ಪಿಎಂ ಭದ್ರತಾ ಲೋಪದ ವಿವರವನ್ನೇಕೆ ಪಂಜಾಬ್​ ಸಿಎಂ ಗಾಂಧಿ ಕುಟುಂಬಕ್ಕೆ ನೀಡಿದ್ದಾರೆ? -ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನೆ | Why Punjab CM brief to Priyanka Gandhi Vadra About PM Security Breach asks Smriti Irani


ಪಿಎಂ ಭದ್ರತಾ ಲೋಪದ ವಿವರವನ್ನೇಕೆ ಪಂಜಾಬ್​ ಸಿಎಂ ಗಾಂಧಿ ಕುಟುಂಬಕ್ಕೆ ನೀಡಿದ್ದಾರೆ? -ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನೆ

ಸ್ಮೃತಿ ಇರಾನಿ

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi)ಯವರು ಪಂಜಾಬ್​ಗೆ ಹೋಗಿದ್ದಾಗ ಅವರಿಗೆ ಭದ್ರತೆ ನೀಡಲು ವಿಫಲವಾದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್​ನಲ್ಲಿ ಜನವರಿ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಲೋಪವಾಗಿ ಆತಂಕ ಸೃಷ್ಟಿಯಾಗಿದ್ದರೆ, ಇತ್ತ ಕಾಂಗ್ರೆಸ್​ ಪಕ್ಷ ಅದನ್ನು ಸಂಭ್ರಮಿಸುತ್ತಿತ್ತು. ಅಷ್ಟಕ್ಕೂ ಹೀಗೆ ಪ್ರಧಾನಿ ಭದ್ರತೆ ವೈಫಲ್ಯದಿಂದ ಕಾಂಗ್ರೆಸ್​ನಲ್ಲಿ ಲಾಭವಾಗಿದ್ದಾದರೂ ಯಾರಿಗೆ? ಕಾಂಗ್ರೆಸ್​ ಪಕ್ಷದಲ್ಲಿ ಯಾರು ಹೀಗೆ, ಪ್ರಧಾನಮಂತ್ರಿಯವರ ಭದ್ರತೆಗೆ ಎದುರಾದ ಅಪಾಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರು ಎಂದು ಪ್ರಶ್ನಿಸಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್​ಗೆ ಭೇಟಿ ಕೊಟ್ಟಾಗ ಉಂಟಾದ ಭದ್ರತಾ ಲೋಪದ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ವಿವರವಾದ ವರದಿ ಕೊಟ್ಟ ಬಗ್ಗೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. ಪ್ರಧಾನಮಂತ್ರಿ ಭದ್ರತ ಉಲ್ಲಂಘನೆಯಾದ ಬಗ್ಗೆ ಸಿಎಂ ಯಾಕೆ ಪ್ರಿಯಾಂಕಾ ಗಾಂಧಿಯವರಿಗೆ ವರದಿ ಒಪ್ಪಿಸಿದ್ದಾರೆ. ಪಿಎಂ ಭದ್ರತೆಯ ಶಿಷ್ಟಾಚಾರ, ಉಲ್ಲಂಘನೆ ಕುರಿತು ಗಾಂಧಿ ಕುಟುಂಬದ ಒಬ್ಬ ಖಾಸಗಿ ವ್ಯಕ್ತಿಗೆ ಯಾಕಾಗಿ ವಿವರಿಸಬೇಕು? ಈ ಭದ್ರತಾ ಉಲ್ಲಂಘನೆಯ ಬಗ್ಗೆ ರಕ್ಷಣಾ ಏಜೆನ್ಸಿಗಳಿಗೆ ವಿವರಣೆ ಕೊಟ್ಟರೆ ಸಾಕಲ್ಲವೇ ಎಂದು ಪ್ರಶ್ನಿಸಿದ್ದಾರೆ.  ಹಾಗೇ, ಪಂಜಾಬ್​​ನ ಡಿಜಿಪಿ, ಪ್ರಧಾನಿ ಮೋದಿ ಸಾಗಬೇಕಾದ ಮಾರ್ಗದ ಬಗ್ಗೆ ಅಷ್ಟೊಂದು ಅಸ್ಪಷ್ಟತೆ ಹೊಂದಿದ್ದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಸ್ಮೃತಿ ಇರಾನಿ ಮುಂದಿಟ್ಟಿದ್ದಾರೆ.

ಜನವರಿ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್​ಗೆ ಹೋಗಿದ್ದಾಗ ನಡೆದ ಭದ್ರತಾ ವೈಫಲ್ಯವೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್​ ಐವರು ಸದಸ್ಯರ ತನಿಖಾ ಸಮಿತಿ ರಚಿಸಿದ್ದು, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅದರ ಮುಖ್ಯಸ್ಥರಾಗಿದ್ದಾರೆ. ಪಂಜಾಬ್​ನಲ್ಲಿ ಪಿಎಂ ಭದ್ರತಾ ವೈಫಲ್ಯಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಮತ್ತು ಪಂಜಾಬ್​ ಸರ್ಕಾರಗಳು ಸಮಿತಿ ರಚನೆ ಮಾಡಿದ್ದವು. ಆದರೆ ಎಲ್ಲ ರೀತಿಯ ತನಿಖೆಗಳನ್ನೂ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದೀಗ ಸುಪ್ರೀಂಕೋರ್ಟ್​ ರಚಿಸಿರುವ ಸಮಿತಿಯಲ್ಲಿ ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಮುಖ್ಯಸ್ಥರಾಗಿದ್ದಾರೆ. ಚಂಡಿಗಢ್​​ನ ಡಿಜಿಪಿ (ಪೊಲೀಸ್ ಮಹಾನಿರ್ದೇಶಕರು), ರಾಷ್ಟ್ರೀಯ ತನಿಖಾದಳದ ಐಜಿ (IG Of NIA), ಪಂಜಾಬ್​-ಹರ್ಯಾಣ ಹೈಕೋರ್ಟ್​​ನ ರಿಜಿಸ್ಟ್ರಾರ್​ ಜನರಲ್​ ಮತ್ತು ಪಂಜಾಬ್​​ನ ಹೆಚ್ಚುವರಿ ಡಿಜಿಪಿ (ಭದ್ರತಾ ದಳ) ಈ ಸಮಿತಿಯಲ್ಲಿ ಇದ್ದಾರೆ.

TV9 Kannada


Leave a Reply

Your email address will not be published. Required fields are marked *