಮ ಕಚೇರಿಯಿಂದ ವೀಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ಮೋದಿ, ಬಳಿಕ ಹಣ ಬಿಡುಗಡೆ ಮಾಡಿದರು. ಒಟ್ಟು 19 ಸಾವಿರ ಕೋಟಿಗೂ ಅಧಿಕ ಹಣವನ್ನು 8ನೇ ಕಂತಿನಲ್ಲಿ ಬಿಡುಗಡೆ ಮಾಡಿದ್ದು, 9.5 ಕೋಟಿ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ.

ಈ ಮೂಲಕ 2021-22ನೇ ಆರ್ಥಿಕ ವರ್ಷದ ಮೊದಲ ಕಂತನ್ನು ಇಂದು ಬಿಡುಗಡೆ ಮಾಡಿದಂತಾಗಿದೆ. 2019ರ ಡಿಸೆಂಬರ್ ನಲ್ಲಿ ಜಾರಿಗೆ ಬಂದ ಈ ಯೋಜನೆಯಿಂದ ಸರ್ಕಾರಕ್ಕೆ ವರ್ಷಕ್ಕೆ 75 ಸಾವಿರ ಕೋಟಿ ರೂಪಾಯಿ ಹೊರೆಯಾಗುತ್ತಿದೆ.

ಕೊರೊನಾ ಕುರಿತು ಸಹ ಮಾತನಾಡಿರುವ ಅವರು, ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಿ, ವರದಿ ಬರುವವರಗೆ ಕಾಯಬೇಡಿ, ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿರಿ. ಇದಕ್ಕೂ ಮೊದಲು ನಿಮ್ಮ ಕುಟುಂಬಸ್ಥರಿಂದ ದೂರ ಉಳಿದು, ಐಸೋಲೇಟ್ ಆಗಿ ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಸಮರೋಪಾದಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಆದಷ್ಟು ಬೇಗ ಗುಣಮುಖರಾಗಬೇಕಿದೆ. ಲಸಿಕೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಸುರಕ್ಷಾ ಕವಚವಿದ್ದಂತೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ಹಾಕಿಸಿಕೊಂಡ ಬಳಿಕ ಸಹ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದ್ದಾರೆ.

The post ಪಿಎಂ ಕಿಸಾನ್ ಸಮ್ಮಾನ್ ನಿಧಿ: 8ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ appeared first on Public TV.

Source: publictv.in

Source link