ಪಿಎಂ ಮೋದಿ ಟೀಂನಿಂದ ರಾಜಕೀಯಕ್ಕೆ ಬರುವಂತೆ ಪುನೀತ್​ಗೆ ಬಂದಿತ್ತು ಆಹ್ವಾನ; ನಕ್ಕು ಎದ್ದು ಹೋಗಿದ್ದ ಅಪ್ಪು | Pm Narendra Modi team Once invited Puneeth Rajkumar To Join Bharatiya Janata Party in Bangalore


ಪಿಎಂ ಮೋದಿ ಟೀಂನಿಂದ ರಾಜಕೀಯಕ್ಕೆ ಬರುವಂತೆ ಪುನೀತ್​ಗೆ ಬಂದಿತ್ತು ಆಹ್ವಾನ; ನಕ್ಕು ಎದ್ದು ಹೋಗಿದ್ದ ಅಪ್ಪು

ಮೋದಿ ಜತೆ ಪುನೀತ್​ ದಂಪತಿ

ಪುನೀತ್​ ರಾಜ್​ಕುಮಾರ್​ ಅವರು (Puneeth Rajkumar) ಎಂದಿಗೂ ಯಾವ ರಾಜಕೀಯ ಪಕ್ಷದ ಜತೆಯೂ ಗುರುತಿಸಿಕೊಂಡಿಲ್ಲ. ತಂದೆಯಂತೆ ಅವರು ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು. ಅವರು ಒಂದು ದಿನವೂ ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡಿದವರಲ್ಲ. ಎಲ್ಲಾ ರಾಜಕೀಯ ನಾಯಕರ ಜತೆ ಒಳ್ಳೆಯ ಬಾಂಧವ್ಯ ಇದ್ದ ಹೊರತಾಗಿಯೂ ಅವರು ಯಾವುದೇ ಪಕ್ಷಕ್ಕೆ ಸೇರುವ ಆಲೋಚನೆ ಮಾಡಿರಲಿಲ್ಲ.​ ರಾಜಕೀಯದ ಬಗ್ಗೆ ಪುನೀತ್ ಯಾವ ರೀತಿಯ ಆಲೋಚನೆ ಹೊಂದಿದ್ದರು ಎನ್ನುವ ಬಗ್ಗೆ ನಿರ್ಮಾಪಕ ಎಸ್. ವಿ. ಬಾಬು (SV Babu) ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.

‘ಪುನೀತ್ ರಾಜ್​ಕುಮಾರ್ ಅವರಿಗೆ ರಾಜಕೀಯಕ್ಕೆ ಬರುವ ಉದ್ದೇಶ ಯಾವಾಗಲೂ ಇರಲಿಲ್ಲ. ಈ ವಿಚಾರ ನನಗೆ ಗೊತ್ತಿತ್ತು. ಬಿಜೆಪಿ ಮುಖಂಡರಿಗೆ ಅಪ್ಪು ಅವರನ್ನು ಭೇಟಿ ಮಾಡಿಸಿದ್ದೆ. ಅವರನ್ನು ರಾಜಕೀಯಕ್ಕೆ ಕರೆಯುವ ಉದ್ದೇಶದಿಂದಲೇ ಈ ಮೀಟಿಂಗ್​ ನಡೆದಿತ್ತು ಎಂಬುದು ಅಪ್ಪುಗೆ ಗೊತ್ತಾಗಿದ್ದರೆ ಭೇಟಿಗೂ ಒಪ್ಪಿಕೊಳ್ಳುತ್ತಿರಲಿಲ್ಲವೇನೋ’ ಎಂದಿದ್ದಾರೆ ಎಸ್​.ವಿ. ಬಾಬು.

Puneeth Rajkumar

ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದ ಪುನೀತ್​

‘ಬಿಜೆಪಿ ಮುಖಂಡರಾದ ಆಶಿಶ್ ಹಾಗೂ ಪಿವಿಎಸ್ ಶರ್ಮಾ ಅವರು ಪುನೀತ್​ ಮನೆಗೆ ಭೇಟಿ ನೀಡಿದ್ದರು. ಇವರು ಪ್ರಧಾನಿ ನರೇಂದ್ರ ಮೋದಿ ಟೀಮ್​ನವರು. ಈ ವೇಳೆ ಇಬ್ಬರು ನಾಯಕರು ರಾಜಕೀಯಕ್ಕೆ ಬರುವಂತೆ ಆಹ್ವಾನ ಕೊಟ್ಟರು‌. ಪುನೀತ್ ನಗುತ್ತಲೇ ಎದ್ದು ಹೋಗಿಬಿಟ್ಟರು. ಟೀ ತರಿಸಿ ಕೊಟ್ಟರು. ರಾಜಕೀಯಕ್ಕೆ ಬರಬಾರದು ಅನ್ನೋ ಬಗ್ಗೆ ಪುನೀತ್​ ಅಷ್ಟು ಗಟ್ಟಿ ನಿರ್ಧಾರ ಮಾಡಿದ್ದರು. ಅವರು ಇದಕ್ಕೆ ಒಪ್ಪಿಕೊಳ್ಳಲ್ಲ, ದೊಡ್ಮನೆಯವರು ರಾಜಕೀಯಕ್ಕೆ ಬರಲ್ಲ ಅನ್ನೋದು ನನಗೆ ಗೊತ್ತಿತ್ತು. ದೊಡ್ಮನೆಯವರು ರಾಜಕೀಯಕ್ಕೆ ಬಂದರೆ ಖಂಡಿತವಾಗಿಯೂ ಪಕ್ಷಕ್ಕೆ ಹೊಸ ಶಕ್ತಿ ಸಿಗುತ್ತದೆ ಅನ್ನೋದನ್ನು ನಾನು ಆ ನಾಯಕರಿಗೆ ಹೇಳಿದ್ದು ನಿಜ. ‌ಆದರೆ ಪುನೀತ್​ ಅವರನ್ನು ನೀವೇ ಒಪ್ಪಿಸಬೇಕು ಎಂದು ಹೇಳಿದ್ದೆ’ ಎಂಬುದಾಗಿ ಎಸ್​.ವಿ. ಬಾಬು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪುನೀತ್​ ಹಾಗೂ ಅವರ ಪತ್ನಿ ಅಶ್ವಿನಿ ಮೋದಿ ಅವರನ್ನು ಭೇಟಿಯಾಗಿದ್ದರು. ಈ ಬಗ್ಗೆಯೂ ಮಾತನಾಡಿದ್ದಾರೆ ಎಸ್​.ವಿ. ಬಾಬು. ‘ನಾವು ಮೋದಿಜೀಯವರನ್ನು ಭೇಟಿ ಮಾಡಲು ಮಾತನಾಡಿದ್ದೆವು. ಅದನ್ನ ಒಪ್ಪಿಕೊಳ್ಳೋಕೂ ಪುನೀತ್​‌ ಹಿಂಜರಿಕೆ ಪಟ್ಟರು. ಒಂದು ಪಕ್ಷದಲ್ಲೇ ಗುರುತಿಸಿಕೊಂಡಂತಾಗುತ್ತದೆ ಎಂಬುದು ಅವರ ಅಭಿಪ್ರಾಯ ಆಗಿತ್ತು. ಕೊನೆಗೆ ಅಶ್ವಿನಿ ಯವರು ಒಪ್ಪಿಸಿ ಭೇಟಿ ಮಾಡಿಸಿದ್ದರು. ಈ ಭೇಟಿಯಿಂದಾಗಿ ಪುನೀತ್ ಅವರಿಂದ ಆ ಮೆಸೇಜ್ ಸರ್ಕ್ಯೂಲೇಟ್ ಆಗಿದ್ದಕ್ಕೆ  ಪಾರ್ಟಿಗೆ ಒಳ್ಳೆಯದಾಗಿದ್ದು ನಿಜ’ ಎಂದಿದ್ದಾರೆ ಬಾಬು.

ಇದನ್ನೂ ಓದಿ: ಶಕ್ತಿಧಾಮ ನೋಡಿಕೊಳ್ಳುವ ಬಗ್ಗೆ ಅಶ್ವಿನಿ​ ಜತೆ ವಿಶಾಲ್​ ಚರ್ಚೆ; ಪುನೀತ್​​ ಕುಟುಂಬದಿಂದ ಅನುಮತಿ ಸಿಗೋದು ಯಾವಾಗ?

Puneeth Rajkumar: ಬಂಗಾರಪೇಟೆ ಪಾನಿಪುರಿಗೆ ಮನಸೋತಿದ್ದ ಪುನೀತ್​ ರಾಜ್​ಕುಮಾರ್​

TV9 Kannada


Leave a Reply

Your email address will not be published. Required fields are marked *