ಪುನೀತ್​ ಅಭಿಮಾನಿಗಳಿಗೆ ಗುಡ್​​ನ್ಯೂಸ್​ -ಬಯೋಗ್ರಫಿ ರೂಪದಲ್ಲಿ ಅಭಿಮಾನಿಗಳ ಕೈ ಸೇರಲಿದ್ದಾರೆ ‘ಅಪ್ಪು’


ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿದ್ದಾರಾದರೂ ಅವರು ತೋರಿರುವ ಪ್ರೀತಿ, ವಾತ್ಸಲ್ಯ ಹಾಗೂ ಎಲ್ಲರೊಂದಿಗೆ ನಡೆದುಕೊಳುತ್ತಿದ್ದ ರೀತಿಯೇ ಅಪ್ಪುವನ್ನು, ಎಲ್ಲರ ಹೃದಯದಲ್ಲಿ ಇನ್ನೂ ಜೀವಂತವಾಗಿರಿಸಲು ಮುಖ್ಯ ಕಾರಣ ಎಂದರೇ ತಪ್ಪಾಗದು. ನಿಜಕ್ಕೂ ಪುನೀತ್​ ರಾಜ್​ ಕುಮಾರ್​ ಇನ್ನಿಲ್ಲಾ ಎಂಬ ಸುದ್ದಿ ತಿಳಿದ ಕೂಡಲೇ ಬಹಳಷ್ಟು ಪತ್ರಕರ್ತರು, ವರದಿಗಾರರು ಭಾವುಕರಾಗಿಯೇ ವರದಿ ಮಾಡಿದ್ದಾರೆ. ನಿರೂಪಕ-ನಿರೂಪಕಿಯರು ಅಳುತ್ತಲೇ ಸುದ್ದಿ ಓದಿದ್ದಾರೆ. ಇದಕ್ಕೆ ಕಾರಣ ಅಪ್ಪು ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ, ಎಲ್ಲರಿಗೂ ತೋರುತ್ತಿದ್ದ ಆತ್ಮೀಯತೆ, ಮತ್ತು ಗೌರವ.

ಯಾವತ್ತೂ ಅವರು ವರದಿಗಾರರ ಜೊತೆ ಮುನಿಸಿಕೊಂಡವರು ಅಲ್ಲ. ಫೋನಿಗೆ ಸಿಗದೇ ಸತಾಯಿಸಿದವರೂ ಅಲ್ಲ. ಮಿಸ್ಡ್ ಕಾಲ್ ಇದ್ದರೂ, ವಾಪಸ್ಸು ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಅವರು ನಮ್ಮವರೇ ಆಗಿದ್ದರು. ಈ ಪ್ರೀತಿ ಮತ್ತೆಂದು ಸಿಗದು. ಹೀಗಾಗಿ, ಅವರ ಜೊತೆಗಿನ ಒಡನಾಟವನ್ನು ದಾಖಲಿಸಬೇಕು ಮತ್ತು ಈ ಮೂಲಕ ಅವರ ಜೀವನವನ್ನು ಅಕ್ಷರ ರೂಪಕ್ಕೆ ಇಳಿಸಬೇಕು ಎನ್ನುವ ಉದ್ದೇಶದಿಂದ ‘ನಾನೇ ರಾಜಕುಮಾರ’ ಹೆಸರಿನಲ್ಲಿ ಅಪ್ಪು ಬಯೋಗ್ರಫಿಯೊಂದು ತಯಾರಾಗಿದೆ. ಇದೊಂದು ರೀತಿಯಲ್ಲಿ ಸಿನಿಮಾ ಪತ್ರಕರ್ತರ ಪರವಾಗಿ ಬರಹಗಾರರಾದ ಶರಣು ಹುಲ್ಲೂರು ಸಲ್ಲಿಸುತ್ತಿರುವ ಪುಸ್ತಕದ ಗೌರವ ಎಂದರೇ ತಪ್ಪಿಲ್ಲ.

ಪುಸ್ತಕ ಬರವಣೆಗೆಯ ಯೋಚನೆ ಬಂದಿದ್ದು ಹೇಗೆ ಪುಸ್ತಕದ ಬರವಣಿಗೆ ಶುವಾಗಿದ್ದು ಹೇಗೆ ಎಂಬುದಕ್ಕೆ ಲೇಖಕರು ನೀಡಿದ ಉತ್ತರ ಹೀಗೆ:

ಇಂಥದ್ದೊಂದು ಪುಸ್ತಕ ಬರೆಯಲು ಕಾರಣವಾಗಿದ್ದು 2 ಸೆಪ್ಟಂಬರ್ 2020. ನಾನು ಸುದೀಪ್ ಅವರ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಬರೆದಾಗ ಅದನ್ನು ಪ್ರೀತಿಯಿಂದ ಬಿಡುಗಡೆ ಮಾಡಿದ್ದು ಪುನೀತ್ ರಾಜ್ ಕುಮಾರ್. ಸುದೀಪ್ ಹುಟ್ಟು ಹಬ್ಬದಂದು ಅವರು ಪುಸ್ತಕ ಬಿಡುಗಡೆ ಮಾಡಿದಾಗ ಖ್ಯಾತ ನಿರ್ಮಾಪಕರಾದ ಜಾಕ್ ಮಂಜು ‘ಮುಂದಿನ ಪುಸ್ತಕವನ್ನು ಅಪ್ಪು ಅವರದ್ದೇ ಮಾಡಿ ಎಂದರು.

ಅಂದು ವೀರಕಪುತ್ರ ಶ್ರೀನಿವಾಸ್ ಕೂಡ ಅಲ್ಲೇ ಇದ್ದರು. ‘ಅಯ್ಯೋ ನನ್ನ ಪುಸ್ತಕವಾ ಬೇಡ’ ಎಂದವರು, ಎಲ್ಲರ ಒತ್ತಾಯಕ್ಕೆ ಮಣಿದ ಅಪ್ಪು ಸರ್ ಒಪ್ಪಿಕೊಂಡಿದ್ದರು. ಅಲ್ಲಿಂದ ನನ್ನ ಕೆಲಸವನ್ನು ಶುರು ಮಾಡಿದೆ. ನಂತರ ಅವರ ಭೇಟಿಗಾಗಿ ಹಲವು ಬಾರಿ ಕರೆ ಮಾಡಿದೆ. ಆದರೇ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆರು ತಿಂಗಳ ನಂತರ ಶೆರ್ಟನ್ ಹೋಟೆಲ್​ನಲ್ಲಿ ನಮ್ಮಿಬ್ಬರ ಭೇಟಿ ಆಯಿತು.

‘ನಾನು ಬೇಕು ಅಂತಾನೇ ನಿಮ್ಮ ಕರೆ ಸ್ವೀಕರಿಸಲಿಲ್ಲ. ನಾನೇನು ಸಾಧನೆ ಮಾಡಿಲ್ಲ. ಅಪ್ಪಾಜಿ ಮತ್ತು ಅಮ್ಮನ ಪುಸ್ತಕದ ಜೊತೆ ನನ್ನ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ. ನೀವೆ ಒಮ್ಮೆ ಯೋಚಿಸಿ ನೋಡಿ’ ಎಂದು ನಿರಾಸೆ ಮಾಡಿಬಿಟ್ಟರು. ಆದರೂ, ನಾನು ನನ್ನ ಹಠ ಬಿಡಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಲೇ ಇದ್ದೆ. ದಿಢೀರ್ ಆಗಿ ಅಪ್ಪು ಹೊರಟೇ ಬಿಟ್ಟರು. ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರ ಸಾಧನೆಗಳ ಪಟ್ಟಿ ಒಂದೊಂದೇ ಬರ ತೊಡಗಿದವು. ನಾಡೇ ಕಣ್ಣೀರಿಟ್ಟಿತು. ಆಗ ಮತ್ತೆ ನನಗೆ ನೆನಪಾಗಿದ್ದು ಅಪ್ಪು ಹೇಳಿದ ಮಾತು, ಅಪ್ಪಾಜಿ ಮತ್ತು ಅಮ್ಮನ ಜೊತೆ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ ಎನ್ನುವುದು. ಅವರ ಈ ಮಾತನ್ನು ಅಭಿಮಾನಿಗಳು ಸುಳ್ಳು ಮಾಡಿದ್ದರು. ತಾವು ಅಪ್ಪ ಅಮ್ಮನಷ್ಟೇ ಸಾಧನೆಯ ಹಾದಿಯಲ್ಲಿದ್ದರು ಎಂಬುದನ್ನು ತೋರಿಸಿದ್ದರು.

ಮತ್ತೆ ನನ್ನ ಕನಸಿಗೆ ಮರುಜೀವ ಬಂತು. ಅಷ್ಟರಲ್ಲಿ ಕನ್ನಡದ ಖ್ಯಾತ ಪ್ರಕಾಶನ ಸಂಸ್ಥೆ ಜಮೀಲ್ ಸಾವಣ್ಣ ಪುಸ್ತಕದ ಬಗ್ಗೆ ವಿಚಾರಿಸಿದರು. ಮತ್ತೆ ಎಲ್ಲ ಸಂಗತಿಗಳನ್ನು ಒಟ್ಟಾಗಿಸಿ ಪುಸ್ತಕ ಮಾಡಿದೆ. ಎಂದು ತಾವು ಪುಸ್ತಕ ಬರೆಯಲು ಪ್ರಾರಂಭಿಸಿದರ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಖ್ಯಾತ ಬರಹಗಾರ ಜೋಗಿ ‘ನಾನೇ ರಾಜಕುಮಾರ’ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಮತ್ತೆ ಸಿನಿಮಾ ರಂಗಕ್ಕೆ ಕಮ್​ಬ್ಯಾಕ್​ ಮಾಡಿದ ಬಗ್ಗೆ ಮೊದಲು ಸುದ್ದಿಯನ್ನು ಪ್ರಕಟಿಸಿ, ಮೊದಲ ಸಂದರ್ಶನ ಮಾಡಿದ್ದ ಹಿರಿಯ ಪತ್ರಕರ್ತರಾದ ಮುರಳೀಧರ್ ಖಜಾನೆ ಅವರ ಮುನ್ನುಡಿ ಈ ಪುಸ್ತಕಕ್ಕಿದೆ. ಇನ್ನೂ ಲೇಖಕರು ಡಾ.ಅಂಬರೀಶ್, ಡಾ.ವಿಷ್ಣುವಧರ್ನ್, ಕಿಚ್ಚ ಸುದೀಪ್ ಹಾಗೂ ಸಂಚಾರಿ ವಿಜಯ್ ಅವರ ಪುಸ್ತಕದ ನಂತರ ಸಿನಿಮಾ ರಂಗದವರ ಕುರಿತಾಗಿ ತಾನು ಬರೆದ ಮತ್ತೊಂದು ಪುಸ್ತಕ ‘ನಾನೇ ರಾಜಕುಮಾರ’ ಎಂದು ಹೇಳಿದ್ದಾರೆ.

ಪುಸ್ತಕದ ಕುರಿತು: ಇದು ಪುನೀತ್ ರಾಜ್ ಕುಮಾರ್ ಕುರಿತಾಗಿ ಬರುತ್ತಿರುವ ಮೊದಲ ಬಯೋಗ್ರಫಿ ಆಗಿದೆ. ಹಾಗೆಂದ ಮಾತ್ರಕ್ಕೆ ಇದರಲ್ಲಿ ಬರಿ ಪುನೀತ್ ಜೀವನಕ್ಕೆ ಸಂಬಂಧಿಸಿದ ವಿಷಯಗಳು ಮಾತ್ರವಿಲ್ಲ. ಅವರ ಬದುಕನ್ನು ಓದುತ್ತಾ, ಅದರೊಂದಿಗೆ ಸಿನಿಮಾ ಇತಿಹಾಸವನ್ನು ಓದಿಸಿಕೊಂಡು ಹೋಗುವಂತಹ ಪುಸ್ತಕ ಇದಾಗಿದೆ. ಪುನೀತನ ವೃತ್ತಿ ಮತ್ತು ಖಾಸಗಿ ಜೀವನದ ಬಗೆಗೆ ಅಪರೂಪದ ವಿಷಯಗಳನ್ನು ಮತ್ತು ಛಾಯಾಚಿತ್ರಗಳನ್ನು ಈ ಪುಸ್ತಕ ಒಳಗೊಂಡಿದೆ. ಬಾಲ್ಯ, ಬಾಲ್ಯದಲ್ಲಿ ನಟಿಸಿದ ಸಿನಿಮಾಗಳು ಮತ್ತು ಅರಸು ಚಿತ್ರದಿಂದ ಜೇಮ್ಸ್ ಚಿತ್ರದವರೆಗಿನ ಸಮಗ್ರ ನೋಟ ಇದರಲ್ಲಿದೆ. ಅವರ ಖಾಸಗಿ ಬದುಕಿನ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು 264 ಪುಟಗಳ ಸಮಗ್ರ ಜೀವನ ಚರಿತ್ರೆಯ ಪುಸ್ತಕ ಇದಾಗಿದ್ದು, ಒಟ್ಟು 34 ಅಧ್ಯಾಯಗಳನ್ನು ಇದು ಒಳಗೊಂಡಿದೆ. ಅತೀ ಶೀಘ್ರದಲ್ಲೇ ಪುಸ್ತಕ ಬಿಡುಗಡೆಯಾಗಿ ಅಭಿಮಾನಿಗಳ ಕೈ ಸೇರಲಿದೆ.

News First Live Kannada


Leave a Reply

Your email address will not be published. Required fields are marked *