ಬೆಂಗಳೂರು: ಚಂದನವನದ ರಾಜಕುಮಾರ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ 19 ದಿನ ಕಳೆದಿದ್ದರೂ ಅಭಿಮಾನಿಗಳು ಮಾತ್ರ ಶೋಕ ಸಾಗರದಿಂದ ಹೊರಬಂದಿಲ್ಲ. ಇದರ ನಡುವೆ ಇಂದು ಅಪ್ಪುಗೆ ಫಿಲ್ಮ್ ಚೇಂಬರ್ ವತಿಯಿಂದ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಸಿನಿಮಾ ಶೂಟಿಂಗ್ ಕಾರ್ಯಕ್ರಮಗಳನ್ನು ಸಲ್ಲಿಸಿಲು ಸ್ವಯಂಪ್ರೇರಿತವಾಗಿ ನಿರ್ಧರಿಸಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನುಡಿ ನಮನ ಕಾರ್ಯಕ್ರಮ ಆಯೋಜಿಸಲಾಗಿದ್ದು, ನುಡಿ ನಮನ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ, ಸಚಿವರು, ವಿರೋಧ ಪಕ್ಷದ ನಾಯಕರು, ಮೈಸೂರಿನ ಮಹಾರಾಜ ಯದುವೀರ್ ಸೇರಿದಂತೆ ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ನಟ, ನಟಿಯರು ಆಗಮಿಸಲಿದ್ದಾರೆ.
ಈ ನಡುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಶೂಟಿಂಗ್ ನಿಲ್ಲಿಸಲು ನಿರ್ಧಾರಿಸಲಾಗಿದೆ. ಚಿತ್ರೀಕರಣ ಹೊರತು ಪಡಿಸಿ ಸಿನಿಮಾ ಪ್ರದರ್ಶನ, ಪ್ರೀ ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯಲಿವೆ.
ಇನ್ನು ನುಡಿ ನಮನ ಕಾರ್ಯಕ್ರಮದಲ್ಲಿ ಮೊದಲಿಗೆ ಪುನೀತ್ ರಾಜ್ಕುಮಾರ್ ಅವರ ಕುರಿತು ನಾಗೇಂದ್ರ ಪ್ರಸಾದ್ ರಚಿಸಿರೋ ಹಾಡು ಹಾಡಲಾಗುತ್ತದೆ. ಬಳಿಕ ಶ್ರೀಧರ್ ಸಾಗರ್ (ಸಾಕ್ಸೋಫೋನ್) ಅವರ ಕಡೆಯಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ನಟರಾದ ಶ್ರೀಕಾಂತ್, ಶರತ್ ಕುಮಾರ್, ಪ್ರಭುದೇವ, ಪ್ರಕಾಶ್ ರಾಜ್, ಆಲಿ ವಿಶಾಲ್, ನಾಗಾರ್ಜುನ್ ಭಾಗಿಯಾಗೋ ಸಾಧ್ಯತೆ ಇದೆ.
ಅಲ್ಲದೇ ಸೌತ್ ಇಂಡಿಯಾ ಫಿಲ್ಮ್ ಚೇಂಬರ್ ಸದಸ್ಯರು, ಕನ್ನಡ ಚಿತ್ರರಂಗದಿಂದ 142 ಜನ ಕಲಾವಿದರು, ತಂತ್ರಜ್ಞರು ಸೇರಿದಂತೆ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ಫಿಲ್ಮ್ ಚೇಂಬರ್ ಸದಸ್ಯರು ಭಾಗಿಯಾಗಲಿದೆ. ಇನ್ನು ಕಾರ್ಯಕ್ರಮದಲ್ಲಿ ಗುರುಕಿರಣ್ ತಂಡದಿಂದ 10 ಹಾಡುಗಳು ಸೇರಿದಂತೆ ಗಾಯಕರಾದ ವಿಜಯ್ ಪ್ರಕಾಶ್ ,ರಾಜೇಶ್ ಕೃಷ್ಣನ್ ಸೇರಿದಂತೆ ಎಲ್ಲಾ ಪ್ರಮುಖ ಗಾಯಕರು ಹಾಡಲಿದ್ದಾರೆ.