ಪುನೀತ್​ ಕಂಡ ಕನಸಿನ ಟೈಟಲ್​ ಟೀಸರ್ ರಿಲೀಸ್​​ ದಿನಾಂಕ ಘೋಷಣೆ ಮಾಡಿದ ಅಶ್ವಿನಿ | Puneeth Rajkumar Documentary on Karnataka Nature Gandhada Guwi Tittle teaser on December 12th


ಪುನೀತ್​ ಕಂಡ ಕನಸಿನ ಟೈಟಲ್​ ಟೀಸರ್ ರಿಲೀಸ್​​ ದಿನಾಂಕ ಘೋಷಣೆ ಮಾಡಿದ ಅಶ್ವಿನಿ

ಪುನೀತ್​

ಪುನೀತ್​ ರಾಜ್​ಕುಮಾರ್ ಸ್ಯಾಂಡಲ್​ವುಡ್​ ಬಗ್ಗೆ ಕಂಡ ಕನಸುಗಳು ಹಲವು. ಅವರು ಹೊಸ ರೀತಿಯ ಸಿನಿಮಾದಲ್ಲಿ ನಟಿಸೋಕೆ ನಿರ್ಧರಿಸಿದ್ದರು ಎಂದು ಅವರ ಆಪ್ತರು ಹೇಳಿದ್ದಾರೆ. ಈ ಮಧ್ಯೆ ಪಿಆರ್​ಕೆ ಪ್ರೊಡಕ್ಷನ್​ ಅಡಿಯಲ್ಲಿ ಸಾಕಷ್ಟು ಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡೋಕೆ ಪಣತೊಟ್ಟಿದ್ದರು. ಇದರ ಜತೆಗೆ ಕರ್ನಾಟಕದ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿದ್ದರು. ಇದರ ಟೈಟಲ್​ ಟೀಸರ್​ ಡಿಸೆಂಬರ್​ 6ಕ್ಕೆ ​ ರಿಲೀಸ್​ ಆಗಲಿದೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಬಗ್ಗೆ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಘೋಷಣೆ ಮಾಡಿದ್ದಾರೆ.

‘ವೈಲ್ಡ್​ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್​ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್​ ಮಾಡಲಾಗಿತ್ತು. ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ. ಪುನೀತ್​ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಟೀಸರ್​ ನವೆಂಬರ್ 1ರಂದು ರಿಲೀಸ್​ ಆಗಬೇಕಿತ್ತು. ನವೆಂಬರ್​ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್​ ಮಾಡಬೇಕು ಎಂದು ಪುನೀತ್​ ಕನಸು ಕಂಡಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಈ ಕಾರಣಕ್ಕೆ ಆ ಟೀಸರ್​ ರಿಲೀಸ್​ ಆಗಿಲ್ಲ. ಈಗ ಅದನ್ನು ಡಿಸೆಂಬರ್​ 6ಕ್ಕೆ ರಿಲೀಸ್​ ಮಾಡಲಾಗುತ್ತಿದೆ. ‘ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ’ ಎಂದು ಅಶ್ವಿನಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಟ್ವೀಟ್​ ಮಾಡಿದ್ದ ಅಶ್ವಿನಿ ಪುನೀತ್​,  ‘ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಅ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದು ಬರೆದುಕೊಂಡಿದ್ದಾರೆ.

‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪುನೀತ್​ ಸಾಯುವ ಮೊದಲು ಪೋಸ್ಟ್​ ಮಾಡಿದ್ದರು.

TV9 Kannada


Leave a Reply

Your email address will not be published. Required fields are marked *