ಪುನೀತ್​ ಕಂಠದಲ್ಲಿ ಮೂಡಿ ಬಂದಿದ್ದ ‘ಬಾಡಿ ಗಾಡ್’ ಹಾಡು ರಿಲೀಸ್​; ಅಪ್ಪು ಜೀವನಕ್ಕೆ ಹತ್ತಿರವಾಗಿದೆ ಸಾಹಿತ್ಯ | Body God Kannada Movie song sung by Puneeth Rajkumar released


ಪುನೀತ್​ ಕಂಠದಲ್ಲಿ ಮೂಡಿ ಬಂದಿದ್ದ ‘ಬಾಡಿ ಗಾಡ್’ ಹಾಡು ರಿಲೀಸ್​; ಅಪ್ಪು ಜೀವನಕ್ಕೆ ಹತ್ತಿರವಾಗಿದೆ ಸಾಹಿತ್ಯ

ಬಾಡಿ ಗಾಡ್​ ಸಿನಿಮಾ

ಪುನೀತ್​ ರಾಜ್​ಕುಮಾರ್​ ಅವರು ನಟನೆ ಜತೆಗೆ ಗಾಯಕನಾಗಿಯೂ ಗುರುತಿಸಿಕೊಂಡಿದ್ದರು. ಹಲವು ಸಿನಿಮಾಗಳಲ್ಲಿ ಅವರು ಹಾಡಿದ್ದರು. ಪುನೀತ್​ ನಮ್ಮನ್ನು ಅಗಲಿ ತಿಂಗಳಾಗಿದೆ. ಅವರ ಕಂಠದಲ್ಲಿ ಮೂಡಿ ಬಂದ ಹಾಡೊಂದು ಈಗ ರಿಲೀಸ್​ ಆಗಿದೆ. ಈ ಹಾಡು ಪುನೀತ್​ ಲೈಫ್​ಗೆ ಹತ್ತಿರವಾಗಿದೆ ಅನ್ನೋದು ವಿಶೇಷ. ಪುನೀತ್ ರಾಜ್​​ಕುಮಾರ್ ‘ಬಾಡಿ ಗಾಡ್’ ಚಿತ್ರಕ್ಕಾಗಿ ‘ಆರೇಸ ಡಂಕನಕ..’ ಎಂಬ ಹಾಡನ್ನು ಹಾಡಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆಯಾಗಿದೆ. ಎಸ್.ಕೆ.ಎಸ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಈ ಮೊದಲು ಈ ಹಾಡನ್ನು ರಾಘವೇಂದ್ರ ರಾಜ್​​ಕುಮಾರ್ ಬಿಡುಗಡೆ ಮಾಡಿದ್ದರು.

‘ಇಷ್ಟು ದಿನ ನನ್ನ ತಮ್ಮನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಇಂದು ಗೀತಾಂಜಲಿ ಸಲ್ಲಿಸಿದ್ದೇನೆ. ಅವನು ಇಲ್ಲ ಎಂದು ಕೊರಗುವುದು ಬೇಡ. ಅವನು ಹಾಡಿರುವ ಹಾಡಿನಲ್ಲಿ, ಮಾಡಿರುವ ಕೆಲಸದಲ್ಲಿ ಅವನಿದ್ದಾನೆ. ನಿರ್ದೇಶಕ ಪ್ರಭು ಶ್ರೀನಿವಾಸ್ ನನಗೆ ಮೊದಲಿನಿಂದಲೂ ಪರಿಚಯ. ಅವರ ಈ ಪ್ರಯತ್ನಕ್ಕೆ ಶುಭವಾಗಲಿ’ ಎಂದು ರಾಘಣ್ಣ ಹಾರೈಸಿದ್ದರು.

ಸಿನಿಮಾ ನಿರ್ದೇಶಕ ಪ್ರಭು ಶ್ರೀನಿವಾಸ್ ಮಾತನಾಡಿ, ‘ಅಪ್ಪು ಸರ್ ಅವರನ್ನು ಭೇಟಿಯಾಗಿ ಈ ಹಾಡನ್ನು ಹಾಡಲು ಕೇಳಿದೆ. ‘ಇದನ್ನು ತುಂಬಾ ಹೈಪಿಚ್​​ನಲ್ಲಿ ಹಾಡಬೇಕು. ನನ್ನ ಧ್ವನಿ ಸರಿ ಹೊಂದುತ್ತದೆಯಾ? ಸರಿ ಹೊಂದದಿದ್ದಲ್ಲಿ ಬೇರೆ ಅವರ ಬಳಿ ಹಾಡಿಸಿ’ ಎಂದಿದ್ದರು. ಇಲ್ಲ ಈ ಹಾಡನ್ನು ನೀವೇ ಹಾಡಬೇಕು ಎಂದು ಕೇಳಿದೆ. ಅವರ ಸ್ಟುಡಿಯೋದಲ್ಲೇ ಈ ಹಾಡನ್ನು ಹಾಡಿದರು. ನನಗೆ ತಿಳಿದ ಹಾಗೆ ಇದು ಅವರು ಹಾಡಿರುವ ಕೊನೆಯ ಗೀತೆ ಅನಿಸುತ್ತದೆ.‌ ಈ ಹಾಡಿನಲ್ಲಿ‌ ಬರುವ ಕೆಲವು ಸಾಲುಗಳು ಪುನೀತ್ ಅವರಿಗೆ ಹತ್ತಿರವಾಗಿದೆ. ‘ಬಾಡಿ ಗಾಡ್’ ಕೆಲಸ ಮುಗಿದಿದ್ದು, ಜನವರಿಯಲ್ಲಿ ತೆರೆಗೆ ತರುತ್ತೇವೆ’ ಎಂದರು.

ನಟ ಮನೋಜ್​ ಮಾತನಾಡಿ, ‘ನನಗೆ ಅಪ್ಪು ಅವರು ಹಾಡುವ ಹಾಡಿಗೆ ಡ್ಯಾನ್ಸ್ ಮಾಡಬೇಕೆಂದು ಆಸೆಯಿತ್ತು. ಈ ಹಾಡಿನ ಬಗ್ಗೆ ಮಾತನಾಡಲು ನಿರ್ದೇಶಕರೊಂದಿಗೆ ಅಪ್ಪು ಸರ್ ಮನೆಗೆ ಹೋದಾಗ, ಅವರ ಸ್ವಾಗತ ನೋಡಿ ನನಗೆ ಆಶ್ಚರ್ಯವಾಯಿತು.‌ ‘ ಬನ್ನಿ ಮನೋಜ್. ಹೇಗಿದ್ದೀರಿ ಎಂದು ಅದ್ಭುತವಾಗಿ ಸ್ವಾಗತಿಸಿದ್ದರು’ ಎಂಬುದಾಗಿ ಹೇಳಿದರು. ನಟಿ ದೀಪಿಕಾ ಅವರು ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದಾರೆ.

ಮಠ ಗುರುಪ್ರಸಾದ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಪದ್ಮಜಾರಾವ್, ನಿರಂಜನ್, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕರಣ್ ಬಿ ಕೃಪ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೇಲ್ ಮುರುಗನ್ ಅವರ ಛಾಯಾಗ್ರಹಣವಿದೆ. ಮತ್ತೊಂದು ಗೀತೆಗೆ ವೆಂಕಟೇಶ್​ ಕುಲಕರ್ಣಿ ಅವರ ಸಾಹಿತ್ಯವಿದೆ.

 

 

TV9 Kannada

,

Leave a Reply

Your email address will not be published. Required fields are marked *