ಪೀರ್​ಪಾಷಾ ದರ್ಗಾ ವಿವಾದ: ಪ್ರಮೋದ್ ಮುತಾಲಿಕ್​ಗೆ ಬೀದರ್ ಜಿಲ್ಲೆ ಪ್ರವೇಶ ನಿರ್ಬಂಧ | Basavakalyana Peer Pasha Durga Controversy Bidar DC Bans Pramod Mutalik Entry to District


ಪೀರ್​ಪಾಷಾ ದರ್ಗಾ ವಿವಾದ: ಪ್ರಮೋದ್ ಮುತಾಲಿಕ್​ಗೆ ಬೀದರ್ ಜಿಲ್ಲೆ ಪ್ರವೇಶ ನಿರ್ಬಂಧ

ಪ್ರಮೋದ್ ಮುತಾಲಿಕ್

ಶ್ರೀರಾಮಸೇನೆಯ ರಾಜ್ಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ ಅವರಿಗೆ ಬೀದರ್ ಜಿಲ್ಲೆ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಆದೇಶ ಹೊರಡಿಸಿದ್ದಾರೆ.

ಬೀದರ್: ಬಸವಕಲ್ಯಾಣ ಪಟ್ಟಣದ ಪೀರ್​ಪಾಷಾ ದರ್ಗಾದ (Peer Pasha Durgah) ಸ್ಥಳವೇ ಮೂಲ ಅನುಭವ ಮಂಟಪ ಎನ್ನುವ ಹೇಳಿಕೆಗಳ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕದಡದಂತೆ ತಡೆಯಲು ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಇದೇ ಕಾರಣಕ್ಕೆ ಶ್ರೀರಾಮಸೇನೆಯ ರಾಜ್ಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ ಅವರಿಗೆ ಬೀದರ್ ಜಿಲ್ಲೆ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಆದೇಶ ಹೊರಡಿಸಿದ್ದಾರೆ. ಬೀದರ್​ನ ಪೊಲೀಸ್ ಅಧೀಕ್ಷಕರ ಸೂಚನೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೂನ್ 4ರ ಬೆಳಿಗ್ಗೆ 6ರಿಂದ ಜೂನ್ 12ರ ಸಂಜೆ 6 ಗಂಟೆಯವರೆಗೆ ಬೀದರ್ ಜಿಲ್ಲೆಯಾದ್ಯಂತ ಸಿಆರ್​ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಫೆಯನ್ನೂ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೀರಪಾಷಾ ದರ್ಗಾ ಇದ್ದ ಸ್ಥಳದಲ್ಲಿಯೇ ಮೂಲ ಅನುಭವ ಮಂಟಪವೂ ಇತ್ತು. ಈ ಕುರಿತು ಸಂಶೋಧನೆಯಾಗಬೇಕು ಎಂದು ಹಲವು ಮಠಾಧೀಶರು ಕರೆ ನೀಡಿದ್ದರು. ಜೂನ್ 12ರಂದು ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಪಾದಯಾತ್ರೆಗೆ ಮೂಲ ಅನುಭವ ಮಂಟಪ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ತಡೋಳಾ ಮೇಹಕರನ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದ್ದರು.

ಪಾದಯಾತ್ರೆಯ ಕುರಿತು ಮಾಹಿತಿ ನೀಡಲು ಬಸವಕಲ್ಯಾಣ ಪಟ್ಟಣದ ರುದ್ರಮುನಿ ಶಿವಾಚಾರ್ಯ ಮಠದಲ್ಲಿ ಇಂದು (ಜೂನ್ 4) ಪ್ರಮೋದ ಮುತಾಲಿಕ್ ಸುದ್ದಿಗೋಷ್ಠಿ ನಡೆಸಬೇಕಿತ್ತು. ಆದರೆ ಈ ವೇಳೆ ಅವರು ಕೋಮು ಸೌಹಾರ್ದಕ್ಕೆ ಧಕ್ಕೆಯುಂಟಾಗುವ ಹೇಳಿಕೆ ನೀಡುವ ಸಾಧ್ಯತೆ ಇತ್ತು. ಜೂನ್ 12ರ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಕಾರ್ಯಕ್ರಮದಲ್ಲಿಯೂ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟಾಗುವ ಸಾಧ್ಯತೆಗಳಿದ್ದವು. ಪ್ರಮೋದ ಮುತಾಲಿಕ ಅವರು ಬಸವಕಲ್ಯಾಣ ಪಟ್ಟಣ ಪ್ರವೇಶಿಸಿದರೆ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟಾಗುವ ಅಪಾಯ ಇದ್ದ ಕಾರಣ ಅವರ ಜೂನ್ 12ರ ಸಂಜೆ 6 ಗಂಟೆಯವರೆಗೂ ಪ್ರಮೋದ್ ಮುತಾಲಿಕ್ ಅವರ ಬೀದರ್ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *