ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವಾರು ದೇಶಗಳು ಮತ್ತೊಂದು ದೇಶಕ್ಕೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿವೆ. ಬಡರಾಷ್ಟ್ರ, ಶ್ರೀಮಂತ ರಾಷ್ಟ್ರ ಅನ್ನೋ ಬೇಧವಿಲ್ಲದೆ ನೆರೆಹೊರೆಯ ದೇಶಗಳಿಗೆ ತಮ್ಮ ಕೈಲಾದ ನೆರವು ನೀಡುತ್ತಿವೆ. ಈ ಮೂಲಕ ಇಡೀ ವಿಶ್ವಕ್ಕೆ ಮಾನವೀಯತೆಯ ಸಾಕ್ಷಾತ್ಕಾರವಾಗಿದೆ. ಅದಕ್ಕೆ ಮತ್ತೊಂದು ಉದಾಹರಣೆಯೇ ಒಂದು ಪುಟ್ಟ ದೇಶ ಕೀನ್ಯಾದ ಮಹತ್ಕಾರ್ಯ.

ಪೂರ್ವ ಆಫ್ರಿಕಾದ ಚಿಕ್ಕ ದೇಶ ಕೀನ್ಯಾ ಹೃದಯವಂತಿಕೆ ಮರೆದಿದ್ದು, ಕೊರೊನಾ ಪರಿಹಾರದ ಭಾಗವಾಗಿ ಭಾರತಕ್ಕೆ 12 ಟನ್​ಗಳಷ್ಟು ಆಹಾರ ಸಾಮಗ್ರಿಯನ್ನ ಕಳಿಸಿಕೊಟ್ಟಿದೆ. ಸ್ಥಳೀಯವಾಗಿ ಬೆಳೆದ  ಕಾಫಿ, ಟೀ ಹಾಗೂ ಕಡಲೆಕಾಯಿಯನ್ನ ಇಂಡಿಯನ್ ರೆಡ್​ ಕ್ರಾಸ್​ ಸೊಸೈಟಿಗೆ ಕಳಿಸಿದೆ. ಇವುಗಳನ್ನ ಮಹಾರಾಷ್ಟ್ರದಲ್ಲಿ ಫುಡ್​ ಕಿಟ್​​​ಗಳ ಜೊತೆ ವಿತರಣೆ ಮಾಡಲಾಗ್ತಿದೆ ಎಂದು ರೆಡ್​ ಕ್ರಾಸ್​ ಸೊಸೈಟಿ ಹೇಳಿದೆ.

ಕೋವಿಡ್ ಸಾಂಕ್ರಾಮಿಕದ ಈ ಸಮಯದಲ್ಲಿ ಭಾರತೀಯರು ಮತ್ತು ಭಾರತ ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ನಿಲ್ಲುಲು ಕೀನ್ಯಾ ಸರ್ಕಾರ ಬಯಸುತ್ತದೆ ಅಂತ ಆಫ್ರಿಕನ್ ದೇಶದ ಹೈ ಕಮಿಷನರ್ ವಿಲ್ಲಿ ಬೆಟ್ ಹೇಳಿದ್ದಾರೆ.

ಸ್ವತಃ ಬೆಟ್​​ ಈ ಆಹಾರ ಸಾಮಗ್ರಿಗಳನ್ನ ಹಸ್ತಾಂತರಿಸಲು ದೆಹಲಿಗೆ ಭೇಟಿ ನೀಡಿದ್ರು. ಜನರ ಜೀವಗಳನ್ನ ಉಳಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿರೋ ಫ್ರಂಟ್​​ಲೈನ್​​ ಕಾರ್ಯಕರ್ತರಿಗಾಗಿ ಈ ನೆರವು ಸಾಮಗ್ರಿಯನ್ನ ಕಳಿಸಲಾಗಿದೆ ಅವರು ಹೇಳಿದ್ದಾರೆ. ಇನ್ನು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಉಪಾಧ್ಯಕ್ಷ (ಮಹಾರಾಷ್ಟ್ರ ಶಾಖೆ) ಹೋಮಿ ಖುಸ್ರೋಖನ್ ಮಾತನಾಡಿ, ಈ ಕೊಡುಗೆ ಕೀನ್ಯಾದ ಜನರು ಭಾರತೀಯರ ಮೇಲೆ ಹೊಂದಿರುವ ಅನುಭೂತಿಯನ್ನು ಸಂಕೇತಿಸುತ್ತದೆ ಎಂದಿದ್ದಾರೆ.

ಅಂದ್ಹಾಗೆ ಭಾರತ ಕೀನ್ಯಾದಂಥ ಪುಟ್ಟ ದೇಶದಿಂದ ಆಹಾರ ಸಾಮಗ್ರಿಗಳನ್ನ ಪಡೆಯುವ ಸ್ಥಿತಿಗೆ ಬಂತಾ ಎಂದು ಕೆಲವರು ಮೂಗು ಮುರಿಯುತ್ತಿದ್ದಾರೆ. ಆದ್ರೆ ಈ ಹಿಂದೆ ಇದೇ ಕೀನ್ಯಾದ ಜನರು, ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರೋ ಅಮೆರಿಕಾಗೂ ಸಹಾಯ ಮಾಡಿ ತಮ್ಮ ಹೃದಯಶ್ರೀಮಂತಿಕೆ ಏನು ಅನ್ನೋದನ್ನ ತೋರಿಸಿದ್ದರು. ಅಮೆರಿಕಾದ ಜನ ಅವರ ಸೌಜನ್ಯ ಹಾಗೂ ಮುಗ್ಧ ಪ್ರೀತಿಗೆ ಮನಸೋತಿದ್ದರು. ಒಂದು ದೇಶ ಸಂಕಷ್ಟದಲ್ಲಿದ್ದಾಗ ಮತ್ತೊಂದು ದೇಶ ಸಹಾಯ ಹಸ್ತ ಚಾಚುವುದು ಮಾನವೀಯ ಗುಣದ ಸಂಕೇತವಾಗಿರುತ್ತದೆ, ಇದರಲ್ಲಿ ದೊಡ್ಡ ದೇಶ, ಚಿಕ್ಕ ದೇಶ, ಬಡದೇಶ, ಶ್ರೀಮಂತ ದೇಶ ಎನ್ನುವ ವ್ಯತ್ಯಾಸಗಳು ಮುಖ್ಯವಾಗುವುದಿಲ್ಲ.

ಕೀನ್ಯಾದ ಹೃದಯವಂತಿಕೆಗೆ ಮನಸೋತಿದ್ದರು ಅಮೆರಿಕಾದ ಜನ
2001ರಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದಾಗ ಕೀನ್ಯಾದ ಮಸಾಯ್ ಜನಾಂಗದ ಮುಗ್ಧ ಜನರು ನೆರವಿನಹಸ್ತ ಚಾಚಿದ್ದರು. ಈ ಹಳ್ಳಿಯ ಸಮೀಪದ ಯುವತಿ ಸ್ಟ್ಯಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದರು. ಆಕೆ ರಜೆಗೆಂದು ಊರಿಗೆ ಬಂದಾಗ ವರ್ಲ್ಡ್​ ಟ್ರೇಡ್​ ಸೆಂಟರ್ ಮೇಲಿನ ದಾಳಿ ವಿಷಯ ಅಲ್ಲಿನ ಜನರಿಗೆ ಗೊತ್ತಾಗಿ ಬಹಳ ದುಃಖಿತರಾಗಿದ್ರು. ಆ ಮಗ್ಧ ಜನ ಅಮೆರಿಕಾದ ಜನರ ದುಃಖವನ್ನ ತಮ್ಮದೇ ದುಃಖವೆನ್ನುವಂತೆ ಭಾವಿಸಿದ್ದಲ್ಲದೇ, ಅದೇ ವೈದ್ಯಕೀಯ ವಿದ್ಯಾರ್ಥಿನಿ ಕೈಯಿಂದ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿಯ ಡೆಪ್ಯುಟಿ ಚೀಫ್ ವಿಲಿಯಂ ಬ್ರಾಂಗಿಕ್ರಿಗೆ ಒಂದು ಪತ್ರವನ್ನು ಕಳಿಸಿದ್ದರು. ಪತ್ರ ತಲುಪಿದ ಬಳಿಕ ವಿಲಿಯಂ ಮಸಾಯ್ ಜನಾಂಗದವರ ಇನೊಸಾಯಿನ್ ಹಳ್ಳಿಗೆ ಬಂದಿದ್ದರು. ಆಗ ಹಳ್ಳಿಯ ಜನರೆಲ್ಲ ಅಲ್ಲಿ ಸೇರಿ ಹದಿನಾಲ್ಕು ಆಕಳುಗಳನ್ನ ತಂದು ಕೊಟ್ಟರು. ಅವರು ಬರೆದ ಪತ್ರದಲ್ಲಿ ದುಃಖದ ಈ ಸಮಯದಲ್ಲಿ ಅಮೇರಿಕಾ ಜನರ ಜೊತೆಗೆ ನಾವಿದ್ದೇವೆ. ಅವರ ಈ ಕಷ್ಟಕಾಲದಲ್ಲಿ ಸಹಾಯವಾಗಲೆಂದು ಈ ಆಕಳುಗಳನ್ನು ಸಹಾಯಾರ್ಥವಾಗಿ ನೀಡುತ್ತಿದ್ದೇವೆ ಅಂತ ಬರೆಯಲಾಗಿತ್ತು.

ಆದ್ರೆ ಆಕಳುಗಳನ್ನ ತೆಗೆದುಕೊಂಡು ಹೋಗುವುದು ಕಷ್ಟ ಹಾಗೂ ಕಾನೂನು ತೊಡಕು ಎದುರಾಗುತ್ತೆ ಅಂತ ಅವುಗಳನ್ನ ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಮಸಾಯ್ ಜನಾಂಗದವರ ಸಾಂಪ್ರದಾಯಿಕ ವೇಷಭೂಷಣವನ್ನ ಖರೀದಿಸಿ ಅದನ್ನು 9/11 ಮೆಮೋರಿಯಲ್ ಮ್ಯೂಸಿಯಂನಲ್ಲಿಡಲು ತೀರ್ಮಾನಿಸಲಾಗಿತ್ತು. ಈ ವಿಷಯ ಅಮೇರಿಕಾದ ಜನರಿಗೆ ಗೊತ್ತಾದ ಬಳಿಕ ವೇಷಭೂಷಣ ತರುವುದು ಬೇಡ, ಪ್ರೀತಿಯಿಂದ ನೀಡಿರುವ ಆಕಳುಗಳನ್ನೇ ಇಲ್ಲಿಗೆ ತಲುಪಿಸಿ ಅಂತ ಆನ್ ಲೈನ್ ಪಿಟಿಷನ್ ಹಾಕಿದ್ದರು. ಲಕ್ಷಾಂತರ ಅಮೆರಿಕನ್ನರು ಮಸಾಯ್ ಜನಾಂಗ ಹಾಗೂ ಕೀನ್ಯಾ ಜನರಿಗೆ ಪತ್ರ ಬರೆದು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದರು.

The post ಪುಟ್ಟ ದೇಶದ ದೊಡ್ಡ ಹೃದಯ; ಅಂದು ಅಮೆರಿಕಾಕ್ಕೆ.. ಇಂದು ಭಾರತಕ್ಕೆ ತನ್ನ ಕೈಲಾದ ಸಹಾಯ appeared first on News First Kannada.

Source: newsfirstlive.com

Source link