ಉಕ್ರೇನ್-ರಷ್ಯಾ ಬಿಕ್ಕಟ್ಟು ಉಲ್ಬಣಿಸಿದ್ದು, ರಷ್ಯಾ ಕಡೆಯಿಂದ ಶೆಲ್ ದಾಳಿ ಆರಂಭವಾಗಿದೆ. ಅಮೆರಿಕ ಕೂಡ ಇದಕ್ಕೆ ಪ್ರತಿಕ್ರಿಯಿಸದೆ ಇರಲಾರದು. ಈ ನಡುವೆ ಭಾರತದ ನಿಲುವೇನು? ಸಮರ ನಡೆದರೆ ಭಾರತದ ಮೇಲೆ ಏನು ಪರಿಣಾಮ? ಈ ಎಲ್ಲಾ ವಿಚಾರಗಳ ಕುರಿತು ನಿರ್ಧಾರ ಕೈಗೊಳ್ಳುವ ಮುನ್ನ ಭಾರತವು ಉಕ್ರೇನ್ನಲ್ಲಿ ಇರುವ ಭಾರತೀಯ ನಾಗರಿಕರು ತಾತ್ಕಾಲಿಕವಾಗಿ ಆ ದೇಶವನ್ನು ತೊರೆಯುವಂತೆ ಕರೆ ನೀಡಿದೆ.
ಉಕ್ರೇನ್ನಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಯುದ್ಧದ ಭೀತಿ
ರಷ್ಯಾ-ಉಕ್ರೇನ್ ನಡುವೆ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಕ್ಷಣ ಕ್ಷಣಕ್ಕೂ ಯುದ್ಧದ ಭೀತಿ ಹೆಚ್ಚುತ್ತಿದೆ. ರಷ್ಯಾ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳೊಂದಿಗೆ ಮಿಲಿಟರಿ ಶಕ್ತಿ ಪ್ರದರ್ಶಿಸಿದ ಬೆನ್ನಲ್ಲೇ ಉಕ್ರೇನ್ ಸೈನಿಕರು ಮತ್ತು ರಷ್ಯಾ ಬೆಂಬಲಿತ ಬಂಡುಕೋರರ ನಡುವಿನ ಸಂಪರ್ಕ ರೇಖೆ ಉದ್ದಕ್ಕೂ ನೂರಾರು ಫಿರಂಗಿ ಶೆಲ್ಗಳ ದಾಳಿ ನಡೆದಿದೆ. ಯುದ್ಧ ತಲೆದೋರುವ ಭೀತಿಯಿಂದಾಗಿ ಸಾವಿರಾರು ನಾಗರಿಕರು ಉಕ್ರೇನ್ ತೊರೆಯುತ್ತಿದ್ದಾರೆ.
ಈ ಮಧ್ಯೆ, ಬಿಕ್ಕಟ್ಟಿಗೆ ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹಾರ ಕಂಡುಕೊಂಡು ಯುದ್ಧ ತಪ್ಪಿಸಲು ರಷ್ಯಾ ಮತ್ತು ಉಕ್ರೇನ್ ಯತ್ನಿಸುತ್ತಿವೆ. ಉಕ್ರೇನ್ ಅಧ್ಯಕ್ಷ ವಾಲ್ಡಿಮಿರ್ ಸಂಧಾನ ಮಾತುಕತೆಗೆ ಪುಟಿನ್ಗೆ ಆಹ್ವಾನ ನೀಡಿದ್ದಾರೆ. ಆದ್ರೆ, ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಮಾತ್ರ ಶೆಲ್ ದಾಳಿ ಮುಂದುವರಿಸಿರೋದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ. ಅಮೆರಿಕಾ ಹಾಗೂ ಫ್ರಾನ್ಸ್ ಕೂಡ ಯುದ್ಧ ತಪ್ಪಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನ ಮುಂದುವರಿಸಿವೆ.
ಬಿಕ್ಕಟ್ಟು ಶಮನಕ್ಕೆ ರಷ್ಯಾ-ಫ್ರಾನ್ಸ್ ಒಪ್ಪಿಗೆ
ರಷ್ಯಾ- ಉಕ್ರೇನ್ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗ್ತಿದ್ದಂತೆ ಇದೀಗ ಫ್ರಾನ್ಸ್ ಮಧ್ಯ ಪ್ರವೇಶಿಸಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಒಂದೂವರೆ ಗಂಟೆಗಳ ಕಾಲ ದೂರವಾಣಿ ಮೂಲಕ ಮಾತುಕತೆ ನಡೆದಿದೆ. ಈ ನಡುವೆ, ಅಮೆರಿಕಾ ಅಧ್ಯಕ್ಷ ಬೈಡೆನ್ ಕೂಡ ಪುಟಿನ್ ಜೊತೆ ಮಾತುಕತೆಗೆ ಒಲವು ತೋರಿದ್ದು, ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳಲು ಸಿದ್ಧವಿರೋದಾಗಿ ಘೋಷಿಸಿದ್ದಾರೆ.
ಉಕ್ರೇನ್ನಿಂದ ವಾಪಸ್ಸಾಗುವಂತೆ ಭಾರತೀಯರಿಗೆ ಸೂಚನೆ
ಉಕ್ರೇನ್ನಲ್ಲಿ ಯುದ್ಧ ಸಂಭವಿಸುವ ಎಲ್ಲಾ ಮುನ್ಸೂಚನೆಗಳು ಗೋಚರಿಸಿದ್ದು, ಅಲ್ಲಿ ನೆಲೆಸಿರುವ ಭಾರತೀಯರು ತಾಯ್ನಾಡಿಗೆ ವಾಪಸ್ಸಾಗುವಂತೆ ಭಾರತ ಸರ್ಕಾರ ಎರಡನೇ ಬಾರಿ ಸೂಚಿಸಿದೆ. ಭಾರತೀಯ ರಾಜತಾಂತ್ರಿಕ ಸಿಬ್ಬಂದಿಗೂ ನಿರ್ದೇಶನ ನೀಡಿದೆ. ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಅನಗತ್ಯವಾಗಿ ಯಾರೂ ಉಕ್ರೇನ್ನಲ್ಲಿ ಉಳಿಯದಂತೆ ಸಲಹೆ ನೀಡಿದೆ.
ಭಾರತ ಮಾತ್ರವಲ್ಲ ಜರ್ಮನಿ ಮತ್ತು ಆಸ್ಟ್ರಿಯಾ ದೇಶಗಳು ಕೂಡ ತಮ್ಮ ಪ್ರಜೆಗಳಿಗೆ ಉಕ್ರೇನ್ ತೊರೆಯುವಂತೆ ಸೂಚಿಸಿವೆ. ರಷ್ಯಾ ಆಕ್ರಮಣದ ಪ್ರಮುಖ ಗುರಿಗಳಾಗಿರುವ ಉಕ್ರೇನ್ ರಾಜಧಾನಿ ಕೀವ್ ಮತ್ತು ಒಡೆಸಾಗೆ ಜರ್ಮನಿಯ ವಾಯುಯಾನ ಸಂಸ್ಥೆ ಲುಫ್ಥಾನ್ಸಾ ವಿಮಾನಗಳ ಹಾರಾಟ ರದ್ದುಗೊಳಿಸಿದೆ. ಕೀವ್ನಲ್ಲಿರುವ ನ್ಯಾಟೊ ಸಂಪರ್ಕ ಕಚೇರಿಯು ತನ್ನ ಸಿಬ್ಬಂದಿಯನ್ನು ಬ್ರಸೆಲ್ಸ್ಗೆ ಮತ್ತು ಪಶ್ಚಿಮ ಉಕ್ರೇನ್ ನಗರವಾದ ಎಲ್ವಿವ್ಗೆ ಸ್ಥಳಾಂತರಿಸಲಾಗಿದೆ.
The post ಪುಟಿನ್-ಬೈಡೆನ್ ಭೇಟಿಗೆ ಗ್ರೀನ್ಸಿಗ್ನಲ್; ಉಕ್ರೇನ್ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಫ್ರಾನ್ಸ್..! appeared first on News First Kannada.